ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 1,499 ಕೋಟಿ ರೂ.ಕಾಮಗಾರಿ: ಯು.ಟಿ.ಖಾದರ್

Update: 2019-01-31 13:51 GMT

ಬೆಂಗಳೂರು, ಜ.31: ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಈವರೆಗೆ 1499 ಕೋಟಿ ರೂ.ಗಳ ಕಾಮಗಾರಿ ಪೂರ್ಣಗೊಂಡಿದ್ದು, 1407 ಕೋಟಿ ರೂ.ಗಳ ಕಾಮಗಾರಿಗೆ ಟೆಂಡರ್ ಆಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2728 ಕೋಟಿ ರೂ.ಗಳ ಕಾಮಗಾರಿಗಳು ಡಿಪಿಆರ್ ಹಂತದಲ್ಲಿದೆ. ಫೆಬ್ರವರಿ ಅಂತ್ಯಕ್ಕೆ ಎಲ್ಲ ಉದ್ದೇಶಿತ ಕಾಮಗಾರಿಗಳು ಆರಂಭಗೊಳ್ಳುವ ಸಾಧ್ಯತೆಯಿದೆ ಎಂದರು.

ಬೆಳಗಾವಿ, ಬೆಂಗಳೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ತುಮಕೂರು, ದಾವಣಗೆರೆ ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದ್ದು, ಐದು ವರ್ಷಗಳಲ್ಲಿ ಒಟ್ಟು 7 ಸಾವಿರ ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲಾಗುವುದು. ಇದರಲ್ಲಿ ಶೇ.50ರಷ್ಟು ಮೊತ್ತ(3500 ಕೋಟಿ ರೂ.) ರಾಜ್ಯ ಸರಕಾರದ ಪಾಲು ಇರಲಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಶೂನ್ಯ ಸಾಧನೆ ಮಾಡಿದ್ದ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನವು ಕಳೆದ 7 ತಿಂಗಳಿನಿಂದ ತ್ವರಿತ ಪ್ರಗತಿಯಲ್ಲಿ ಸಾಗುತ್ತಿದೆ. ಈಗ ಇಡೀ ದೇಶದಲ್ಲೆ 9ನೇ ಸ್ಥಾನದಲ್ಲಿದೆ. ನಗರ ಪ್ರದೇಶಗಳಲ್ಲಿ ಆಸ್ತಿ ನಿರ್ಮಾಣ ಮಾಡುವ ಕೆಲಸ ಇದರಿಂದ ಆಗಲಿದೆ ಎಂದು ಖಾದರ್ ತಿಳಿಸಿದರು.

ರಸ್ತೆಗಳು, ವಾಹನ ನಿಲ್ದಾಣ ತಾಣ, ಆಟದ ಮೈದಾನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಪ್ರತಿಯೊಂದು ಜಿಲ್ಲೆಯಲ್ಲೂ ಪ್ರತ್ಯೇಕವಾದ ವಲಯಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಉದಾಹರಣೆಗೆ ದಾವಣಗೆರೆಯಲ್ಲಿ ಮಂಡಕ್ಕಿ ತುಂಬಾ ಜನಪ್ರಿಯ. ಅವುಗಳನ್ನು ತಯಾರಿಸುವ ವಿಧಾನವನ್ನು ಆಧುನೀಕರಣಗೊಳಿಸುವ ಸಂಬಂಧ ಕೆಲಸ ಆಗುತ್ತಿದೆ ಎಂದು ಅವರು ಹೇಳಿದರು.

ಈ ಯೋಜನೆಯಡಿ ಕೊಳಚೆ ಪ್ರದೇಶಗಳ ಅಭಿವೃದ್ಧಿಗೂ ಅನುದಾನ ಬಳಕೆ ಮಾಡಿಕೊಳ್ಳಲಾಗುವುದು. ಬೆಂಗಳೂರಿನಲ್ಲಿ ರಸ್ತೆಗಳ ಅಭಿವೃದ್ಧಿ, ಬೀದಿ ಬದಿ ಕಂಬಗಳಿಗೆ ಎಲ್‌ಇಡಿ ಬಲ್ಪ್‌ಗಳ ಅಳವಡಿಕೆ, ಮಾರುಕಟ್ಟೆಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ತಿಳಿಸಿದರು.

ಸ್ಮಾರ್ಟ್ ಸಿಟಿ ಎಂದರೇ ಇಡೀ ನಗರ ಪ್ರದೇಶವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ನಗರದ ಯಾವುದಾದರೂ ಒಂದು ಭಾಗವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಬಹುದಾಗಿದೆ. ಕೇಂದ್ರ ಸರಕಾರದ ಅನುಮೋದನೆ ಪಡೆದುಕೊಂಡೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಅವರು ಹೇಳಿದರು. ಮಂಗಳೂರಿನಲ್ಲಿ ಘನ ತ್ಯಾಜ್ಯ ವಿಲೇವಾರಿ, ಆಸ್ಪತ್ರೆಗಳ ಅಭಿವೃದ್ಧಿ, ಪ್ರಾಣಿಗಳ ವಧಾಲಯಗಳನ್ನು ಅಭಿವೃದ್ಧಿ ಪಡಿಸುವ ಸಂಬಂಧ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಆದರೆ, ಈವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮತ್ತೊಮ್ಮೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಾದ ಪಾಲಿಕೆ ಹಾಗೂ ನಗರ ಸಭೆಗಳಲ್ಲಿ ಕಟ್ಟಡ ನಿರ್ಮಾಣ ಅನುಮತಿ ಸಂಬಂಧ ಮಾದರಿ ಬೈಲಾ ರೂಪಿಸಿ ನಗರಾಭಿವೃದ್ಧಿ ಆದೇಶ ಹೊರಡಿಸಲಿದೆ. ಬೈಲಾ ಅನುಷ್ಠಾನದ ಅಂತಿಮ ನಿರ್ಧಾರ ಸ್ಥಳೀಯ ಸಂಸ್ಥೆಗಳ ವಿವೇಚನೆಗೆ ನೀಡಲಾಗಿದೆ ಎಂದು ಖಾದರ್ ಹೇಳಿದರು.

ರಾಜ್ಯದಲ್ಲಿ ಸೋಲಾರ್ ಬಳಕೆಗೆ ಪ್ರೋತ್ಸಾಹ ನೀಡಲು ಎಫ್‌ಎಎಆರ್‌ನಿಂದ ವಿನಾಯಿತಿ ನೀಡಲಾಗಿದೆ. ಸೋಲಾರ್ ಪ್ಯಾನೆಲ್ ಪ್ರತ್ಯೇಕ ಮಹಡಿ ಮತ್ತು ವಿಸ್ತೀರ್ಣ ಎಂದು ಪರಿಗಣಿಸುತ್ತಿದ್ದ ಎಫ್‌ಎಆರ್ ನಿಯಮವನ್ನು ಸಡಿಲಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News