ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದೊಡ್ಡ ಕೋಮು ದಂಗೆ ನಡೆದಿಲ್ಲ: ಅಮಿತ್ ಶಾ

Update: 2019-01-31 15:21 GMT

ಹೊಸದಿಲ್ಲಿ,ಜ.31: ಮೋದಿ ಸರಕಾರವು ಬಡವರ ಧಾರ್ಮಿಕ ಹಿನ್ನೆಲೆಯನ್ನು ಪರಿಗಣಿಸದೆ ಅವರ ಏಳಿಗೆಗಾಗಿ ಶ್ರಮಿಸಿದೆ ಎಂದು ಗುರುವಾರ ಇಲ್ಲಿ ತಿಳಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು,ತನ್ನ ಪಕ್ಷವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಯಾವುದೇ ದೊಡ್ಡ ಕೋಮುದಂಗೆ ಸಂಭವಿಸಿಲ್ಲ ಎಂದು ಒತ್ತಿ ಹೇಳಿದರು.

ಬಿಜೆಪಿ ಅಲ್ಪಸಂಖ್ಯಾತ ಘಟಕದ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,ಜನರು ಯಾವುದೇ ಧರ್ಮಕ್ಕೆ ಸೇರಿರಲಿ,ಅವರ ಏಳಿಗೆಗೆ ತನ್ನ ಪಕ್ಷವು ಬದ್ಧವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಅವರು, ಅಲ್ಪಸಂಖ್ಯಾತರು ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಹೊಂದಿದ್ದಾರೆ ಎಂದು ಹೇಳಿದವರು ಅವರಿಗಾಗಿ ಏನನ್ನೂ ಮಾಡಿರಲಿಲ್ಲ ಎಂದರು.

ತ್ರಿವಳಿ ತಲಾಕ್ ಮಸೂದೆಯ ಅಂಗೀಕಾರಕ್ಕೆ ಮೋದಿ ಸರಕಾರವು ಒತ್ತು ನೀಡುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ಮುಸ್ಲಿಂ ಮಹಿಳೆಯರಿಗೆ ನ್ಯಾಯವೊದಗಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಹೇಳಿದರು.

ಶಾಲೆಗಳನ್ನು ತೊರೆಯುವ ಮುಸ್ಲಿಂ ಬಾಲಕಿಯರ ಪ್ರಮಾಣ ಶೇ.72ರಿಂದ ಶೇ.32ಕ್ಕೆ ಇಳಿದಿದೆ ಎಂದ ಶಾ,ಬಡವರಿಗೆ ವಿದ್ಯುತ್ ಮತ್ತು ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವ ಸರಕಾರದ ಯೋಜನೆಗಳಿಂದ ಮುಸ್ಲಿಂ ಮಹಿಳೆಯರಿಗೂ ಲಾಭವಾಗಿದೆ ಎಂದು ತಿಳಿಸಿದರು.

ಪ್ರತಿಪಕ್ಷಗಳ ವಿರುದ್ಧ ದಾಳಿ ನಡೆಸಿದ ಅವರು,ಢೋಂಗಿ ಜಾತ್ಯತೀತ ಪಕ್ಷಗಳ ರಕ್ಷಣೆಯಿಂದಾಗಿ ‘ವಕ್ಫ್ ಮಾಫಿಯಾ’ ವಕ್ಫ್ ಮಂಡಳಿಯ ಜಮೀನನ್ನು ಕೊಳ್ಳೆ ಹೊಡೆದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News