ಪಾಕ್ ಅಭಿಮಾನಿಗಳನ್ನು ಅಕ್ಷಯ್ ಕುಮಾರ್ ಹೊಗಳಿದ ವೀಡಿಯೊ ವೈರಲ್: ಟ್ವಿಟರ್ ನಲ್ಲಿ ಆಕ್ರೋಶ

Update: 2019-01-30 11:12 GMT

ಮುಂಬೈ, ಜ. 30: ನಟ ಅಕ್ಷಯ್ ಕುಮಾರ್ ವರ್ಷಗಳ ಹಿಂದೆ ನೀಡಿದ ಸಂದರ್ಶನವೊಂದರ ವೀಡಿಯೊ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು ಅದರಲ್ಲಿ ನಟ ತನ್ನ ಚಿತ್ರಗಳಿಗೆ ಪಾಕಿಸ್ತಾನಿ ಅಭಿಮಾನಿಗಳಿಂದ ದೊರೆಯುತ್ತಿರುವ ಬೆಂಬಲವನ್ನು ಮುಕ್ತಕಂಠದಿಂದ ಶ್ಲಾಘಿಸಿರುವುದು ಹಲವರಿಗೆ ಅಪಥ್ಯವಾಗಿ ಅವರು ನಟನನ್ನು ಟ್ರೋಲ್ ಮಾಡಿದ್ದರೆ ಇನ್ನು ಕೆಲವರು ನಟನ ಬೆಂಬಲಕ್ಕೆ ನಿಂತಿದ್ದಾರೆ.

''ನನ್ನ ಚಿತ್ರಗಳಿಗೆ ಪಾಕಿಸ್ತಾನದಲ್ಲಿ ಹೆಚ್ಚಿನ ಲಾಭವಾಗುತ್ತಿದೆ. ಆ ದೇಶದಲ್ಲಿ ನನಗೆ ದೊರಕುವಷ್ಟು ಪ್ರೀತಿ ಇತರೆಡೆ ಎಲ್ಲಿಯೂ ದೊರಕುತ್ತಿಲ್ಲ'' ಎಂದು ಅಕ್ಷಯ್ ಸಂದರ್ಶನದಲ್ಲಿ ಹೇಳಿದ್ದರು.

ಈ ವೀಡಿಯೊವನ್ನು ಮೊದಲು ಪೋಸ್ಟ್ ಮಾಡಿದ ಟ್ವಿಟ್ಟರಿಗನ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದ್ದರೆ ಇತರರು ತಮ್ಮ ಹ್ಯಾಂಡಲ್ ಗಳಿಂದ ಅದನ್ನು ಪೋಸ್ಟ್ ಮಾಡಿ ಅದಕ್ಕೆ ತಮ್ಮದೇ ವಿವರಣೆ ನೀಡುತ್ತಿದ್ದಾರೆ.

''ಅಕ್ಷಯ್ ಕುಮಾರ್ ಮುಂದಿನ ಹಂತದ ಜಾಗತಿಕ ನಾಗರಿಕ. ಅವರು ಕೆನಡಾದಲ್ಲಿ ವಾಸಿಸುತ್ತಾರೆ. ಪಾಕಿಸ್ತಾನದಿಂದ ಪ್ರೀತಿ ಪಡೆಯುತ್ತಾರೆ ಹಾಗೂ ಭಾರತದಲ್ಲಿ ರಾಷ್ಟ್ರಭಕ್ತಿ ಮಾರುತ್ತಾರೆ,'' ಎಂದು ಒಬ್ಬ ಟ್ವಿಟ್ಟರಿಗ ಪ್ರತಿಕ್ರಿಯಿಸಿದ್ದರೆ ಇನ್ನೊಬ್ಬರು ಅವರನ್ನು ''ಖಿಲಾಡಿ 420'' ಎಂದು ಬಣ್ಣಿಸಿದ್ದಾರೆ.

ಟೊರಂಟೋ ತಮ್ಮ ಮನೆ ಎಂದು ಅಕ್ಷಯ್ ಹೇಳುತ್ತಿರುವ ಇನ್ನೊಂದು ವೀಡಿಯೊ ಕೂಡ ವೈರಲ್ ಆಗಿದೆ. ಅಕ್ಷಯ್ ಕುಮಾರ್ ತಮ್ಮ ನಿವೃತ್ತ ಜೀವನವನ್ನು ಟೊರಂಟೋದಲ್ಲಿ ಕಳೆಯಲಿದ್ದಾರೆಂದೂ ಕೆಲವರು ಹೇಳುತ್ತಿದ್ದಾರೆ.

ಆದರೆ ಅಕ್ಷಯ್ ಕುಮಾರ್ ಅವರ ಕೆಲ ಕಟ್ಟಾ ಅಭಿಮಾನಿಗಳು ಅವರ ಬೆಂಬಲಕ್ಕೆ  ನಿಂತಿದ್ದು ಅವರು ದೇಶದ ಅತ್ಯಂತ ಹೆಚ್ಚು ತೆರಿಗೆ ಪಾವತಿಸುವ ನಟ ಹಾಗೂ ಸೇನಾ ಜವಾನರ ಕುಟುಂಬಗಳಿಗೆ ನೆರವಾಗಲು ಭಾರತ್ ಕೆ ವೀರ್ ಕಾರ್ಯಕ್ರಮ ಆರಂಭಿಸಿದ್ದನ್ನೂ ನೆನಪಿಸಿದ್ದಾರೆ.

ಅಕ್ಷಯ್ ಅವರನ್ನು ಟ್ರೋಲ್ ಮಾಡಿದವರು ದೇಶಕ್ಕಾಗಿ ಏನು ಮಾಡಿದ್ದಾರೆ ಎಂಬ ಪ್ರಶ್ನೆಯನ್ನೂ ಒಬ್ಬರು ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News