ಅಂಬೇಡ್ಕರ್ ರನ್ನು ‘ಉಲ್ಲೇಖಿಸಿ’ ದಲಿತ-ಮುಸ್ಲಿಂ ಮೈತ್ರಿ ವಿರುದ್ಧ ‘ಎಚ್ಚರಿಸಿದ’ ಭಾಗವತ್

Update: 2019-02-01 11:04 GMT

ಪ್ರಯಾಗ್ ರಾಜ್, ಫೆ.1: “ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮುಸ್ಲಿಮರ ಕೆಟ್ಟ ಸಂಚುಗಳು ಬಗ್ಗೆ ಚೆನ್ನಾಗಿ ತಿಳಿದಿತ್ತು. ಮುಸ್ಲಿಮರೊಂದಿಗೆ ಯಾವುದೇ ವಿಧದ ನಂಟು (ರಾಜಕೀಯ) ಹೊಂದದಂತೆ ಅವರು ಎಚ್ಚರಿಸಿದ್ದರು'' ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಇಲ್ಲಿ ಆರಂಭಗೊಂಡಿರುವ ಎರಡು ದಿನದ ಧರ್ಮ ಸಂಸತ್ ನಲ್ಲಿ ಹೇಳಿದರು.

“ಈಗ ದಲಿತ-ಮುಸ್ಲಿಂ ಮೈತ್ರಿಗೆ ಪ್ರಯತ್ನಿಸಲಾಗುತ್ತಿದೆ. ಈ ಜಿಹಾದಿಗಳು ನಂಬಲರ್ಹರಲ್ಲ ಎಂದು ಅಂಬೇಡ್ಕರ್ ಅವರೇ ಹೇಳಿದ್ದರು. ನಾವು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು'' ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ದಲಿತ-ಮುಸ್ಲಿಂ ಮೈತ್ರಿಯ ಬಗ್ಗೆ ಮಾತನಾಡಲಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಬಂದಿದೆ.

ಹಿಂದು ಧರ್ಮದಿಂದ ಬೇರೆ ಧರ್ಮಗಳಿಗೆ ಮತಾಂತರಗೊಂಡವರಲ್ಲಿ ಶೇ 70ರಷ್ಟು ಮಂದಿ ಮರಳಿ ಮಾತೃ ಧರ್ಮಕ್ಕೆ ವಾಪಸಾಗಲು ಇಚ್ಛಿಸುತ್ತಿದ್ದಾರೆ ಎಂದ ಭಾಗವತ್, “ನಮ್ಮ ಬಾಗಿಲುಗಳು ಅವರಿಗೆ ತೆರೆದಿವೆ. ಅವರು ಮತ್ತೆ ಹಿಂದು ಧರ್ಮಕ್ಕೆ ಮರುಮತಾಂತರಗೊಂಡಾಗ ಅವರಿಗೆ ಎಲ್ಲಾ ರೀತಿಯ ಗೌರವ ದೊರೆಯುವ ಬಗ್ಗೆ ನಾವು ಭರವಸೆ ನೀಡಬೇಕು” ಎಂದು ಭಾಗವತ್ ತಿಳಿಸಿದರು.

ಆದರೆ ಭಾಗ್ವತ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಲಕ್ನೋದ ಅಂಬೇಡ್ಕರ್ ವಿವಿಯ ಸಹಾಯಕ ಪ್ರೊಫೆಸರ್ ಡಾ ಎನ್ ಕೆ ಎಸ್ ಮೋರೆ, “ಭಾಗವತ್ ಹಾಗೆ ಹೇಳಿದ್ದಾರೆಂದಾದರೆ ಅವರು ಅಂಬೇಡ್ಕರ್ ಅವರ ಮಾತುಗಳನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ಅಭಿಪ್ರಾಯಕ್ಕಿಂತ ಭಾಗವತ್ ಹೇಳಿಕೆ ವಿರುದ್ಧವಾಗಿದೆ'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News