ಕೇರಳದಲ್ಲಿ ಮಕ್ಕಳ ವಿರುದ್ಧದ ಅಪರಾಧ ಕೃತ್ಯಗಳಲ್ಲಿ ಹೆಚ್ಚಳ

Update: 2019-01-31 11:26 GMT

ಕಲ್ಲಿಕೋಟೆ, ಜು.31: ಕೇರಳದಲ್ಲಿ ಮಕ್ಕಳ ವಿರುದ್ಧ ಅಪರಾಧಕೃತ್ಯಗಳು ಕಳೆದ ವರ್ಷ ತೀವ್ರ ಹೆಚ್ಚಳಗೊಂಡಿದೆ ಎಂದು ಪೊಲೀಸರ ದಾಖಲೆಗಳು ಬಹಿರಂಗಪಡಿಸಿವೆ. 2018ರಲ್ಲಿ ವಿವಿಧ ಜಿಲ್ಲೆಗಳಲ್ಲಿ 1,204 ಮಕ್ಕಳು 2018ರಲ್ಲಿ ಅತ್ಯಾಚಾರಕ್ಕೆ ಗುರಿಯಾಗಿದ್ದಾರೆ. 185 ಮಕ್ಕಳ ಅಪರಹಣ ನಡೆದಿದೆ. 22 ಮಂದಿ ಕೊಲೆಯಾಗಿದ್ದಾರೆ, ಎಂಟು ಮಕ್ಕಳನ್ನು ತೊರೆದು ಹೋದ ಪ್ರಕರಣವೂ ನಡೆದಿದೆ. ಹದಿನೈದು ಬಾಲ್ಯವಿವಾಹನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಬೇರೆಯವರಿಗೆ ಲೈಂಗಿಕವಾಗಿ ಬಳಸಲು ಒಪ್ಪಿಸಿದ ಎರಡು ಪ್ರಕರಣಗಳು ದಾಖಲಾಗಿವೆ. ಒಟ್ಟು 4008 ಪ್ರಕರಣಗಳು ದಾಖಲಾಗಿವೆ. 2017ರಲ್ಲಿ 3, 478 ಪ್ರಕರಣ ದಾಖಲಾಗಿತ್ತು.

ಲೈಂಗಿಕ ಕಿರುಕುಳಗಳು ಈ ಅವಧಿಯಲ್ಲಿ ಹೆಚ್ಚಳವಾಗಿದ್ದು, ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯಗಳನ್ನು ತಡೆಯುವ ಪೊಕ್ಸೊ ಕಾನೂನು ಪ್ರಕಾರ ಕೇರಳದಲ್ಲಿ 3,000ಕ್ಕೂ ಹೆಚ್ಚು ಪ್ರಕರಣಗಳು ಕಳೆದ ವರ್ಷ ದಾಖಲಾಗಿವೆ. 2017ರಲ್ಲಿ 2, 697 ಪೊಕ್ಸೊ ಪ್ರಕರಣಗಳು ದಾಖಲಾಗಿದ್ದವು.

 ಅಪರಿಚಿತರಿಗಿಂತ ಪರಿಚಿತರಿಂದಲೇ ಕೆಲವೊಮ್ಮೆ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆ. ಮನೆಗೆ ನಿಕಟವಾಗಿರುವ ವ್ಯಕ್ತಿಗಳು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಗಳು ಕೂಡ ಹೆಚ್ಚಾಗಿ ನಡೆದಿದೆ. ಗಂಡುಮಕ್ಕಳನ್ನೂ ಲೈಂಗಿಕ ಕಿರುಕುಳಕ್ಕೆ ಬಳಸಲಾಗಿದೆ. ಶಾಲೆಯ ಕೌನ್ಸಿಲಿಂಗ್‍ನಲ್ಲಿ ಮಕ್ಕಳ ವಿರುದ್ಧ ನಡೆದ ಇಂತಹ ಘಟನೆಗಳು ಬಹಿರಂಗವಾಗುತ್ತಿವೆ ಎಂದು ಪೊಲೀಸ್ ದಾಖಲೆಗಳಿಂದ ತಿಳಿದು ಬಂದಿದೆ.

 ಕಳೆದ ಹತ್ತು ವರ್ಷಗಳಲ್ಲಿ ಮಕ್ಕಳ ವಿರುದ್ಧ ಅಪರಾಧಗಳಲ್ಲಿ ಏಳು ಪಟ್ಟು ಹೆಚ್ಚಳವಾಗಿದೆ. 2008ರಲ್ಲಿ ಕೇರಳದಲ್ಲಿ ಇಂತಹ ಕೇವಲ 549 ಪ್ರಕರಣಗಳು ದಾಖಲಾಗಿದ್ದವು. ಇದೇವೇಳೆ ಮಕ್ಕಳ ವಿರುದ್ಧ ದೌರ್ಜನ್ಯ ತಡೆಯುವ ಶಿಶು ಕಲ್ಯಾಣ ಸಮಿತಿ, ಮಕ್ಕಳ ಹಕ್ಕು ಆಯೋಗ, ಚೈಲ್ಡ್ ಲೈನ್ ಮೊದಲಾದ ಏಜೆನ್ಸಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿರುವುದರಿಂದ ಮಕ್ಕಳ ವಿರುದ್ಧ ನಡೆಯುತ್ತಿರುವ ಪ್ರಕರಣಗಳು ಹೆಚ್ಚು ಬಹಿರಂಗಗೊಳ್ಳುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News