ಕರ್ತವ್ಯ ಲೋಪ ಆರೋಪ: ನಾಲ್ವರು ಪೊಲೀಸರ ಅಮಾನತು

Update: 2019-01-29 16:23 GMT

ಬೆಂಗಳೂರು, ಜ.29: ಕರ್ತವ್ಯ ಲೋಪವೆಸಗಿರುವ ಆರೋಪದಡಿ ಇಬ್ಬರು ಪೊಲೀಸ್ ಪೇದೆ ಸೇರಿದಂತೆ ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.

ನೆಲಮಂಗಲ ಪಟ್ಟಣ ಠಾಣೆ ಗುಪ್ತಚರ ಪೇದೆ ಚನ್ನೇಗೌಡ ಮತ್ತು ಪೊಲೀಸ್ ವಾಹನ ಚಾಲಕ ಜರೀಫ್ ಹಾಗೂ ನೆಲಮಂಗಲ ಪಟ್ಟಣ ಠಾಣೆ ಪೇದೆ ಬಸವರಾಜು, ಗ್ರಾಮಾಂತರ ಠಾಣೆ ಪೇದೆ ಗಿರಿಜೇಶ್ ಅಮಾನತುಗೊಂಡವರು ಎಂದು ತಿಳಿದುಬಂದಿದೆ.

ಜ.4ರಂದು ನೆಲಮಂಗಲ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಬೈರವ ಲಾಡ್ಜ್‌ಗೆ ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರು ಬಂದು ಎರಡು ಕೊಠಡಿ ಪಡೆದುಕೊಂಡಿದ್ದರು. ತದನಂತರ ಹೊರಗಿನಿಂದ ಊಟ ತಂದು ಒಂದೇ ಕೊಠಡಿಯಲ್ಲಿ ಕುಳಿತು ನಾಲ್ವರೂ ಒಟ್ಟಾಗಿ ಊಟ ಮಾಡುತ್ತಿದ್ದಾಗ ಪಟ್ಟಣ ಠಾಣೆಯ ಪೇದೆ ಚನ್ನೇಗೌಡ ಮತ್ತು ಜೀಪು ಚಾಲಕ ಜರೀಫ್ ಏಕಾಏಕಿ ನುಗ್ಗಿ ಇಬ್ಬರು ಯುವತಿಯರನ್ನು ಕೊಠಡಿಯಲ್ಲೇ ಕೂಡಿಹಾಕಿ ಇಬ್ಬರು ಯುವಕರನ್ನು ಠಾಣೆಗೆ ಕರೆದೊಯ್ದಿದ್ದರು ಎಂದು ತಿಳಿದುಬಂದಿದೆ.

ಠಾಣೆಯಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಕೆಲ ಕಾಲ ಈ ಇಬ್ಬರು ಯುವಕರನ್ನು ಠಾಣೆಯಲ್ಲೇ ಕೂರಿಸಿ ನಂತರ ಬಿಟ್ಟು ಕಳುಹಿಸಿದ್ದರು. ಆದರೆ, ಇಬ್ಬರು ಪೇದೆಗಳು ಲಾಡ್ಜ್‌ಗೆ ಹೋಗಿ ಯುವತಿಯರಿದ್ದ ಕೊಠಡಿಯಲ್ಲಿ ಒಂದು ಗಂಟೆ ಕಾಲ ಇದ್ದು, ತದನಂತರ ಕಾರು ಮಾಡಿ ಯುವತಿಯರನ್ನು ಕಳುಹಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮಾಂತರ ಠಾಣೆ ಎಸ್ಪಿ ಶಿವಕುಮಾರ್ ಅವರು ಡಿವೈಎಸ್ಪಿ ಪಾಂಡುರಂಗ ಅವರಿಗೆ ಮಾಹಿತಿ ನೀಡಲು ಸೂಚಿಸಿದ್ದರು. ಇದರ ಅನ್ವಯ ವರದಿಯನ್ನು ಎಸ್ಪಿ ಅವರಿಗೆ ನೀಡಿದ್ದರು ಎನ್ನಲಾಗಿದೆ.

ಪ್ರಾಥಮಿಕ ವರದಿ ಆಧಾರದ ಮೇರೆಗೆ ಗುಪ್ತಚರ ಪೇದೆ ಚನ್ನೇಗೌಡ ಹಾಗೂ ಜೀಪು ಚಾಲಕ ಜರೀಫ್‌ರನ್ನು ಅಮಾನತು ಮಾಡಿದ್ದರಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೇದೆ ಬಸವರಾಜು ಹಾಗೂ ಗಿರಿಜೇಶ್‌ನನ್ನು ಅಮಾನತು ಮಾಡಿ ಎಸ್ಪಿ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News