ಮಿತ್ರಪಕ್ಷಗಳ ಮುನಿಸು: ಈಶಾನ್ಯದಲ್ಲಿ ಬಿಜೆಪಿ ಏಕಾಂಗಿ

Update: 2019-01-30 04:33 GMT

ಗುವಾಹತಿ, ಜ. 30: ಪೌರತ್ವ (ತಿದ್ದುಪಡಿ) ಮಸೂದೆ ವಿರುದ್ಧ ಐಕ್ಯ ಹೋರಾಟಕ್ಕೆ ಮುಂದಾಗಿರುವ ಈಶಾನ್ಯ ರಾಜ್ಯಗಳ 10 ಪ್ರಮುಖ ರಾಜಕೀಯ ಪಕ್ಷಗಳು, ಸಂಸತ್ತಿನ ಒಳಗೆ ಹಾಗೂ ಹೊರಗೆ ಈ ಮಸೂದೆ ವಿರುದ್ಧ ಹೋರಾಟ ನಡೆಸುವ ನಿರ್ಧಾರ ಪ್ರಕಟಿಸಿವೆ.

ಇದರಲ್ಲಿ ಏಳು ಬಿಜೆಪಿ ಮಿತ್ರಪಕ್ಷಗಳಾಗಿದ್ದರೆ, ಸಂಯಕ್ತ ಜನತಾದಳ ರಾಷ್ಟ್ರಮಟ್ಟದಲ್ಲಿ ಎನ್‌ಡಿಎ ಪಾಲುದಾರ ಪಕ್ಷವಾಗಿದೆ. ಇದರಿಂದ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಒಬ್ಬಂಟಿಯಾಗಿದೆ.

ಉಳಿದ ಮೂರು ಪಕ್ಷಗಳೆಂದರೆ ಈ ಮೊದಲು ಎನ್‌ಡಿಎ ತೆಕ್ಕೆಯಲ್ಲಿದ್ದ ಅಸ್ಸಾಂ ಗಣ ಪರಿಷತ್ ಮತ್ತು ನಾಗಾ ಪೀಪಲ್ಸ್ ಫ್ರಂಟ್. ಕೆಎಚ್‌ಎನ್‌ಎಎಂ ಎಂಬ ಇನ್ನೊಂದು ಪಕ್ಷ ಎನ್‌ಡಿಎ ಆಡಳಿತದ ಮೇಘಾಲಯದಲ್ಲಿ ಪ್ರಭಾವ ಹೊಂದಿದೆ.

ಎಜಿಪಿ ಮತ್ತು ಎನ್‌ಪಿಎಫ್ ಆಯೋಜಿಸಿದ್ದ ಸಭೆಯಲ್ಲಿ, ಎಲ್ಲ ಪಕ್ಷಗಳು ಒಗ್ಗೂಡಿ, ರಾಜ್ಯಸಭೆಯಲ್ಲಿ ಪೌರತ್ವ ಮಸೂದೆಯ ತಿದ್ದುಪಡಿ ಪ್ರಯತ್ನವನ್ನು ಸೋಲಿಸಲು ಪಣತೊಟ್ಟಿವೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನದ ಅಲ್ಪಸಂಖ್ಯಾತ ಮುಸ್ಲಿಮೇತರರಿಗೆ ಪೌರತ್ವ ನೀಡುವ ವಿವಾದಿತ ಮಸೂದೆಗೆ ಲೋಕಸಭೆ ಈಗಾಗಲೇ ಒಪ್ಪಿಗೆ ನೀಡಿದೆ.

ಸಭೆಯಲ್ಲಿ ಎನ್‌ಡಿಎ ಘಟಕ ಪಕ್ಷವಾದ ಮಿಜೋರಾಂನ ಮಿಜೋ ನ್ಯಾಷನಲ್ ಫ್ರಂಟ್, ಎನ್‌ಪಿಪಿ, ಯುನೈಟೆಡ್ ಡೆಮೋಕ್ರಟಿಕ್ ಪಾರ್ಟಿ, ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ಮತ್ತು ಮೇಘಾಲಯದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ನಾಗಾಲ್ಯಾಂಡ್‌ನ ನ್ಯಾಷನಲಿಸ್ಟ್ ಡೆಮೋಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ ಹಾಗೂ ತ್ರಿಪುರದ ಇಂಡಿಜೀನಿಯಸ್ ಪೀಪಲ್ಸ್ ಫ್ರಂಟ್ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News