ಕೇಂದ್ರ ಸರಕಾರದ ಮಧ್ಯಂತರ ಬಜೆಟ್ ರೈತಪರ: ಆರ್.ಅಶೋಕ್

Update: 2019-02-02 14:07 GMT

ಬೆಂಗಳೂರು, ಫೆ.2: ಕೇಂದ್ರ ಸರಕಾರದ ಮಂಡಿರುವ ಮಧ್ಯಂತರ ಬಜೆಟ್ ರೈತ ಪರವಾಗಿದೆ ಎಂಬುದಕ್ಕೆ ಇಡೀ ದೇಶದ ಬಿಜೆಪಿ ಕಾರ್ಯಕರ್ತರಿಗೆ ಸಂತೋಷವಾಗುತ್ತದೆ ಎಂದು ಉಪಮುಖ್ಯಮಂತ್ರಿ ಆರ್.ಅಶೋಕ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಪುರಭವನದ ಮುಂಭಾಗದಲ್ಲಿ ಆಯೋಜಿಸಿದ್ದ ದೇಶದ ಜನತೆಗೆ ಜನಪರವಾದ, ರೈತಪರವಾದ ಬಜೆಟ್‌ನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿಯನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರದ ಜನಪರ ಬಜೆಟ್‌ನ್ನು ನೋಡಿ ಕಾಂಗ್ರೆಸ್ ನಾಯಕರಿಗೆ ಸಹಿಸಲಾಗುತ್ತಿಲ್ಲವೆಂದು ಆರೋಪಿಸಿದರು.

ರೈತರಿಗೆ ಸಾಲ ಮನ್ನಾ ಮಾಡಿ ಅದನ್ನೇ ದೊಡ್ಡದೆಂದು ಬಿಂಬಿಸಿಕೊಳ್ಳುತ್ತಿದ್ದ ಕಾಂಗ್ರೆಸ್ಸಿಗರಿಗೆ ಕೇಂದ್ರದ ಬಜೆಟ್‌ನಲ್ಲಿ ಬಡ ರೈತರಿಗೆ ಪ್ರತಿವರ್ಷ 6 ಸಾವಿರ ರೂ.ನೀಡುವ ಯೋಜನೆ ಗಮನಿಸಿ ಅಸೂಯೆ ಆಗಿದೆ. ಸಾಲಮನ್ನಾ ಒಂದು ಬಾರಿ ಮಾತ್ರ ರೈತರಿಗೆ ನೆರವಾಗುತ್ತದೆ. ಆದರೆ, ಪ್ರತಿವರ್ಷ ಆರು ಸಾವಿರ ರೂ. ನೀಡುವ ಯೋಜನೆ ಮಾತ್ರ ರೈತಪರವಾದದ್ದೆಂದು ಅವರು ಅಭಿಪ್ರಾಯಿಸಿದರು.

ವಿಧಾನಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಕೇಂದ್ರದ ಮಧ್ಯಂತರ ಬಜೆಟ್ ಗಮನಿಸಿ ಎಲ್ಲ ವಿರೋಧ ಪಕ್ಷಗಳು ದಿಕ್ಕಾಪಾಲಾಗಿವೆ. ಈ ಬಜೆಟ್‌ನಲ್ಲಿ ರೈತರು, ಕಾರ್ಮಿಕರು, ಮಧ್ಯಮ ವರ್ಗದವರು ಹೀಗೆ ಎಲ್ಲರ ಹಿತ ಕಾಯುವ ಕಾರ್ಯಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಭಿನಂದನಾ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News