ಹೈದರಾಬಾದ್ ಕೈಗಾರಿಕಾ ವಸ್ತುಪ್ರದರ್ಶನದಲ್ಲಿ ಬೆಂಕಿ: 800 ಮಳಿಗೆ ಭಸ್ಮ

Update: 2019-01-31 03:42 GMT

ಹೈದರಾಬಾದ್, ಜ.31: ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಕೈಗಾರಿಕಾ ವಸ್ತುಪ್ರದರ್ಶನದಲ್ಲಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಿಂದಾಗಿ ನೂರಾರು ಮಳಿಗೆಗಳು ಭಸ್ಮವಾಗಿವೆ. ಬುಧವಾರ ರಾತ್ರಿ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಒಂಬತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಕಿಯ ಜ್ವಾಲೆ ಎಲ್ಲೆಡೆ ಹರಡಿದ್ದರಿಂದ ದಟ್ಟವಾದ ಹೊಗೆ ಇಡೀ ಆವರಣ ವ್ಯಾಪಿಸಿದ್ದು, ಏಳು ಮಂದಿ ಉಸಿರುಗಟ್ಟಿ ತೀವ್ರ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರಿಗೆ ಸುಟ್ಟ ಗಾಯಗಳಾಗಿದ್ದು, ನಾಂಪಲ್ಲಿಯ ಕೇರ್ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಬೆಂಕಿಯನ್ನು ನಿಯಂತ್ರಿಸಲಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆಯ ವಿಭಾಗೀಯ ಆಯುಕ್ತ ಮುಷರಫ್ ಫಾರೂಕಿ ಹೇಳಿದ್ದಾರೆ. ದುರಂತದಿಂದಾಗಿ ನಾಂಪಲ್ಲಿ ಪ್ರದೇಶದಲ್ಲಿ ರಸ್ತೆ ತಡೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಹೈದರಾಬಾದ್ ಮೆಟ್ರೊದಲ್ಲಿ ಉಚಿತ ಯಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೈದರಾಬಾದ್ ಮೆಟ್ರೊ ರೈಲು ನಿಯಮಿತದ ಆಡಳಿತ ನಿರ್ದೇಶಕ ಎನ್‌ವಿಎಸ್ ರೆಡ್ಡಿ ಪ್ರಕಟಿಸಿದ್ದಾರೆ.

ನುಮೈಶ್ ಎಂದು ಕರೆಯಲಾಗುವ ವಸ್ತುಪ್ರದರ್ಶನ ಆವರಣದಲ್ಲಿ ಸಂಜೆಯ ಶಾಪಿಂಗ್ ಮತ್ತು ಮನೋರಂಜನೆಗಾಗಿ ಸಾವಿರಾರು ಜನ ಸೇರಿದ್ದರು. ರಾತ್ರಿ 8.45ರ ಸುಮಾರಿಗೆ ಆಂಧ್ರಪ್ರದೇಶ ಮಹೇಶ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮಳಿಗೆಯಲ್ಲಿ ವಿದ್ಯುತ್‌ ಸ್ಪರ್ಶದಿಂದಾಗಿ ಬೆಂಕಿ ಕಾಣಿಸಿಕೊಂಡಿತು. ನೋಡನೋಡುತ್ತಿದ್ದಂತೆಯೇ ಅಕ್ಕಪಕ್ಕದ ಮಳಿಗೆಗಳಿಗೂ ವ್ಯಾಪಿಸಿತು. 3000ಕ್ಕೂ ಅಧಿಕ ಮಳಿಗೆಗಳಿದ್ದ ಇಲ್ಲಿ, ಸುಮಾರು 800 ಮಳಿಗೆಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸರು ಪ್ರಕಟಿಸಿದ್ದಾರೆ.

ಮಳಿಗೆಗಳನ್ನು ಬಿದಿರು ಹಾಗೂ ಬಟ್ಟೆಯಿಂದ ಸಿದ್ಧಪಡಿಸಿದ್ದ ಹಿನ್ನೆಲೆಯಲ್ಲಿ ಬೆಂಕಿ ಬಹುಬೇಗನೇ ವ್ಯಾಪಿಸಿತು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News