ಫೆ.21ರಂದು ರಾಮ ಮಂದಿರ ನಿರ್ಮಾಣ ಆರಂಭ; ಬಂದೂಕು ಎದುರಿಸಲು ಸಿದ್ಧ ಎಂದ ಸ್ವಾಮಿ ಸ್ವರೂಪಾನಂದ

Update: 2019-01-31 05:30 GMT

ಪ್ರಯಾಗ್ ರಾಜ್, ಜ.31: ಬಂಧೂಕು ಗುಂಡುಗಳನ್ನು ಎದುರಿಸಬೇಕಾಗಿ ಬಂದರೂ ಚಿಂತೆಯಿಲ್ಲ, ಫೆಬ್ರವರಿ 21ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಾರಂಭದ ಸಮಾರಂಭವನ್ನು ನಡೆಸಲಾಗುವುದು ಎಂದು ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ. 

ಶಿಲಾನ್ಯಾಸ ಸಮಾರಂಭವೆಂದೇ ಹೇಳಬಹುದಾದ ಈ ಕಾರ್ಯಕ್ರಮದ ದಿನಾಂಕವನ್ನು ಪ್ರಯಾಗ್ ರಾಜ್ ನಗರದಲ್ಲಿ ನಡೆಯುತ್ತಿರುವ ಕುಂಭ ಮೇಳದ ಅಂಗವಾಗಿ ನಡೆದ ಸಾಧು ಸಂತರ ಮೂರು ದಿನಗಳ ಸಮಾವೇಶ -ಧರ್ಮ ಸಂಸತ್ತಿನ ಕೊನೆಯಲ್ಲಿ ಘೋಷಿಸಲಾಯಿತು.

ಅಯೋಧ್ಯೆಯಲ್ಲಿ ವಿವಾದಿತ ರಾಮ ಜನ್ಮಭೂಮಿ-ಬಾಬರಿ ಮಸೀದಿ ಜಮೀನಿನ ಪಕ್ಕದಲ್ಲಿರುವ ಹೆಚ್ಚುವರಿ ಜಮೀನನ್ನು ಹಸ್ತಾಂತರಿಸಲು ಅನುಮತಿ ಕೋರಿ ಕೇಂದ್ರ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಮೇಲಿನ ಘೋಷಣೆ ಬಂದಿದೆ.

ಸ್ವಾಮಿ ಸ್ವರೂಪಾನಂದ ತಮ್ಮ ಧರ್ಮಾದೇಶದಲ್ಲಿ ಹಿಂದುಗಳಿಗೆ ತಲಾ ನಾಲ್ಕು ಇಟ್ಟಿಗೆಗಳನ್ನು ಹಿಡಿದುಕೊಂಡು ಆ ದಿನ ಅಯೋಧ್ಯೆಗೆ ಬರುವಂತೆ ಕರೆ ನೀಡಿದ್ದಾರೆ. ಈ ಕಾಂರ್ಕ್ರಮವನ್ನು ಇಷ್ಟಿಕಾ ನ್ಯಾಸ್ ಅಥವಾ ಇಟ್ಟಿಗೆ ಇಡುವ ಸಮಾರಂಭವೆಂದು ಕರೆಯಲಾಗಿದೆ. ಫೆಬ್ರವರಿ 10ರಂದು ನಡೆಯುವ ಬಸಂತ್ ಪಂಚಮಿ ನಂತರ ಸಾಧು ಸಂತರು ಪ್ರಯಾಗ್ ರಾಜ್ ನಿಂದ ಅಯೋಧ್ಯೆಗೆ ಯಾತ್ರೆ ಹೊರಡುವರು ಎಂದು ಅವರು ಮಾಹಿತಿ ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಕಾನೂನು ಜಾರಿಗೊಳಿಸಲು ಕೇಂದ್ರದಲ್ಲಿ ಬಹುಮತವಿರುವ ಹೊರತಾಗಿಯೂ ಪ್ರಯತ್ನಿಸದ ಬಿಜೆಪಿ ನೇತೃತ್ವದ ಸರಕಾರವನ್ನು ಅವರು ಟೀಕಿಸಿದರು. ಆದರೆ ಸಾಮಾನ್ಯ ವಿಭಾಗದ ಆರ್ಥಿಕ ದುರ್ಬಲರಿಗೆ ಮೀಸಲಾತಿಯೊದಗಿಸುವ ಮಸೂದೆ ಅಂಗೀಕಾರದ ವೇಳೆ ಸರಕಾರ ತನಗಿರುವ ಬಹುಮತವನ್ನು ಸಾಬೀತುಪಡಿಸಿತ್ತು ಎಂದು ಅವರು ಹೇಳಿದರು.

ಪ್ರಯಾಗ್ ರಾಜ್ ನಗರದಲ್ಲಿ ವಿಶ್ವ ಹಿಂದು ಪರಿಷದ್ ಕೂಡ ಇಂದಿನಿಂದ ಎರಡು ದಿನಗಳ ಧರ್ಮ ಸಂಸತ್ ಆಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News