ಎಲ್ಲ ವಾರ್ಡ್‌ಗಳಲ್ಲಿ ಜೈವಿಕ ಅನಿಲ ಘಟಕಗಳ ಆರಂಭ: ಬಿಬಿಎಂಪಿ ಮೇಯರ್ ಗಂಗಾಂಬಿಕೆ

Update: 2019-02-02 14:10 GMT

ಬೆಂಗಳೂರು, ಫೆ. 2: ಯಡಿಯೂರು ವಾರ್ಡ್‌ನಲ್ಲಿರುವ ರೀತಿಯಲ್ಲಿಯೇ ನಗರದಲ್ಲಿ ಸ್ಥಳಾವಕಾಶವಿರುವ ಎಲ್ಲ ವಾರ್ಡ್‌ಗಳಲ್ಲಿ ಜೈವಿಕ ಅನಿಲ ಘಟಕಗಳ ಆರಂಭಕ್ಕೆ ಮುಂದಿನ ಬಜೆಟ್‌ನಲ್ಲಿ ಅನುದಾನ ನೀಡಲಾಗುತ್ತದೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹೇಳಿದ್ದಾರೆ.

ಯಡಿಯೂರು ವಾರ್ಡ್‌ನಲ್ಲಿ 250 ಕಿ.ಲೋ ವ್ಯಾಟ್ ಸಾಮರ್ಥ್ಯದ ಜೈವಿಕ ಅನಿಲ ಘಟಕದ ಉದ್ಘಾಟನೆ ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈವಿಕ ಘಟಕಗಳ ಆರಂಭದಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆಯೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ಕೆಲ ವಾರ್ಡ್‌ಗಳಲ್ಲಿ ಜೈವಿಕ ಅನಿಲ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದ್ದು, ಅದನ್ನು ದುರಸ್ತಿಗೊಳಿಸಲು ಸಂಬಂಧಪಟ್ಟ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ನಗರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿವಾರ್ಡ್‌ಗೆ 2 ಜೈವಿಲ ಅನಿಲ ಘಟಕಗಳಂತೆ 400 ಘಟಕಗಳನ್ನು ಆರಂಭಿಸುವ ಮೂಲಕ ಆಯಾ ವಾರ್ಡ್‌ಗಳಲ್ಲಿ ಸಂಗ್ರವಾಗುವ ಕಸವನ್ನು ಇಲ್ಲಿಗೆ ಪೂರೈಕೆ ಮಾಡಲಾಗುತ್ತದೆ. ಇದರಿಂದ ತ್ಯಾಜ್ಯ ವಿಲೇವಾರಿ ಘಟಕಗಳ ಸಾಗಾಣಿಕೆ ವೆಚ್ಚವು ಉಳಿತಾಯವಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.

ನಗರದಲ್ಲಿ ಪ್ರತಿನಿತ್ಯ 2 ಸಾವಿರ ಟನ್ ಹಸಿ ಕಸ ಸಂಗ್ರಹವಾಗುತ್ತಿದೆ. ಇದನ್ನು ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಾಗಿಸುವ ಬದಲು ಜೈವಿಕ ಅನಿಲ ಘಟಕಗಳಿಗೆ ಪೂರೈಸಬಹುದಾಗಿದೆ. ಯಡಿಯೂರು ವಾರ್ಡ್‌ನಲ್ಲಿ ಸ್ಥಾಪಿಸಿರುವ 250 ಕಿ.ಲೋ ವ್ಯಾಟ್ ಸಾಮರ್ಥ್ಯದ ಜೈವಿಕ ಅನಿಲ ಘಟಕಕ್ಕೆ ಒಂದೂವರೆ ಕೋಟಿ ರೂ. ವೆಚ್ಚವಾಗಿದೆ ಎಂದು ಮಾಹಿತಿ ನೀಡಿದರು.

ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸದಿಂದ ಪ್ರತಿನಿತ್ಯ 250 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಲಿದ್ದು, ಇದರಿಂದ ಬಿಬಿಎಂಪಿಗೆ 32 ಲಕ್ಷ ರೂ. ಉಳಿತಾಯ ಮಾಡುವುದರೊಂದಿಗೆ ಬೆಸ್ಕಾಂ ಮುಕ್ತ ವಾರ್ಡ್ ಎಂದು ಹೆಸರು ಪಡೆಯಲಿದೆ. ಮೂರು ವರ್ಷಗಳ ಹಿಂದೆ ಆರಂಭವಾದ ಈ ಘಟಕದಲ್ಲಿ ಪ್ರತಿನಿತ್ಯ 50 ಕಿಲೋ ವ್ಯಾಟ್ ವಿದ್ಯುತ್ಚಕ್ತಿ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ, ಈಗ ಅದನ್ನು 250 ಕಿಲೋ ವ್ಯಾಟ್‌ಗೆ ವಿಸ್ತರಿಸಲಾಗಿದೆ. ಅತಿ ಹೆಚ್ಚು ಸಾಮರ್ಥ್ಯದ ಜನರೇಟರ್ ಹೊಂದಿರುವ ಘಟಕ ಎಂದು ಹೆಗ್ಗಳಿಕೆ ಪಡೆದಿದೆ.

ಈ ಘಟಕದ ಮೂಲಕ ಉತ್ಪಾದಿಸುವ 250 ಕಿ.ಲೋ ವ್ಯಾಟ್ ವಿದ್ಯುತ್‌ನಲ್ಲಿ 150 ಕಿ.ಲೋ ವ್ಯಾಟ್ ವಿದ್ಯುತ್ ಅನ್ನು ಯಡಿಯೂರು ವಾರ್ಡ್‌ನಲ್ಲಿರುವ 17 ಪಾಲಿಕೆ ಕಟ್ಟಡಗಳು, 13 ಉದ್ಯಾನವನಗಳು, ಮತ್ತು 3 ಕಿ.ಲೋ ಮೀಟರ್ ಉದ್ದದ ಮಾದರಿ ಪಾದಚಾರಿ ಮಾರ್ಗಗಳಲ್ಲಿರುವ ವಿದ್ಯುತ್ ದೀಪಗಳನ್ನು ಬೆಳಗಿಸಲು ಬಳಸಲಾಗುವುದು. ಉಳಿದ 100 ಕಿ.ಲೋ. ವ್ಯಾಟ್ ವಿದ್ಯುತ್ ಬೆಸ್ಕಾಂಗೆ ಮಾರಾಟ ಮಾಡಲಾಗುವುದು. ಇದರಿಂದಲೂ ಪ್ರತಿ ತಿಂಗಳು 6 ಲಕ್ಷ ರೂಪಾಯಿ ಹಣ ಪಾಲಿಕೆಯಲ್ಲಿಯೇ ಉಳಿಯಲಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಉಪ ಮೇಯರ್ ಭದ್ರೇಗೌಡ, ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್, ಜಂಟಿ ಆಯುಕ್ತ ಸರ್ಪರಾಜ್ ಖಾನ್, ವಿಶ್ವನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸರ್ವೆ ನಡೆಸಲು ಮನವಿ

ಯಡಿಯೂರು ವಾರ್ಡ್ ಮಾದರಿಯಲ್ಲಿಯೇ ಉಳಿದ ಎಲ್ಲ ವಾರ್ಡ್‌ಗಳಲ್ಲೂ ಈ ರೀತಿಯ ಜೈವಿಕ ಅನಿಲ ಉತ್ಪಾದನಾ ಘಟಕಗಳ ಆರಂಭ ಮಾಡಲು ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಸರ್ವೆ ಕೆಲಸ ಕೈಗೆತ್ತಿಕೊಳ್ಳಬೇಕು. ಇದರಿಂದ ನಗರದ ಪರಿಸರ ಕಾಪಾಡಿದಂತಾಗುತ್ತದೆ.

-ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News