ರಾಜ್ಯದ ಜೇನಿಗೆ ರಫ್ತು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ: ಕೃಷಿ ವಿವಿ ಕುಲಪತಿ ಡಾ.ರಾಜೇಂದ್ರ ಪ್ರಸಾದ್

Update: 2019-02-01 17:51 GMT

ಬೆಂಗಳೂರು, ಫೆ.1: ರಾಜ್ಯದಲ್ಲಿ ಉತ್ಪಾದಿಸುತ್ತಿರುವ ಜೇನಿಗೆ ಔಷಧೀಯ ಗುಣವಿದ್ದು, ರಫ್ತು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ರಾಜೇಂದ್ರ ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಗಾಂಧಿ ಕೃಷಿ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರಾಯೋಜನೆ ಮತ್ತು ತೋಟಗಾರಿಕೆ ಮಿಷನ್, ಖಾದಿ ಗ್ರಾಮೋದ್ಯೋಗ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಜೇನುಕೃಷಿ ತಾಂತ್ರಿಕ ವಿಚಾರ ಸಂಕಿರಣ ಮತ್ತು ಮಧುಮೇಳ ಹಾಗೂ ಅಧಿಕ ಬೆಳೆ ಇಳುವರಿ ಮತ್ತು ಸುಸ್ಥಿರ ಆದಾಯಕ್ಕಾಗಿ ಜೇನುಕೃಷಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಉತ್ಪಾದನೆಗೊಳ್ಳುತ್ತಿರುವ ಜೇನಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಹೀಗಾಗಿ ರೈತರು ಇಲಾಖೆಯ ಯೋಜನೆಗಳ ಮೂಲಕ ತಾಂತ್ರಿಕ ತರಬೇತಿ ಸೇರಿದಂತೆ, ನಮ್ಮಲ್ಲಿರುವ ಸೌಲಭ್ಯ ಉಪಯೋಗಿಸಿಕೊಂಡು ಉತ್ತಮವಾಗಿ ಜೇನು ಕೃಷಿ ಮಾಡಬೇಕೆಂದು ಅವರು ಆಶಿಸಿದರು.

ಭಾರತದಲ್ಲಿ ಪ್ರತ್ಯೇಕ ಜೇನು ವಿಭಾಗವಿರುವುದು ನಮ್ಮ ಕೃಷಿ ವಿಶ್ವವಿದ್ಯಾಲಯದಲ್ಲಿ ಮಾತ್ರ. ನಮ್ಮಲ್ಲಿ ನಡೆಸಿದ ಸಂಶೋಧನೆಯ ಫಲವನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಇಲ್ಲಿ ಜೇನು ಕೃಷಿಗೆ ಅಗತ್ಯವಿರುವ ಮಾಹಿತಿ ಸೇರಿದಂತೆ ಮಾರುಕಟ್ಟೆ ವ್ಯಾಪ್ತಿಯನ್ನು ತಿಳಿಸಲಾಗುತ್ತದೆ ಎಂದು ಅವರು ಹೇಳಿದರು.

ಡಾ.ಟಿ.ಎಸ್.ಮೋಸಸ್ಸ್ ಮಾತನಾಡಿ, ದಕ್ಷಿಣ ಭಾರತದಲ್ಲಿ ಜೇನುಕೃಷಿ ಮಾಡಲು ಸಾಕಷ್ಟು ವಿಪುಲ ಅವಕಾಶವಿದೆ. ಇದಕ್ಕೆ ಅಗತ್ಯವಾದ ಪೂರಕ ವಾತಾವರಣವಿದ್ದು, ಬಯಲುಸೀಮೆ, ಕರಾವಳಿ, ಸಹ್ಯಾದ್ರಿ ತಪ್ಪಲಿನಲ್ಲಿ ಜೇನುಗಳಿಗೆ ಅಗತ್ಯವಿರುವ ಸಸ್ಯ ಸಂಪತ್ತು ಇದೆ. ಇದನ್ನು ಜೇನು ಸಾಕಾಣಿಕೆದಾರರು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಕರ್ನಾಟಕ ಜೇನು ಕೃಷಿಯಲ್ಲಿ ಮುಂಚೂಣಿಯಲ್ಲಿದ್ದು ರಫ್ತು ಮಾಡುವಷ್ಟು ಉತ್ಪಾದನೆ ಮಾಡುತ್ತಿದೆ ಎಂದ ಅವರು, ಜೇನು ಕೃಷಿಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ, ಕ್ಲಸ್ಟರ್ ಯೋಜನೆಯ ಮೂಲಕ ಹೊನ್ನಾವರ ಪುತ್ತೂರಿನಲ್ಲಿ ಆರಂಭಿಸಿದ್ದೇವೆ. ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಸ್ತರಣಾ ನಿರ್ದೇಶಕ ಡಾ.ಎಂ.ಎಸ್.ನಟರಾಜು, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಡಾ.ಕೆ.ಹೇಮಲತಾ, ಜೇನುಕೃಷಿ ವಿಭಾಗದ ಮುಖ್ಯಸ್ಥ ಡಾ.ಜಿ.ಸಿ.ಕುಬೇರಪ್ಪ, ಡಾ.ಭೈರೇಗೌಡ, ಡಾ.ಆರ್.ಸಿ.ಗೌಡ ಸೇರಿ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News