ಆಂಗ್ಲ ಸರಕಾರವು ನಮಗಾಗಿ ಮಾಡಿದ್ದೇನು?

Update: 2019-01-31 18:33 GMT

ಡಾ. ಬಾಬಾಸಾಹೇಬ ಅಂಬೇಡ್ಕರ್‌ರ ಅಧ್ಯಕ್ಷತೆಯಲ್ಲಿ ಹಿಂದಿನ ವರ್ಷ ಡಿಸೆಂಬರ್‌ನಲ್ಲಿ ಹರೆಗಾವ ಎಂಬಲ್ಲಿ ಏರ್ಪಡಿಸಲಾದ ಮುಂಬೈ ಇಲಾಖೆಯ ಹೊಲೆ-ಮಾದಿಗ, ಹಮಾಲರ ಪರಿಷತ್ತಿನ ಗೊತ್ತುವಳಿಯ ಮೇರೆಗೆ ಡಾ. ಸಾಹೇಬರು ವಿವರವಾದ ಮತ್ತು ವಿದ್ವತ್ಪೂರ್ಣವಾದ ಒಂದು ಪತ್ರವನ್ನು ಮುಂಬೈ ರಾಜ್ಯಪಾಲರಿಗೆ ಕಳಿಸಿದ್ದರೂ, ಸರಕಾರ ಅಸ್ಪಶ್ಯರ ಮೇಲೆ ಹೇರಿದ ಹೆಚ್ಚಿನ ಕಾನೂನುಬಾಹಿರ ಲೇವಿಯ ವತನದ ಬಗೆಗಿನ ಧೋರಣೆಯನ್ನು ಬದಲಾಯಿಸಲೇ ಇಲ್ಲ. ಸಿನ್ನರ್ ತಾಲೂಕಿನ ಕೆಲವು ವತನದಾರರ ಮೇಲೆ ಖಟ್ಲೆ ಹಾಕುವ ಪ್ರಯತ್ನವನ್ನು ಮಾಡಿತು. ಅಸ್ಪಶ್ಯ ಸಮಾಜದಲ್ಲಿ ತೀವ್ರವಾದ ಹತಾಷೆ ಪಸರಿಸಿ, ಹರೆಗಾವ ಪರಿಷತ್ತಿನ ಧೋರಣೆಗೆ ತಕ್ಕಂತೆ ಸರಕಾರದ ಈ ಅನ್ಯಾಯಕಾರಕ ಧೋರಣೆಯ ಮೇಲೆ ಸೇಡುತೀರಿಸಿಕೊಳ್ಳುವ ಅಂತಿಮ ವಿಚಾರ ವಿನಿಮಯ ನಡೆಸಲೆಂದೇ ನಾಶಿಕ್ ಜಿಲ್ಲೆಯ ಸಿನ್ನರ್‌ನಲ್ಲಿ ದಿನಾಂಕ 16 ಆಗಸ್ಟ್ 1941ರಂದು ಡಾ. ಅಂಬೇಡ್ಕರ್‌ರ ಅಧ್ಯಕ್ಷತೆಯಲ್ಲಿ ಹೊಲೆ-ಮಾದಿಗ ಹಮಾಲರ ಸಭೆಯನ್ನು ಏರ್ಪಡಿಸಲಾಗಿತ್ತು.

ಸಭೆಯಲ್ಲಿ ಸೇರಿದ ಜನಸಮುದಾಯವು ಸುಮಾರು 15,000ವರೆಗಿತ್ತು. ನಾಶಿಕ್ ಜಿಲ್ಲೆ, ನಗರ ಜಿಲ್ಲೆಯ ಪಶ್ಚಿಮ ಭಾಗದ ವತನದಾರರೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದರು. ಹಲವು ಕಾರ್ಯಕರ್ತರು ಆಗಮಿಸಿದ್ದರು. ಹಾಗೆಯೇ ಭಾವೂರಾವ ಗಾಯಕವಾಡ, ನಾಶಿಕ್ ಶಾಸಕ ಭೋಳೆ, ಪುಣೆ, ಶಾಸಕರಾದ ಡಿ.ಜಿ. ಜಾಧವ, ಜಳಗಾಂವ ಶಾಸಕ ಪಿ.ಜೆ.ರೋಹಮ್, ಅಹಮದನಗರ ಶಾಸಕ ಬಿ.ಎಚ್. ವರಾಳೆ, ಬೆಳಗಾವಿ ಶಾಸಕ ಜೆ.ಎಸ್. ಐದಾಳೆ, ಸೊಲ್ಲಾಪುರ ಶಾಸಕ ಭಾಯಿಚಿತ್ರೆ, ರತ್ನಗಿರಿ, ಬಾಂಬೆ ಸೆಂಟಿನಲ್ ಪತ್ರಿಕೆಯ ಉಪಸಂಪಾದಕರಾದ ಮಿ. ಇಝಿಕಲ್, ವಿ.ನಾ. ಬರ್ವೆ ಮುಂತಾದ ಪ್ರಮುಖರು ಹಾಜರಿದ್ದರು. ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಲೌಡ್‌ಸ್ಪೀಕರ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಮೆರವಣಿಗೆಯ ಬಳಿಕ ಡಾ. ಅಂಬೇಡ್ಕರ್ ಸಭಾಮಂಟಪಕ್ಕೆ ಬಂದು ಅಧ್ಯಕ್ಷಸ್ಥಾನವನ್ನು ಸ್ವೀಕರಿಸಿದರು. ಸಭೆಯ ಸಂಜೆ 5.30ಕ್ಕೆ ಶುರುವಾಯಿತು. ಆರಂಭಕ್ಕೆ ಘೋಗಡೆಯವರ ಪೋವಾದೆ(ಸ್ತುತಿಗೀತೆ) ಮತ್ತು ಗಾಯನ ನಡೆಯಿತು. ಸಭೆಯ ನಿರ್ಣಯಗಳಿಗೆ ಬೆಂಬಲಸೂಚಿಸುವ ತಂತಿ ಸಂದೇಶಗಳು ಬಂದಿದ್ದವು. ಅವುಗಳನ್ನು ಸಾತಾರದ ಶಾಸಕ ಕೆ.ಎಸ್. ಸಾವಂತ ಮತ್ತು ವಿಜಾಪುರದ ಶಾಸಕರಾದ ಆರ್.ಎಸ್. ಕಾಳೆಯವರು ಓದಿ ತೋರಿಸಿದರು. ಹಾಗೆಯೇ ಸಿನ್ನರ್ ಸಭೆಯ ನಿರ್ಣಯ ವಡಾಳಾದ(ಮುಂಬೈ) ನಾಶಿಕ್ ಜಿಲ್ಲೆಯ ಜನರೂ ಬೆಂಬಲ ವ್ಯಕ್ತ ಪಡಿಸಿರುವ ವಿಷಯವನ್ನು ಕೆ.ಲಿ.ಘೋಗಡೆಯವರು ಬಹಿರಂಗ ಪಡಿಸಿದರು. ಬಳಿಕ ಕರತಾಡನ ಮತ್ತು ಜಯಘೋಷಣೆ ನಡುವೆ ಡಾ.ಅಂಬೇಡ್ಕರ್ ಭಾಷಣ ಮಾಡಲು ಎದ್ದುನಿಂತರು.

ಭಗನಿಯರೇ ಮತ್ತು ಬಂಧುಗಳೇ:
 ಇಂದಿನ ಸಭೆ ಕರೆದದ್ದರ ಉದ್ದೇಶ ನಿಮಗೆಲ್ಲ ಗೊತ್ತಿದೆ. ಕಳೆದ ಒಂದೂ ಒಂದೂವರೆ ವರ್ಷಗಳಲ್ಲಿ ಸರಕಾರವು ವತನದಾರರ ಬಗೆಗೆ ಅನ್ಯಾಯಧೋರಣೆಯನ್ನು ತಾಳಿದೆ. ಹೊಲೆ-ಮಾದಿಗ-ಹಮಾಲ ವತನದಾರರ ಬಳಿ ಯಾವ ಭೂಮಿಯು ವಂಶಪರಂಪರಾಗತವಾಗಿ ಅವರ ಬಳಿಯಿದೆಯೋ, ಆ ಭೂಮಿಯ ಮೇಲೆಯೇ ಅವರ ಉಪಜೀವನವು ಅವಲಂಬಿಸಿದೆ. ಆ ಭೂಮಿಯ ಮೇಲೆ ಸರಕಾರ ಹೆಚ್ಚಿನ ಲೇವಿಯನ್ನು ಹೇರುತ್ತಿದೆ. ನಾಶಿಕ್ ಜಿಲ್ಲೆಯಲ್ಲಿ ಈ ಹೊಸ ಲೇವಿಯನ್ನು ಸರಕಾರ ವಸೂಲಿ ಮಾಡುತ್ತಿದೆ. ನನಗೆ ಸಿಕ್ಕ ಮಾಹಿತಿಯ ಪ್ರಕಾರ, 1939ರಲ್ಲಿ ಸರಕಾರಕ್ಕೆ ಈ ಹೊಸ ಧೋರಣೆಯಿಂದ 1,500 ಅಥವಾ 2,000 ರೂಪಾಯಿಗೂ ಅಧಿಕ ಸಿಕ್ಕಿದೆ.

ಸನ್ 1940ರಲ್ಲಿ ಈ ಏರಿಕೆಯು 5,000 ರೂಪಾಯಿಯಾಯಿತು. ಸರಕಾರ ಈ ಅನ್ಯಾಯದ ಧೋರಣೆಯ ವಿರುದ್ಧ ಜನಜಾಗೃತಿ ಕೈಗೊಂಡು, ಕಳೆದ ವರ್ಷ ಮುಂಬೈ ಇಲಾಖೆಯ ಹರಗಾವ ಎಂಬ ಊರಿನ ಹೊಲೆ-ಮಾದಿಗ ಹಮಾಲ ಮುಂತಾದ ಅಸ್ಪಶ್ಯ ವತನದಾರರ ಪರಿಷತ್ತು ನನ್ನ ಅಧ್ಯಕ್ಷತೆಯಲ್ಲಿ ಜರುಗಿತು. ಹೆಚ್ಚಿನ ಲೇವಿ ಅನ್ಯಾಯದ ಕುರಿತು ಸರಕಾರಕ್ಕೆ ಅರ್ಜಿಯನ್ನು ಸಲ್ಲಿಸಬೇಕೆಂದು ಆ ಪರಿಷತ್ತಿನಲ್ಲಿ ಗೊತ್ತುವಳಿಯನ್ನು ಸ್ವೀಕರಿಸಲಾಗಿತ್ತು. ಆ ಅರ್ಜಿ ಸ್ವೀಕೃತವಾಗದಿದ್ದರೆ ಸರಕಾರದ ಕೆಲಸಕ್ಕೆ ಬಹಿಷ್ಕಾರ ಹಾಕುವುದು ಅಥವಾ ಬೇರೆ ಯಾವುದಾದರೂ ಪ್ರತಿಕಾರಾತ್ಮಕ ಮಾರ್ಗವನ್ನು ಸ್ವೀಕರಿಸುವುದು. ಪರಿಷತ್ತಿನ ಅಧ್ಯಕ್ಷನಾಗಿದ್ದರಿಂದ ನಾನು ಗೊತ್ತುವಳಿಯ ಅರ್ಜಿಯನ್ನು ರಾಜ್ಯಪಾಲರಿಗೆ ಕಳಿಸಿದೆ. ಅದರ ಕುರಿತು ಸಮಾಲೋಚನೆ ನಡೆದಿದೆ ಎಂಬ ಪತ್ರ ಸರಕಾರದಿಂದ ಬಂತು. ಆದರೆ ಇಷ್ಟು ಕಾಲ ಕಳೆದರೂ ಸರಕಾರದ ಧೋರಣೆಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಬದಲಿಗೆ ನಾನು ಕೇಳಿದ್ದೇನೆಂದರೆ, ಈ ಜಿಲ್ಲೆಯಂತೆ ಸಿನ್ನರ್ ತಾಲೂಕಿನ ಕೆಲವು ಕಡೆಗಳಲ್ಲಿ ಸರಕಾರವು ವತನರಾದ ಮಹಾರರ ಮೇಲೆ ದಿವಾನಿ ದಾವೆ ಹೂಡಿದೆಯಂತೆ. ಹೆಚ್ಚಿನ ಲೇವಿ ವಸೂಲಿಗಾಗಿ ಪೊಲೀಸರು ಸ್ಥಿರಾಸ್ತಿಯನ್ನು ಜಪ್ತಿ ಮಾಡುವ ಪ್ರಯತ್ನ ಮಾಡಿದೆಯಂತೆ. ಸ್ಥಿರಾಸ್ತಿಯ ಕೊರತೆಯಿದ್ದಲ್ಲಿ ಜಾನುವಾರುಗಳನ್ನು, ಮಾನೆಮಾರನ್ನೂ ಜಪ್ತಿ ಮಾಡಿದೆಯಂತೆ. ಸರಕಾರದ ಈ ಧೋರಣೆ ಬಗೆಗೆ ಜನರಲ್ಲಿ ಅಸಂತೋಷ ಪಸರಿಸುವವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಿದೆಯಂತೆ.

ಸರಕಾರದ ಈ ಧೋರಣೆಯು ತೀರಾ ಅನ್ಯಾಯಕಾರಕವಾದುದು. ಅದಕ್ಕೆ ನ್ಯಾಯದ್ದಾಗಲಿ, ನೀತಿಯದ್ದಾಗಲಿ ಆಧಾರವಿಲ್ಲ. ಈ ಅನ್ಯಾಯಕಾರಿ ಧೋರಣೆಯನ್ನು ವಿರೋಧಿಸಲು ನಾವು ಸಿದ್ಧರಾಗಬೇಕಿದೆ.
ವತನಪದ್ಧತಿಯು ಹೊಸದಲ್ಲ, ತೀರ ಹಳೆಯದು. ಈ ಪದ್ಧತಿಯು ಹಿಂದೂರಾಜ್ಯದಿಂದಲೇ ಆರಂಭವಾಗಿರುವಂತಹದು. ಆಂಗ್ಲಸತ್ತೆ ಆರಂಭವಾದ ಕೂಡಲೇ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ವತನ ಹಕ್ಕಿನಲ್ಲಿ ಮಾರ್ಪಾಟು ಮಾಡಿಕೊಂಡರು. ಹೊಲೆ-ಮಾದಿಗ-ಹಮಾಲರಂತೆ ಇಲ್ಲಿ ಮತ್ತೆ ಉಳಿದ ವತನದಾರರೂ ಇದ್ದಾರೆ. ಆದರೆ ಉಳಿದವರ ಬಗ್ಗೆ ಸರಕಾರ ಯಾವ ನ್ಯಾಯಪರತೆಯನ್ನು ತೋರಿಸಿತ್ತೋ, ಅದನ್ನು ನಮ್ಮ ಬಗೆಗೆ ತೋರಿಸಲಿಲ್ಲ. ಈ ಅನ್ಯಾಯದ ಬಗೆಗೆ ತಮಗೆ ಗೊತ್ತಿರಲಿ ಎಂದು ನಿಮಗೆ ಎರಡು ಮೂರು ಉದಾಹರಣೆ ನೀಡುತ್ತೇನೆ.

ಪೇಶ್ವೆ ಆಡಳಿತದಲ್ಲಿ ಇನಾಮದಾರರ ಒಂದು ವರ್ಗವಿದೆ. ಆ ವರ್ಗಕ್ಕೆ ಸರಕಾರದಿಂದ ವರ್ಷಾಸನ ಸಿಗುತ್ತದೆ. ಅವರು ಉದ್ಯೋಗ,ದಂಧೆ ಏನೂ ಮಾಡುವುದಿಲ್ಲ. ಹಾಗೆಯೇ ದೇವಸ್ಥಾನದಲ್ಲಿಯ ಅರ್ಚಕರಿಗೂ ವತನವಿತ್ತು. ಪೇಶ್ವೆ ರಾಜರು ಹೋಗಿ ಆಂಗ್ಲಸತ್ತೆ ಬಂದ ಬಳಿಕ ಸರಕಾರ ಈ ವೇತನ ಬಗೆಗೆ ಮಾಡಿದ್ದೇನು? ಯಾರಿಗೆ ಪೇಶ್ವೆಕಾಲದಲ್ಲಿ ವತನ ಸಿಗುತ್ತಿತೋ ಅವರ ವತನಕ್ಕೆ ಸರಕಾರ ಕೈಹಚ್ಚಲಿಲ್ಲ. ಸರಕಾರಕ್ಕೆ ಆ ಜನರಿಂದ ಕಡ್ಡಿಯಷ್ಟೂ ಉಪಯೋಗವಿಲ್ಲದಿದ್ದಾಗ ಸರಕಾರವು ಒಂದಷ್ಟು ಭೂಮಿಯನ್ನು ಇನಾಮದಾರ ವರ್ಗದ ಹತ್ತಿರವೇ ಉಳಿಸಿದೆ.

 ಎರಡನೇ ವತನದಾರ ವರ್ಗವೆಂದರೆ ಪಾಳೇಯಗಾರರದ್ದು. ಪೇಶ್ವೆಗಳು ಇವರಿಗೆ ಉತ್ಪನ್ನ ನೀಡಿದ್ದಾರೆೆ. ಈ ಜನರು ಆ ಹಣದ ಬಲದಿಂದ ತಮ್ಮ ಹತ್ತಿರ ಸೈನಿಕರನ್ನು ನೇಮಿಸಿಕೊಂಡಿರುತ್ತಾರೆ. ಪೇಶ್ವೆಗಳಿಗೆ ಏನಾದರೂ ಸಂಕಟ ಬಂದರೆಗಿದರೆ ಅಥವಾ ಯುದ್ಧ ನಡೆದಾಗ ಈ ಸೈನ್ಯ ಪೇಶ್ವೆಗಳಿಗೆ ಸಹಾಯ ಮಾಡುತ್ತಿತ್ತು. ಆದರೆ ಆಂಗ್ಲರ ಸೈನ್ಯದ ಧೋೀರಣೆಯು ತೀರ ಭಿನ್ನವಾಗಿತ್ತು. ಸೈನ್ಯದ ಬಾಬತ್ತಿನಲ್ಲಿ ಅವರು ಪರಾವಲಂಬಿ ಧೋರಣೆಯನ್ನು ಅನುಸರಿಸುವುದಿಲ್ಲ. ಈ ಸರಕಾರ ಸ್ವಂತ ಖರ್ಚಿನಿಂದ ಸೈನ್ಯವನ್ನು ಸಾಕುತ್ತದೆ. ಅಂದರೆ ಪೇಶ್ವೆಯಿಂದ ಪಾಳೇಯಗಾರರು ನಿರುಪಯೋಗಿಗೊಂಡರು. ಸರಕಾರಕ್ಕೆ ಅದರಿಂದ ಏನೂ ಉಪಯೋಗವಾಗಲಿಲ್ಲ. ಆದಷ್ಟು ಸರಕಾರ ಅವರ ವತನಕ್ಕೆ ಕೈ ಹಚ್ಚಲಿಲ್ಲ. ಈ ಪಾಳೇಯಗಾರರಿಗೆ ಮನೆಯಲ್ಲಿ ಕೂತಲ್ಲೇ ಸರಕಾರ ಖಜಾನೆಯಿಂದ 500 ರುಪಾಯಿಯಷ್ಟು ಪೆನ್ಶನ್ ನೀಡಲಾಗುತ್ತದೆ.

ಪಾಳೇಯಗಾರರು, ಅರ್ಚಕರಂತೆ ದೇಶಮುಖ, ದೇಶಪಾಂಡೆಯವರು ಸಹ ಪೇಶ್ವೆರಾಜ್ಯದಲ್ಲಿ ನೌಕರಿ ಮಾಡುತ್ತಿದ್ದರು. ಆದರೆ ಈ ವತನ ವಾರಸಾ ಹಕ್ಕಿನಂತೆ ನಡೆಯುತ್ತಿರುವುದರಿಂದ ಸರಕಾರಕ್ಕೆ ಬೇಕಾಗಿರಲಿಲ್ಲ, ಮಾಮಲೇದಾರನ ಹುದ್ದೆಯನ್ನು ಅವನ ಅನರ್ಹ ಮಗನಿಗೆ ನೀಡಿದರೆ ರಾಜ್ಯ ಆಡಳಿತದಲ್ಲಿ ಗೊಂದಲ ನಿರ್ಮಾಣವಾಗಿರುತ್ತದೆ ಎಂಬ ಕಾರಣಕ್ಕೆ ಸಂಬಳ ಪಡೆಯುವ ಮಾಮಲೇದಾರರನ್ನು ನೇಮಿಸಲಾಯಿತು. ಹಿಂದಿನ ದೇಶಮುಖ, ದೇಶಪಾಂಡೆಯರಿಂದ ಸರಕಾರಕ್ಕೆ ಏನೂ ಉಪಯೋಗವಾಗಲಿಲ್ಲ. ಆದರೆ ವಿಚಿತ್ರವೆಂದರೆ, ಸರಕಾರ ಅವರಿಂದ 8,14,545 ರೂಪಾಯಿಯ ಕಂದಾಯದ ಬದಲಿಗೆ ಕೇವಲ 2 ಲಕ್ಷ ರೂಪಾಯಿ ಮಾತ್ರ ಸ್ವೀಕರಿಸುತ್ತದೆ.

ಹಿಂದಿನ ಕಾಲದಲ್ಲಿ ನಿಮ್ಮಂತೆಯೇ ಕಮ್ಮಾರ, ಬಡಿಗ, ಅಗಸ, ಕ್ಷೌರಿಕರಂತಹ ಹನ್ನೆರಡು ಆಯಗಾರರು ಕೆಲಸ ಮಾಡುತ್ತಿದ್ದರು. ಆದರೆ 1863ರಲ್ಲಿ ಸರಕಾರವು ಇವರನ್ನು ನೌಕರಿಯಿಂದ ಮುಕ್ತಗೊಳಿಸಿತು. ಅವರ ವತನವನ್ನು ಸರಕಾರ ಅವರಿಗೆ ನೀಡಿತು. ಅವರ ಹೊಲವನ್ನು ಅವರಿಗೆ ನೀಡಲಾಯಿತು. ಸದ್ಯ ಈಗಿರುವ ತಲಾಠಿಯ ಬದಲಿಗೆ ಹಿಂದೆ ಕುಲಕರ್ಣಿಯಿರುತ್ತಿದ್ದ. ಸರಕಾರ ಕುಲಕರ್ಣಿಯ ವತನವನ್ನು ವಶಪಡಿಸಿಕೊಂಡು ಸಂಬಳದ ತಲಾಠಿಯನ್ನು ನೇಮಿಸಿತು. ವತನ ರದ್ದಾದರೂ ಅವರ ಬಳಿಯಿದ್ದ ಭೂಮಿಯನ್ನು ಮೊದಲಿನ ಕಂದಾಯದ ಬೆಲೆಗೆ ಅವರಿಗೆ ನೀಡಿತು. ಅಷ್ಟೇ ಅಲ್ಲ ಸರಕಾರದ ಒಂದು ಕೆಲಸವನ್ನು ಮಾಡದೆಯೂ ಮೊದಲಿನಂತೆ ಜೀವನಾಂಶವನ್ನೂ ನೀಡಿತು! ನಮ್ಮಂತೆ ಇರುವ ಉಳಿದ ವತನದಾರರಿಗೆ ಸರಕಾರವು ಹೀಗೆ ನ್ಯಾಯ ಮತ್ತು ಉದಾರ ಬುದ್ಧಿಯನ್ನು ತೋರಿತು. ಹೀಗಿರುವಾಗ ನಿಮ್ಮನ್ನು ಮಾತ್ರ ಹೀಗೇಕೆ ನೋಡಿಕೊಳ್ಳಲಾಯಿತು? ಈ ಜನರಿಗೆ ಸರಕಾರವು ಮನೆಯಲ್ಲಿ ಕೂತಲ್ಲೇ 2 ಲಕ್ಷ ರೂಪಾಯಿ ಉಚಿತವಾಗಿ ನೀಡುತ್ತಿದೆ. ಬಡಪಾಯಿ ಹೊಲೆ-ಮಾದಿಗ-ಹಮಾಲರು ಮಾತ್ರ ಹಗಲಿರುಳು ಸರಕಾರದ ಕೆಲಸ ಮಾಡುತ್ತಿದ್ದರೂ ಅವರಿಗೇಕೆ ಹೀಗೆ ಅನ್ಯಾಯ ಮತ್ತು ದೌರ್ಜನ್ಯದಿಂದ ನಡೆಸಿಕೊಳ್ಳಲಾಗುತ್ತಿದೆ? ಇದೇ ಸರಕಾರಕ್ಕೆ ನಾನು ಕೇಳುವ ಸವಾಲು.

ಕಳೆದ 10-15 ವರ್ಷಗಳಿಂದ ಇವತ್ತಿನವರೆಗೆ ನನ್ನ ಕಟಾಕ್ಷವು ಸವರ್ಣೀಯ ಹಿಂದೂ ಮತ್ತು ಕಾಂಗ್ರೆಸ್ ಮುಂತಾದ ಈ ದೇಶದ ಜನರ ವಿರುದ್ಧವಿತ್ತು. ಈವರೆಗೆ ನಾನು ಹಿಂದೂ ಧರ್ಮ ಮತ್ತು ಹಿಂದೂ ಸಮಾಜದವರ ಮೇಲೆ ಹಲ್ಲೆ ನಡೆಸುತ್ತಿದ್ದೆ. ಆದರೆ ಎಷ್ಟು ತೀವ್ರವಾಗಿ ಹಿಂದೂ ಸಮಾಜದ ಮೇಲೆ ಹಲ್ಲೆ ನಡೆಸುತ್ತಿದ್ದೇನೋ, ಆದಕ್ಕಿಂತ ನೂರುಪಟ್ಟು ತೀವ್ರವಾಗಿ ಸರಕಾರದ ಮೇಲೆ ನಡೆಸುವುದಾಗಿ ಸರಕಾರಕ್ಕೆ ಖಚಿತವಾಗಿ ಹೇಳಬಯಸುತ್ತೇನೆ. ನಾನು ಎಂದೂ ಸರಕಾರದ ವಿರುದ್ಧ ಮಾತಾಡುವುದಿಲ್ಲೆಂದು ನನ್ನ ಮೇಲೆ ಅನೇಕರು ಸರಕಾರ ನಿಷ್ಠ, ದೇಶದ್ರೋಹಿ, ಜಾತಿನಿಷ್ಠ ಎಂಬ ಆರೋಪ ಹೊರಿಸುತ್ತಿರುತ್ತಾರೆ. ಆದರೆ ಯಾರು ಎಷ್ಟೇ ಪ್ರಬಲವಾಗಿದ್ದರೂ ಎಲ್ಲ ಕಡೆಯಿಂದಲೂ ಶತ್ರುವಿನ ಮೇಲೆ ಎರಗುವುದು ಸಾಧ್ಯವಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಒಬ್ಬೊಬ್ಬ ಶತ್ರುವಿನ ಮೇಲೆ ಏರಿಹೋಗಿ ಅವರನ್ನು ಹದ್ದುಬಸ್ತಿನಲ್ಲಿ ಡಲು ಪ್ರಯತ್ನಿಸುತ್ತಿದ್ದೆ. ಈವರೆಗಿನ ಹೋರಾಟವನ್ನು ನಾನು ಇದೇ ಮಾದರಿಯಲ್ಲಿ ಮಾಡಿದ್ದೇನೆ. ಆದರೆ ನಾವು ಯಾವ ಸರಕಾರದೊಂದಿಗೆ ಪ್ರಾಮಾಣಿಕವಾಗಿ ವರ್ತಿಸಿದ್ದೇವೆಯೋ, ಅದೇ ಸರಕಾರ ನಮ್ಮ ಮೇಲೆ ತಿರುಗಿ ಬಿದ್ದಿದೆ! ಆಂಗ್ಲರ ಪರವಾಗಿ ರಕ್ತಚೆಲ್ಲಿ ನಾವೇ ಪೇಶ್ವೆಯರನ್ನು ಅಂತ್ಯಗೊಳಿಸಿದೆವು. 1818ರಲ್ಲಿ ಸಂಪೂರ್ಣ ಪೇಶ್ವೆ ಆಡಳಿತ ಅಂತ್ಯಗೊಂಡಿತು. ಕೇವಲ ಮಹಾರ ಸೈನಿಕರ ಸಹಾಯದಿಂದಲೇ ಖರ್ಡೆಯ ಅಂತಿಮ ಹೋರಾಟವನ್ನು ಆಂಗ್ಲರು ಗೆದ್ದರು. ಇದಕ್ಕೆ ಕೋರೆಗಾಂವನಲ್ಲಿ ಕಟ್ಟಿದ ವಿಜಯಸ್ತಂಭವೇ ಸಾಕ್ಷಿಯಾಗಿದೆ. ಈ ವಿಜಯಸ್ತಂಭದ ಮೇಲೆ ಎರಡು ಆಂಗ್ಲರದ್ದು, ನಾಲ್ಕು ಪುರಭಯ್ಯಿಗಳದ್ದು ಮತ್ತು ಉಳಿದ ಎಲ್ಲ ಹೆಸರು ಮಹಾರ ವೀರರದ್ದೇ ಆಗಿದೆ!

ಯಾರಿಗೆ ನಾವು ರಾಜ್ಯವನ್ನು ದೊರಕಿಸಿಕೊಟ್ಟೆವೋ, ಅವರೇ ಈಗ ನಮ್ಮನ್ನು ಒದೆಯಲು ಮುಂದಾಗಿದ್ದಾರೆ. ನಾವು ದೊರಕಿಸಿಕೊಟ್ಟ ಆಂಗ್ಲರಾಜ್ಯದಲ್ಲಿ ನಮ್ಮದೇನಾದರೂ ಲಾಭವಾಗುವ ಬದಲು ಉಚ್ಚವರ್ಣೀಯರಿಗೆ ಲಾಭವಾಗುತ್ತಿದೆ. ನೀವು ಬೇಕಾದ ಸರಕಾರಿ ಕಚೇರಿಗೆ ಹೋಗಿ, ನಿಮಗೆ ಕಂಡು ಬರುವ ಸತ್ಯ ಇದೇ. ಸರಕಾರವು ಸವರ್ಣೀಯ ಹಿಂದೂಗಳ ಕಡೆಗೆ ಗಮನ ಹರಿಸಿತು. ಆದರೆ ನಮಗಾಗಿ ಮಾಡಿದ್ದು ಏನು? ಕಳೆದ 150 ವರ್ಷಗಳ ಆಡಳಿತದಲ್ಲಿ ಆಂಗ್ಲ ಸರಕಾರವು ಅಸ್ಪಶ್ಯರಿಗಾಗಿ ಏನು ಮಾಡಿತು ಎನ್ನುವುದಕ್ಕೆ ಉತ್ತರಿಸಬೇಕು. ಇಂದು ನಮ್ಮ ಎದುರಿಗೆ ಎಂಥ ಬಿಕ್ಕಟ್ಟಿನ ಪರಿಸ್ಥಿತಿ ಬಂದು ನಿಂತಿದೆ? ಹಿಂದೆ ಊರಲ್ಲಾಗಲಿ, ಬಣದಲ್ಲಾಗಲಿ ಹೊಟ್ಟೆ ತುಂಬಲು ಏನಾದರೂ ಸಿಗುತ್ತಿತ್ತು. ಆದರೆ ನಾವು ಆರಂಭಿಸಿದ ಚಳವಳಿಯಿಂದಾಗಿ ಈಗ ಅದೆಲ್ಲ ನಮಗಾಗಿ ಮಾತ್ರ ಒಂದು ರೂಪಾಯಿ ನೀಡಲು ಸಿದ್ಧವಿಲ್ಲ. ಅಷ್ಟೇ ಅಲ್ಲ, ನಮ್ಮ ಬಾಯೊಳಗಿನ ತುತ್ತನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಸರಕಾರದ ಯಾವ ಆಹ್ವಾನವಿದ್ದರೂ ನಾನದನ್ನು ಎದುರಿಸಲು ಸಿದ್ಧ. ನಾನು ಸರಕಾರಕ್ಕೆ ನೀಡುವ ಎಚ್ಚರಿಕೆ ಏನೆಂದರೆ, ನೀವು ಬೇಕಾದ ಉಪಾಯವನ್ನು ಹೂಡಿದರೂ ಹೆಚ್ಚಿನ ಲೇವಿ ಕಂದಾಯವನ್ನು ಜಾರಿಗೊಳಿಸಿದ ಧೋರಣೆಯನ್ನು ನಾನು ಅಷ್ಟೇ ತೀವ್ರವಾಗಿ ಖಂಡಿಸದೆ ಇರಲಾರೆ. ನಾನು ಈವರೆಗೆ ಸರಕಾರದ ವಿರುದ್ಧ ಹೋಗಿರಲಿಲ್ಲ.

ನಾನು ಕಾಂಗ್ರೆಸ್ ಸೇರಿ, ಅವರ ಹೋರಾಟದಲ್ಲಿ ಶಾಮೀಲಾಗಲಿಲ್ಲ ಅಥವಾ ಯಾವುದೇ ದಂಗೆಯಲ್ಲಿ ಭಾಗವಹಿಸಲಿಲ್ಲ. ಈ ದೇಶದಲ್ಲಿ ಶಾಂತತೆಯನ್ನು ಕಾಪಾಡಲು ನನ್ನಷ್ಟು ಯಾರೂ ಪ್ರಯತ್ನಿಸಲಿಲ್ಲ. ಆದರೆ ಸರಕಾರ ಇದನ್ನು ಗಮನಿಸಲಿಲ್ಲ. ನಾವಿಂದು ಸರಕಾರಕ್ಕೆ ಬೇಡವಾಗಿದ್ದೇವೆ. ಹಿಂದೂಗಳಿಗೂ ಬೇಡವಾಗಿದ್ದೇವೆ. ಯಾರೂ ಆಂಗ್ಲರಿಗೆ ಸತತ ಕಿರುಕುಳ ಕೊಡುತ್ತಾರೋ, ಅದು ಅಂಥವರಿಗೇ ಮಣಿಯುತ್ತದೆ. ನಾವಿಷ್ಟು ದಿನ ಯಾವ ಹುಸಿ ನಂಬಿಕೆಯನ್ನು ಆಂಗ್ಲ ಸರಕಾರದ ಮೇಲೆ ಇರಿಸಿದೆವೆಯೋ ಅದಕ್ಕೆ ಇಂದು ತಿಲಾಂಜಲಿಯನ್ನು ನೀಡಬೇಕಾಗಿದೆ. ಇದೊಂದು ಹೋರಾಟವಾಗಿದೆ. ಸಂಗ್ರಾಮವಾಗಿದೆ. ನಾನು ಕಳಿಸಿದ ಪತ್ರಕ್ಕೆ ಸರಕಾರ ಉತ್ತರಿಸಲು ಸಾಧ್ಯವಿಲ್ಲ. ಯಾಕೆಂದರೆ ನಾನು ಮಂಡಿಸಿದ ವಿಷಯ ನ್ಯಾಯ ಮತ್ತು ಸತ್ಯದಿಂದ ಕೂಡಿದೆ. ನಾನು ಸರಕಾರಕ್ಕೆ ಹೇಳುವುದಿಷ್ಟೇ, ನಮ್ಮ ಬೇಡಿಕೆಯನ್ನು ತಿರಸ್ಕರಿಸಿದರೆ, ಅದರ ಪರಿಣಾಮ ಮಾತ್ರ ತೀರಾ ವಿಘಾತಕವಾಗಬಹುದು. ನಮ್ಮ ಬೇಡಿಕೆ ತೀರಾ ಸರಳವಾದುದು ಮತ್ತದು ಹೊಟ್ಟೆಗೆ ಸಂಬಂಧಿಸಿದ್ದು. ನಮ್ಮ ಬೇಡಿಕೆ ಏನೆಂದರೆ, ಯಾವ ರೀತಿ ನೀವು ಉಳಿದ ವತನದಾರರಿಗೆ ಭೂಮಿಯನ್ನು ನೀಡಿ, ಅವರನ್ನು ವತನದಾರಿಕೆಯಿಂದ ಮುಕ್ತಗೊಳಿಸಿದರೋ, ಅದೇ ರೀತಿ ಇತರ ವತನದಾರರಿಗೂ ಭೂಮಿಯನ್ನು ನೀಡಿ, ಅವರನ್ನು ವತನವಾರಿಯಿಂದ ಮುಕ್ತಗೊಳಿಸಿ, ಉಳಿದ ವತನದಾರರು ಯಾವ ಕೆಲಸವನ್ನು ಮಾಡದೆ ಆರಾಮವಾಗಿ ಕೂತು ಉಣ್ಣುತ್ತಿದ್ದಾರೆ. ಅಂಥದ್ದೇನೂ ನಾವು ಬೇಡುವುದಿಲ್ಲ.

ಸರಕಾರಕ್ಕೆ ಇದು ಒಪ್ಪಿಗೆಯಿರದಿದ್ದರೆ, ಕಾಯ್ದೆ ಕೌನ್ಸಿಲ್ ಎದುರಿಗೆ ಹೋಗಿ, ಸವರ್ಣೀಯ ಹಿಂದೂಗಳ ಪ್ರತಿನಿಧಿ ಮತ್ತು ನಮ್ಮ ಪ್ರತಿನಿಧಿಗಳು ಸೇರಿ ನಾವು ಪರಸ್ಪರ ಈ ಪ್ರಶ್ನೆಯನ್ನು ಬಗೆಹರಿಸಿಕೊಳ್ಳುತ್ತೇವೆ. ಆದರೆ ಅಲ್ಲೂ ಸರಕಾರ ಹಸ್ತಕ್ಷೇಪ ಮಾಡುವ ಪ್ರಯತ್ನ ಮಾಡಿದರೆ, ಅದರ ಪ್ರತೀಕಾರ ಮಾಡದೆ ನಾವು ಬಿಡಲಾರೆವು. ನಮ್ಮ ಪ್ರತೀಕಾರ ಯಾವ ರೀತಿಯದು ಎಂದು ಈಗಲೇ ಹೇಳುವುದು ಸಾಧ್ಯವಿಲ್ಲ. ಏಕೆಂದರೆ ಇದೆಲ್ಲ ಸರಕಾರದ ಮೇಲಿದೆ. ಸರಕಾರವು ಯಾವ ಧೋರಣೆಯನ್ನು ಸ್ವೀಕರಿಸುವುದೋ ಅದರ ಮೇಲಿಂದ ನಮ್ಮ ಪ್ರತೀಕಾರದ ಸ್ವರೂಪ ನಿರ್ಧಾರವಾಗಲಿದೆ. ಏನೇ ಆದರೂ, ನಿಮ್ಮ ಪ್ರಾಣ ಹೋಗುವ ಸಮಯ ಬಂದರೂ, ನೀವು ನಿಮ್ಮ ಭೂಮಿಯನ್ನು ಬಿಡಬೇಡಿ. ಭಾವೂರಾವ ಗಾಯಕವಾಡರನ್ನು ಯಾವಾಗ ಬಂಧಿಸಬಹುದೋ ಹೇಳುವಂತಿಲ್ಲ. ಈಗವರನ್ನು ಬಂಧಿಸದಿದ್ದರೂ ಸಂತೋಷವೇ. ಅವರ ಜಾಗವನ್ನು ತುಂಬಲು ಸಾಕಷ್ಟು ಜನರು ಮುಂದಾಗಿದ್ದಾರೆ. ಈ ಮುಖಂಡರನ್ನು ಬಂಧಿಸಿದ ಬಳಿಕ ಸರಕಾರ ನಿಮ್ಮ ಮೇಲೆ ಖಟ್ಲೆ ಮಾಡಬಹುದು. ಪೊಲೀಸರು ಬರಬಹುದು, ಆದಾಗ್ಯೂ ಬಯ್ಯಲು ಬಿಡಬೇಡಿ. ಭೂಮಿಯನ್ನು ಹಸ್ತಗತ ಮಾಡಿಕೊಂಡರೂ ಕುಟುಂಬ ಸಹಿತ ಹೊಲಗಳಿಗೆ ಹೋಗಿ ಜೋಪಡಿಯನ್ನು ಕಟ್ಟಿ ವಾಸಮಾಡಿ. ಪೊಲೀಸರು ಗೋಲಿಬಾರ್ ಮಾಡಿದರೂ ಹೊಲದಿಂದ ಅಲುಗಾಡಬೇಡಿ. ಒಂದು ಕುಟುಂಬ ಸೆರೆಯಾದರೂ, ಅವರ ಬಂಧು ಬಳಗದವರು ಆ ಸ್ಥಾನಕ್ಕೆ ಬಂದು, ಸರಕಾರದ ವಿರುದ್ಧ ಪ್ರತೀಕಾರ ಮಾಡಿ.

ಈ ಹೋರಾಟದಲ್ಲಿ ನಮಗೆ ಯಾರೂ ಸಹಾಯ ಮಾಡಲಾರರು. ನಾವು ಸ್ವಂತ ಬಲದಿಂದ ಹೋರಾಡಬೇಕು. ಉಳಿದವರ ಸಹಾಯ ಸಿಗದಿದ್ದರೂ ನಾವೇ ಪಣಕ್ಕೆ ಸಿದ್ಧರಾಗಬೇಕು. ನಾನು ಬಳಸಿದ ಭಾಷೆಯಿಂದ ನನ್ನ ಮನಸ್ಸಿನಲ್ಲಿ ಸರಕಾರದ ವಿರುದ್ಧ ಎಂಥ ಅಸಂತೋಷ ಹುಟ್ಟಿಕೊಂಡಿದೆ ಎನ್ನುವ ಕಲ್ಪನೆ ನಿಮಗೂ ಬರಬಹುದು. ಸರಕಾರದ ಈ ಅನ್ಯಾಯಕಾರಕ ಧೋರಣೆಗೆ ಉಳಿದ ಯಾವ ಹೋಲಿಕೆಯಿಲ್ಲ. ಬಾಡೋನಲಿಯಲ್ಲಿ ಕಾಂಗ್ರೆಸ್, ಸರಕಾರದ ಭೂಕಂದಾಯವನ್ನು ನೀಡಲು ಸಂಪೂರ್ಣ ನಿರಾಕರಿಸಿತು. ಆಗ ಸರಕಾರವು ನೇರವಾಗಿ ಕಾಂಗ್ರೆಸಿಗೆ ಶರಣು ಹೋಯಿತು. ಕಾಂಗ್ರೆಸ್ ಕಮಿಶನ್ ನಿರ್ಧರಿಸಿದ ಕಂದಾಯವನ್ನು ಒಪ್ಪಿಕೊಂಡಿತು. ಕಾಂಗ್ರೆಸಿಗೆ ಆರ್ಥಿಕ ಬಲ ಮತ್ತು ಮನುಷ್ಯ ಬಲದ ಕೊರತೆಯಿರಲಿಲ್ಲ. ನಾವು ಈ ಎರಡೂ ದೃಷ್ಟಿಯಿಂದ ಹಿಂದಿದ್ದೇವೆ. ಆದರೂ ನ್ಯಾಯ ಮತ್ತು ನೀತಿಯು ನಮ್ಮ ಪರವಾಗಿದೆ ಎನ್ನುವುದು ನೆನಪಿರಲಿ. ಕೊನೆಗೆ ನಮ್ಮ ನ್ಯಾಯಕ್ಕೆ ಜಯಸಿಗದೇ ಇರದು.


 (ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News