ನಾಲ್ಕು ಮಕ್ಕಳ ಜೀವ ಉಳಿಸಿ ಪ್ರಾಣ ತೆತ್ತ ತುಂಬು ಗರ್ಭಿಣಿ

Update: 2019-02-01 03:40 GMT

ಹೊಸದಿಲ್ಲಿ, ಫೆ.1: ಬೆಂಕಿ ಆಕಸ್ಮಿಕ ಹಾಗೂ ಕಟ್ಟಡ ಕುಸಿತದ ಸಂದರ್ಭದಲ್ಲಿ ತನ್ನ ನಾಲ್ಕು ಮಕ್ಕಳನ್ನು ಅಪಾಯದಿಂದ ಪಾರು ಮಾಡಿದ ಗರ್ಭಿಣಿ ಮಹಿಳೆಯೊಬ್ಬರು ದುರಂತದಲ್ಲಿ ಸಾವನ್ನಪ್ಪಿದ ಘಟನೆ ಗಾಝಿಯಾಬಾದ್‌ನಲ್ಲಿ ಗುರುವಾರ ನಡೆದಿದೆ.

ಈ ವೀರಮಹಿಳೆ ಫಾತಿಮಾ ಎಂಟು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಕುಟುಂಬದ ಮೂಲಗಳು ಹೇಳಿವೆ. ಕುಸಿಯುತ್ತಿದ್ದ ಕಟ್ಟಡದಲ್ಲಿ ಸಿಕ್ಕಿಹಾಕಿಕೊಂಡಿದ್ದ ನಾಲ್ಕು ಮಕ್ಕಳನ್ನು ಬಾಲ್ಕನಿ ಮೂಲಕ ಕೆಳ ರಸ್ತೆ ಪಕ್ಕಕ್ಕೆ ಎಸೆದು ಜೀವ ಉಳಿಸಿದ್ದ ಮಹಿಳೆ, ಆ ವೇಳೆಗೆ ಪ್ರಜ್ಞೆ ಕಳೆದುಕೊಂಡು ಬಿದ್ದರು. ನೋಡನೋಡುತ್ತಿದ್ದಂತೆ ಕಟ್ಟಡ ಕುಸಿದು ಮಹಿಳೆ ಸಮಾಧಿಯಾದಳು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕಟ್ಟಡದ ನೆಲ ಅಂತಸ್ತಿನಲ್ಲಿ ಫಾತಿಮಾ ಅವರ ಪತಿ ನಡೆಸುತ್ತಿದ್ದ ಬೇಕರಿಯಲ್ಲಿ ಮಧ್ಯಾಹ್ನ 12:30ರ ವೇಳೆಗೆ ಬೆಂಕಿ ಆಕಸ್ಮಿಕ ಸಂಭವಿಸಿ ಎರಡು ಅಡುಗೆ ಅನಿಲ ಸಿಲಿಂಡರ್ ಸ್ಫೋಟಿಸಿದ್ದು, ಕಟ್ಟಡ ಕುಸಿತಕ್ಕೆ ಕಾರಣವಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

"ಫಾತಿಮಾ ಮೊದಲ ಮಹಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆಗ ಪತಿ ಹಾಗೂ ಭಾವಂದಿರು ನೆಲಮಹಡಿಯಲ್ಲಿ ಬೆಂಕಿ ನಂದಿಸುವ ಯತ್ನದಲ್ಲಿದ್ದರು. ತುಂಬು ಗರ್ಭಿಣಿಯಾಗಿದ್ದರಿಂದ ಫಾತಿಮಾ ಅವರಿಗೆ ತಪ್ಪಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಸ್ಥಳೀಯರ ಸಲಹೆಯಂತೆ ಫಾತಿಮಾ, ತನ್ನ ಜತೆಗಿದ್ದ ನಾಲ್ವರು ಮಕ್ಕಳನ್ನು ಬಾಲ್ಕನಿ ಮೂಲಕ ರಸ್ತೆ ಪಕ್ಕಕ್ಕೆ ಎಸೆದರು. ಕೆಳಗೆ ನೆರವಿಗೆ ಧಾವಿಸಿದ್ದ ಸಾರ್ವಜನಿಕರು ಕೈಚಾಚಿ ಮಕ್ಕಳನ್ನು ಹಿಡಿದು ರಕ್ಷಿಸಿದರು" ಎಂದು ನೆರೆಮನೆಯ ನಸೀಮ್ ಸೈಫಿ ವಿವರಿಸಿದ್ದಾರೆ. 9 ಹಾಗೂ 7 ವರ್ಷದ ಇಬ್ಬರು ಮಕ್ಕಳಿಗೆ ಗಾಯಗಳಾಗಿದ್ದು, ಪುಟ್ಟ ಹೆಣ್ಣುಮಕ್ಕಳಿಬ್ಬರು ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News