ಬಿಜೆಪಿ ಪೂರ್ವಸಿದ್ಧತಾ ಸಭೆಗೆ ಜಗದೀಶ್ ಶೆಟ್ಟರ್, ಬಿ.ಶ್ರೀರಾಮುಲು, ಈಶ್ವರಪ್ಪ ಸೇರಿ ಪ್ರಮುಖ ಮುಖಂಡರ ಗೈರು

Update: 2019-01-31 13:51 GMT

ಬೆಂಗಳೂರು, ಜ. 31: ಮುಂಬರುವ ಲೋಕಸಭೆ ಚುನಾವಣಾ ಸಿದ್ದತೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿಂದು ನಡೆದ ಪೂರ್ವಭಾವಿ ಸಭೆಗೆ ಪಕ್ಷದ ಪ್ರಮುಖ ಮುಖಂಡರೇ ಗೈರುಹಾಜರಾಗಿದ್ದುದು ಎದ್ದು ಕಾಣುತ್ತಿತ್ತು.

ಗುರುವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಿಜೆಪಿ ಉಪಾಧ್ಯಕ್ಷ ಬಿ.ಶ್ರೀರಾಮುಲು, ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ವಿ.ಸೋಮಣ್ಣ ಸೇರಿ ಹಲವು ಮುಖಂಡರು ಸಭೆಯಿಂದ ದೂರ ಉಳಿದಿದ್ದರು.

ಮುಂಬರುವ ಲೋಕಸಭೆ ಚುನಾವಣೆಗೆ ಪೂರ್ವಸಿದ್ಧತೆ, ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವುದು, ಪಕ್ಷದ ಪ್ರಚಾರ ಸೇರಿದಂತೆ ಇನ್ನಿತರ ಮಹತ್ವದ ವಿಚಾರಗಳ ಚರ್ಚೆಗೆ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಕೆಲ ಮುಖಂಡರು ಪೂರ್ವನಿಗದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳಲಾಗಿದೆ.

ಮತ್ತೊಮ್ಮೆ ಮೋದಿ ಪ್ರಧಾನಿ: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು. ಆ ಹಿನ್ನೆಲೆಯಲ್ಲಿ ರಾಜ್ಯದ 22 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕೊಡುಗೆ ನೀಡಬೇಕು. ಆ ನಿಟ್ಟಿನಲ್ಲಿ ಕ್ಷೇತ್ರಗಳ ಉಸ್ತುವಾರಿಗಳು, ಪದಾಧಿಕಾರಿಗಳು ಮುಂದಾಗಬೇಕೆಂದು ಯಡಿಯೂರಪ್ಪ ನಿರ್ದೇಶನ ನೀಡಿದ್ದಾರೆ.

ಗುರುವಾರ ಸಭೆಯ ಬಳಿಕ ಮಾತನಾಡಿ ಯಡಿಯೂರಪ್ಪ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಳ್ಳುವ ಮೂಲಕ ಪಕ್ಷ ಸಂಘಟನೆಗೆ ಮುಖಂಡರು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಚುನಾವಣೆಯಲ್ಲಿ 22 ಕ್ಷೇತ್ರ ಗೆಲ್ಲುವುದು ನಮ್ಮ ಉದ್ದೇಶ ಎಂದು ಹೇಳಿದರು.

ಸನ್ಮಾನ:  ಬಿಜೆಪಿ ಉಸ್ತುವಾರಿ ಪಿ.ಮುರಳೀಧರ ರಾವ್, ಸಹ ಉಸ್ತುವಾರಿ ಕಿರಣ್ ಮಹೇಶ್ವರಿ ಹಾಗೂ ತೆಲಂಗಾಣ ಚುನಾವಣಾ ಉಸ್ತುವಾರಿ ಅರವಿಂದ್ ಲಿಂಬಾವಳಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಸಭೆಯಲ್ಲಿ ಮುಖಂಡರಾದ ಆರ್. ಅಶೋಕ್, ಗೋವಿಂದ ಕಾರಜೋಳ, ವಿಪಕ್ಷ ನಾಯಕ ಕೋಟ ಶ್ರೀನಿವಾಸಪೂಜಾರಿ, ರವಿಕುಮಾರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News