ಹಿಂದೂ ಮಹಾಸಭಾ ವೆಬ್ ಸೈಟ್ ಹ್ಯಾಕ್ ಮಾಡಿ ‘ಮುರ್ದಾಬಾದ್’ ಎಂದ ಕೇರಳದ ಹ್ಯಾಕರ್ ಗಳು

Update: 2019-02-01 13:08 GMT

ಹೊಸದಿಲ್ಲಿ, ಫೆ.1: ಟೀಮ್ ಕೇರಳ ಸೈಬರ್ ವಾರಿಯರ್ಸ್ ಎಂಬ ಹ್ಯಾಕರ್ ಗಳ ತಂಡ ಅಖಿಲ ಭಾರತೀಯ ಹಿಂದೂ ಮಹಾಸಭಾದ ಅಧಿಕೃತ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿದೆ. ಮಹಾತ್ಮ ಗಾಂಧಿಯ ಪುಣ್ಯ ತಿಥಿಯಂದು ಮಹಾತ್ಮ ಹತ್ಯೆ ಘಟನೆಯನ್ನು ಪುನರ್ ಸೃಷ್ಟಿಸಲು ಯತ್ನಿಸಿದ ಮಹಾಸಭಾದ ಕೆಲವರ ಕೃತ್ಯಕ್ಕೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ವೆಬ್ ಸೈಟ್ ನ ಮುಖಪುಟದಲ್ಲಿ ‘ಹಿಂದೂ ಮಹಾಸಭಾ ಮುರ್ದಾಬಾದ್' ಎಂದು ಬರೆದು ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಗಾಂಧೀಜಿಯ ಪ್ರತಿಕೃತಿಗೆ ಏರ್ ಪಿಸ್ತೂಲಿನಿಂದ ಗುಂಡು ಹೊಡೆಯುವ ಚಿತ್ರವನ್ನೂ ತೋರಿಸಲಾಗಿದೆ.

“ವಿಶ್ವದ ಜನರಿಗೆ ಸರಿಯಾದ ಹಾದಿಯನ್ನು ಹಾಗೂ ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧೀಜಿ ಸದಾ ಸ್ಫೂರ್ತಿಯಾಗಿರುತ್ತಾರೆ,'' ಎಂದೂ ಹ್ಯಾಕರುಗಳು ವೆಬ್ ಸೈಟ್ ನಲ್ಲಿ ಬರೆದಿದ್ದಾರೆ.

ಅಷ್ಟೇ ಅಲ್ಲ ಸರಕಾರಕ್ಕೆ ಹ್ಯಾಕರುಗಳು ಒಂದು ಫ್ಲ್ಯಾಶ್ ಸಂದೇಶ ಕೂಡ ನೀಡಿದ್ದಾರೆ. “ಈ ನೀರಾನೆ ಮತ್ತಾಕೆಯ ಗೂಂಡಾಗಳನ್ನು ದೇಶದ್ರೋಹದ ಕಾನೂನಿನಂತೆ ಆದಷ್ಟು ಬೇಗ ಬಂಧಿಸಿ'' ಎಂದು ಬರೆಯಲಾಗಿದೆ. “ನಿಮ್ಮ ಮೆದುಳನ್ನು ಕಳೆದುಕೊಳ್ಳುವ ಬದಲು ನಿಮ್ಮ ತೂಕ ಕಳೆದುಕೊಳ್ಳಿ'' ಎಂದೂ ಹ್ಯಾಕರುಗಳು ಹಿಂದು ಮಹಾಸಭಾ ನಾಯಕಿ ಪೂಜಾಗೆ ಸಲಹೆ ನೀಡಿದ್ದಾರೆ.

ಗಾಂಧೀಜಿ ಹತ್ಯೆ ಘಟನೆ ಪುನರ್ ಸೃಷ್ಟಿ ನಡೆಸಿದ ಹಿಂದು ಮಹಾಸಭಾ ನಾಯಕಿಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಮಹಾಸಭಾ ಕಚೇರಿಗೆ ಧಾವಿಸಿ ಅಲ್ಲಿದ್ದ ಇಬ್ಬರು ಸದಸ್ಯರನ್ನು ಈಗಾಗಲೇ  ಬಂಧಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಇದೀಗ ವೆಬ್ ಸೈಟನ್ನು ಸರಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News