ಉನ್ನತ ಶಿಕ್ಷಣ ಉಚಿತವಾಗಿ, ಗುಣಾತ್ಮಕವಾಗಿ ನೀಡಿ: ನ್ಯಾ.ನಾಗಮೋಹನ್ ದಾಸ್

Update: 2019-02-01 14:56 GMT

ಬೆಂಗಳೂರು, ಫೆ.1: ಮೀಸಲಾತಿ ಕೊಟ್ಟು ಜನರನ್ನು ದಿಕ್ಕು ತಪ್ಪಿಸುವ ಬದಲು ಉನ್ನತ ಶಿಕ್ಷಣವನ್ನು ಉಚಿತವಾಗಿ, ಗುಣಾತ್ಮಕವಾಗಿ ನೀಡಬೇಕು ಮತ್ತು ಸರಕಾರಗಳು ಉದ್ಯೋಗ ಸೃಷ್ಟಿಯತ್ತ ಹೆಜ್ಜೆ ಹಾಕಲಿ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್ ದಾಸ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನ್ಯಾಷನಲ್ ಹ್ಯೂಮನ್ ರೈಟ್ಸ್ ಡಿಫೆಂಡರ್ಸ್‌ ಕೌನ್ಸಿಲ್ ಆಯೋಜಿಸಿದ್ದ 'ಆರ್ಥಿಕ ಮೀಸಲಾತಿ; ಸಂವಿಧಾನಕ್ಕೆ ಸವಾಲೆಸೆದ ವಿಕೃತಿ' ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಒಂದು ದಿನದಲ್ಲಿ ರಾಜ್ಯಸಭೆ, ಎರಡನೇ ದಿನದಲ್ಲಿ ಲೋಕಸಭೆ, ಮೂರನೇ ದಿನದಲ್ಲಿ ರಾಷ್ಟ್ರಪತಿ ಅಂಕಿತವಾಗಿ ನಾಲ್ಕನೇ ದಿನಕ್ಕೆ ಗುಜರಾತ್‌ನಲ್ಲಿ ಬಿಲ್ ಜಾರಿಯಾಗುವ ವ್ಯವಸ್ಥೆ ಆರೋಗ್ಯಕಾರಿ ಬೆಳವಣಿಗೆಯಲ್ಲ. ಜನರಿಂದ ಈಗಾಗಲೇ ಇಂತಹ ಪಾರ್ಲಿಮೆಂಟ್ ಬೇಕಾ ಎಂಬ ಪ್ರಶ್ನೆ ಬಂದಿದೆ. ಇಂದು ಸರಕಾರಗಳೆ ಜನರಿಗೆ ತೊಂದರೆ ಕೊಡುತ್ತಿವೆ. ಇನ್ನು, ಜನರು ಎಲ್ಲಿಗೆ ಹೋಗಬೇಕಿದೆ. ಹೀಗಾಗಿ ಪಾರ್ಲಿಮೆಂಟ್ ಒಳಗಿನ ಕೊಳಕನ್ನು ಕಿತ್ತು ಹಾಕಬೇಕು. ಇಂತಹ ಮೀಸಲಾತಿ ಬಿಲ್‌ಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿವೆ ಎಂದು ನುಡಿದರು.

ಇಂದು ಪ್ರತಿಭೆಗಳು ಯಾವುದೇ ಜಾತಿ- ಧರ್ಮ, ವರ್ಗದಲ್ಲಿ ಇಲ್ಲ. ಬದಲಿಗೆ ಹಳ್ಳಿ ಹಳ್ಳಿಗಳಲ್ಲೂ ಇದ್ದು ಪ್ರತಿಭೆಗಳನ್ನು ಬೆಳೆಸಬೇಕು. ಆದರೆ ಇಂದು ಸಾಮಾಜಿಕ ನ್ಯಾಯ ಇಲ್ಲವಾಗಿದೆ. ಶಿಕ್ಷಣ, ಆರೋಗ್ಯ, ಆಹಾರ ಮತ್ತು ಬದುಕು ಮೂಲಭೂತ ಹಕ್ಕುಗಳಾಗಬೇಕು ಈ ಮೂಲಕ ಅಸಮಾನತೆಯ ಭಾರತವನ್ನು ದೂರಮಾಡಬೇಕು ಎಂದರು.

ತಿದ್ದುಪಡಿ ಜನಪರವಾಗಿರಲಿ: 8 ಲಕ್ಷಕ್ಕೂ ಕಡಿಮೆ ಆದಾಯ, 5 ಎಕರೆಗಿಂತ ಕಡಿಮೆ ಜಮೀನು, ಸಾವಿರ ಚದರ ಅಡಿ ಮನೆ ಇರುವವರು ದೇಶದಲ್ಲಿ ಶೇ.90ರಷ್ಟು ಮಂದಿ ಇದ್ದಾರೆ. ಇಂತವರಿಗೆ 103ನೇ ತಿದ್ದುಪಡಿ ಮೂಲಕ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರೆಂದು ಶೇ.10ರಷ್ಟು ಮೀಸಲಾತಿ ನೀಡುತ್ತಿರುವುದು ಸರಿಯಾದುದ್ದಲ್ಲ. ದೇಶದಲ್ಲಿ ಆರ್ಥಿಕ ಅಸಮಾನತೆ ತೊಲಗಿ ಎಲ್ಲರ ಅಭಿವೃದ್ಧಿಯಾಗಬೇಕು. ಶೇ.10 ರಷ್ಟು ಮೀಸಲಾತಿ ಮೇಲ್ವರ್ಗದ ಬಡವರಿಗೆ ಪರಿಹಾರವಲ್ಲ. ಸರಕಾರ ಜವಾಬ್ದಾರಿಯಿಂದ ಜನಪರ ತಿದ್ದುಪಡಿ ಮಾಡಲಿ ಎಂದರು.

ಸೈದ್ಧಾಂತಿಕ ಮೌಲ್ಯಕ್ಕೆ ಧಕ್ಕೆ: ಸಾಮಾಜಿಕ ನ್ಯಾಯ ಸಂವಿಧಾನದ ಮೂಲ ತತ್ವವಾಗಿದ್ದು, ಮೀಸಲಾತಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ನ್ಯಾಯ ಒದಗಿಸುವ ಒಂದು ಸಣ್ಣ ಪ್ರಯತ್ನವಷ್ಟೇ, ಆದರೆ, ಶೇ.10 ರಷ್ಟು ಆರ್ಥಿಕ ಮೀಸಲಾತಿಯನ್ನು ನೀಡುತ್ತಿರುವುದು ಇರುವ ಅವಕಾಶವನ್ನು ಹಂಚುವ ಪ್ರಕ್ರಿಯೆಯಾಗುತ್ತದೆ. ಅಲ್ಲದೆ, ಮೀಸಲಾತಿಯ ಸೈದ್ಧಾಂತಿಕ ಮೌಲ್ಯಕ್ಕೆ ಧಕ್ಕೆಯಾಗುತ್ತದೆ ಎಂದು ನಾಗಮೋಹನ್ ದಾಸ್ ಹೇಳಿದರು.

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್. ಕಾಂತರಾಜ್ ಮಾತನಾಡಿ, ಇಂದಿನ ಮೀಸಲಾತಿ ಸಂವಿಧಾನ ವಿರೋಧಿ ಪರಂಪರೆಯನ್ನು ತೋರಿಸುತ್ತದೆ. ಮೀಸಲಾತಿ ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ, ಮೌಲ್ಯಕ್ಕೆ ವಿರುದ್ಧವಾಗಿದೆ. ಇದು ಪರಿಹಾರವಲ್ಲ, ಇಂದು ಜನರಿಗೆ ಬೇಕಾದ ಮೀಸಲಾತಿ ನೀಡಬೇಕೆ ವಿನಃ, ಜನ ವಿರೋಧಿ ಮೀಸಲಾತಿಯನ್ನಲ್ಲ ಎಂದರು.

ಯಾವುದೇ ತಿದ್ದುಪಡಿಗಳನ್ನು ಮಾಡಿದರೂ ಸಂವಿಧಾನ ಉದ್ದೇಶದ ಪೂರಕವಾಗಿರುವಂತ ಅಂಶಗಳನ್ನು ಮಾಡಬೇಕು. ಜಾತಿ ವ್ಯವಸ್ಥೆ ಸಾಮಾಜಿಕ ನ್ಯಾಯವನ್ನು ನೀಡುತ್ತವೆ. ಅಂದು ಜಾತಿ ವ್ಯವಸ್ಥೆಯನ್ನು ಆಧರಿಸಿ ಮೀಸಲಾತಿ ನೀಡಿದ್ದು, ಇಂದು ಜಾತಿ ಆಧರಿಸಿಯೇ ಮೀಸಲಾತಿ ನೀಡಬೇಕೇ ವಿನಃ ಆರ್ಥಿಕ ಮೀಸಲಾತಿ ನಿಜಕ್ಕೂ ಅಪಾಯಕಾರಿ ಎಂದರು.

6 ಲಕ್ಷದ 4 ಸಾವಿರ ಉದ್ಯೋಗ ಖಾಲಿ

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಿ, ಉದ್ಯೋಗ, ಶಿಕ್ಷಣದ ಅವಕಾಶ ಹೆಚ್ಚು ಮಾಡಬೇಕು. ಶೇ.97.3 ರಷ್ಟು ಖಾಸಗಿ ಪಾಲು, ಶೇ 2.7ರಷ್ಟು ಸರಕಾರಿ ಪಾಲು. ಹೀಗಾಗಿ ಉದ್ಯೋಗಗಳೂ ಬೇಕಾಗಿವೆ. ಮಿಲಿಟರಿ, ಕೋರ್ಟ್ ರಾಜಕೀಯ, ಸಂಶೋಧನೆಯಲ್ಲಿ ಮೀಸಲಾತಿ ಇಲ್ಲ. ಶೇ 4/1 ಭಾಗ ಸದಾ ಖಾಲಿ ಇರುತ್ತವೆ. ಕೇಂದ್ರದಲ್ಲಿ 34 ಲಕ್ಷ ಹುದ್ದೆಗಳಿವೆ. 6 ಲಕ್ಷದ 4 ಸಾವಿರ ಉದ್ಯೋಗ ಖಾಲಿ ಇವೆ. ಪ್ರತಿ ವರ್ಷ ಆರು ಲಕ್ಷ ಜನ ನಿವೃತ್ತಿ ಆಗುತ್ತಾರೆ. ಆದರೆ, 65 ಸಾವಿರ ಉದ್ಯೋಗ ಸಿಗುವುದಿಲ್ಲ.

-ನಾಗಮೋಹನ್ ದಾಸ್, ನಿ.ನ್ಯಾಯಮೂರ್ತಿ

ಶೇಕಡಾವಾರು ಸಂಪತ್ತು

ದೇಶದ ಶೇ.60 ರಷ್ಟು ಸಂಪತ್ತು ಶೇ.1 ರಷ್ಟು ಜನರ ಬಳಿಯಿದ್ದು, ಶೇ.20 ರಷ್ಟು ಸಂಪತ್ತು ಶೇ.9 ರಷ್ಟು ಜನರ ಬಳಿ ಹಾಗೂ ಕೇವಲ ಶೇ.20 ರಷ್ಟು ಸಂಪತ್ತು ಮಾತ್ರ ಶೇ.90 ರಷ್ಟು ಜನರಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News