ಉರ್ದು ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಪ್ರೋತ್ಸಾಹ ನೀಡಬೇಕು: ಸಚಿವ ಝಮೀರ್‌ ಅಹ್ಮದ್‌ ಖಾನ್

Update: 2019-01-29 14:15 GMT

ಬೆಂಗಳೂರು, ಜ.29: ರಾಜ್ಯದಲ್ಲಿರುವ ಉರ್ದು ಶಾಲೆಗಳಲ್ಲಿ ಮಕ್ಕಳಿಗೆ ಉರ್ದು ಭಾಷೆಯೊಂದಿಗೆ, ಕನ್ನಡ ಭಾಷೆಯನ್ನು ಕಲಿಸಲು ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಮಕ್ಕಳು ಮುಖ್ಯವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್. ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಮಂಗಳವಾರ ನಗರದ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಗುಲಿಸ್ತಾನ್ ಶಾದಿಮಹಲ್‌ನಲ್ಲಿ ರಾಜ್ಯ ಉರ್ದು ಅಕಾಡಮಿ ವತಿಯಿಂದ ಆಯೋಜಿಸಿದ್ದ ‘ಬೆಂಗಳೂರು ಉತ್ತರ ತಾಲೂಕಿನ ಉರ್ದು ಶಾಲಾ ಶಿಕ್ಷಕರ ತರಬೇತಿ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉರ್ದು ನಮ್ಮ ಮಾತೃ ಭಾಷೆ. ಕನ್ನಡ ನಮ್ಮ ರಾಜ್ಯ ಭಾಷೆ. ಎರಡು ಭಾಷೆಗಳನ್ನು ಮಕ್ಕಳಿಗೆ ಕಲಿಸುವ ಅಗತ್ಯವಿದೆ. ಉರ್ದು ಅಕಾಡಮಿಗೆ ಹೊಸ ಸಮಿತಿ ನೇಮಕವಾದ ಬಳಿಕ ಅದರ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಅವರು ಹೇಳಿದರು.

ಶಿಕ್ಷಕರ ಕೈಯಲ್ಲಿ ವಿದ್ಯಾರ್ಥಿಗಳ ಭವಿಷ್ಯವಿದೆ. ತಂದೆ, ತಾಯಿಯನ್ನು ಹೊರತುಪಡಿಸಿದರೆ, ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಮಹಿಳಾ ಶಿಕ್ಷಕರು ತಾಯಿಯ ಸ್ಥಾನದಲ್ಲಿ ನಿಂತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂದು ಝಮೀರ್‌ಅಹ್ಮದ್‌ಖಾನ್ ತಿಳಿಸಿದರು.

ಉರ್ದು ಭಾಷೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಮ್ಮ ಸಮುದಾಯದ ಬಹುಕಾಲದ ಬೇಡಿಕೆ ಉರ್ದು ಹಾಲ್ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. ಇದಲ್ಲದೆ, ಗುಲ್ಬರ್ಗ, ರಾಯಚೂರು ಹಾಗೂ ಬೀದರ್ ಜಿಲ್ಲೆಯಲ್ಲಿಯೂ ಉರ್ದು ಹಾಲ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿರುವ ಎಲ್ಲ ಉರ್ದು ಶಾಲೆಗಳ ಕಾರ್ಯ ನಿರ್ವಹಣೆ ಕುರಿತು ಸಮೀಕ್ಷೆ ನಡೆಸಲಾಗುವುದು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಬಜೆಟ್‌ನಲ್ಲಿ ಒದಗಿಸಲಾಗಿರುವ 3150 ಕೋಟಿ ರೂ.ಅನುದಾನದಲ್ಲಿ ಶೇ.50ರಷ್ಟು ಮೊತ್ತವನ್ನು ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್‌ಖಾನ್ ಮಾತನಾಡಿ, ಉರ್ದು ಶಿಕ್ಷಣದ ಜಾಗೃತಿ ಬಗ್ಗೆ ನಾವು ಹಲವಾರು ದಶಕಗಳಿಂದ ಮಾತನಾಡುತ್ತಿದ್ದೇವೆ. ಆದರೆ, ನಾವು ಮೂಡಿಸುತ್ತಿರುವ ಜಾಗೃತಿಯ ಪರಿಣಾಮ ಏನಾಗಿದೆ ಎಂಬುದರ ಕುರಿತು ಯಾರೊಬ್ಬರೂ ಗಮನ ಹರಿಸುತ್ತಿಲ್ಲ ಎಂದರು.

ಉರ್ದು ಭಾಷೆಯು ಯಾವುದೇ ಧರ್ಮಕ್ಕೆ ಸೀಮಿತವಾದುದ್ದಲ್ಲ. 2011ರ ಜನಗಣತಿ ಪ್ರಕಾರ ದೇಶದಲ್ಲಿ 13.82 ಕೋಟಿ ಮುಸ್ಲಿಮರಿದ್ದಾರೆ. ಈ ಪೈಕಿ ಕೇವಲ 5 ಕೋಟಿ ಮುಸ್ಲಿಮರ ಮಾತೃ ಭಾಷೆ ಉರ್ದು ಆಗಿದೆ. ಇನ್ನುಳಿದ 8 ಕೋಟಿ ಮುಸ್ಲಿಮರ ಮಾತೃ ಭಾಷೆ ಬೇರೆಯಾಗಿದೆ. ಅದೇ ರೀತಿ, ನಮ್ಮ ರಾಜ್ಯದಲ್ಲಿ 85 ಲಕ್ಷ ಮುಸ್ಲಿಮರಿದ್ದು, 55 ಲಕ್ಷ ಮಂದಿಯ ಮಾತೃ ಭಾಷೆ ಉರ್ದು ಆಗಿದೆ ಎಂದು ಅವರು ಹೇಳಿದರು.

ಪ್ರತಿ ವರ್ಷ ಉರ್ದು ಭಾಷೆಯನ್ನು ಕಲಿಯುವವರ ಸಂಖ್ಯೆ ಇಳಿಮುಖವಾಗುತ್ತಿದೆ. ದೇಶದಲ್ಲಿ ಹಿಂದಿ ಭಾಷೆಯನ್ನು ಹೊರತುಪಡಿಸಿ, ಅತೀ ಹೆಚ್ಚು ಬಳಸಲ್ಪಡುವ ಭಾಷೆ ಉರ್ದು ಎಂದು ಬಿಂಬಿಸಲಾಗುತ್ತಿತ್ತು. ಆದರೆ, ಇತ್ತೀಚಿಗಿನ ಅಂಕಿ ಅಂಶಗಳನ್ನು ಗಮನಿಸಿದರೆ, ಉರ್ದು ಭಾಷೆಯು ದ್ವಿತೀಯ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದೆ ಎಂದು ಅವರು ಹೇಳಿದರು.

ಮಾಹಿತಿ ತಂತ್ರಜ್ಞಾನದ ಈ ಕಾಲದಲ್ಲಿ ಉರ್ದು ಅಕಾಡಮಿಯು ಉರ್ದು ಭಾಷೆಯ ಬೆಳವಣಿಗೆಗಾಗಿ ಆಧುನಿಕ ಮಾರ್ಗಗಳನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ. ಮೊಬೈಲ್ ಆ್ಯಪ್, ವಾಟ್ಸಪ್, ಫೇಸ್‌ಬುಕ್ ಮೂಲಕ ಉರ್ದು ಭಾಷೆಯನ್ನು ಯಾವ ರೀತಿ ಬೆಳೆಸಬಹುದು ಎಂಬುದರ ಕುರಿತು ಗಮನ ಹರಿಸಬೇಕು ಎಂದು ರಹ್ಮಾನ್‌ ಖಾನ್ ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯ ಉರ್ದು ಅಕಾಡಮಿಯ ವೆಬ್‌ಸೈಟ್ www.karnatakaurduacademy.org ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಉರ್ದು ಅಕಾಡಮಿ ಅಧ್ಯಕ್ಷ ಮುಬೀನ್‌ ಮುನವ್ವರ್, ಸದಸ್ಯರಾದ ಮುನೀರ್‌ ಅಹ್ಮದ್ ಆಝಾದ್, ಶಾಹಿದ್ ಖಾಝಿ, ಹಿರಿಯ ಪತ್ರಕರ್ತ ಇಫ್ತಿಖಾರ್ ಅಹ್ಮದ್ ಶರೀಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News