ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಸಣ್ಣ ರೈತರ ಪಟ್ಟಿ ಶೀಘ್ರ ಸಿದ್ಧಪಡಿಸಲು ರಾಜ್ಯಗಳಿಗೆ ಸೂಚನೆ

Update: 2019-02-02 15:00 GMT

ಹೊಸದಿಲ್ಲಿ, ಫೆ.2: ಕೇಂದ್ರ ಸರಕಾರ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಅರ್ಹರಾಗಿರುವ ಸಣ್ಣ ರೈತರನ್ನು ಶೀಘ್ರ ಗುರುತಿಸಿ ಪಟ್ಟಿ ಸಿದ್ಧಪಡಿಸುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚನೆ ರವಾನಿಸಿದೆ.

ಮಾರ್ಚ್ ಅಂತ್ಯದೊಳಗೆ ಈ ಯೋಜನೆಯಡಿ ಪ್ರಥಮ ಕಂತಾದ 2 ಸಾವಿರ ರೂ. ಮೊತ್ತವನ್ನು ಸಣ್ಣ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ನಿರ್ಧರಿಸಲಾಗಿದ್ದು, ಶೀಘ್ರ ಪಟ್ಟಿ ಸಿದ್ಧಪಡಿಸುವಂತೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಫೆ.1ರಂದೇ ಪತ್ರ ರವಾನಿಸಲಾಗಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಿಳಿಸಿದ್ದಾರೆ. ಈ ಆರ್ಥಿಕ ವರ್ಷದಲ್ಲಿ 12 ಕೋಟಿ ರೈತರಿಗೆ ನೀಡಲು 20 ಸಾವಿರ ಕೋಟಿ ರೂ. ಈಗಾಗಲೇ ತೆಗೆದಿರಿಸಲಾಗಿದೆ. ಮಧ್ಯಾಂತರ ಬಜೆಟ್ ಸಣ್ಣ ಮತ್ತು ಬಡ ರೈತರ ಪರ ಸರಕಾರಕ್ಕೆ ಇರುವ ಕಾಳಜಿಗೆ ಹಿಡಿದಿರುವ ಕೈಗನ್ನಡಿಯಾಗಿದೆ .

ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಈ ಯೋಜನೆಯನ್ನು ಶೀಘ್ರ ಜಾರಿಗೊಳಿಸಲು ಹೆಚ್ಚಿನ ಸಮಸ್ಯೆಯಾಗದು. ಆದರೆ ಈಶಾನ್ಯ ರಾಜ್ಯದಲ್ಲಿ ತುಸು ವಿಳಂಬವಾಗಬಹುದು ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

  ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಫಲಾನುಭವಿಗಳಾದ ಸಣ್ಣ ಮತ್ತು ಬಡ ರೈತರ ಕುರಿತ ಸಮಗ್ರ ವಿವರ(ಹೆಸರು, ಲಿಂಗ, ಎಸ್ಸಿ/ಎಸ್ಟಿ ವರ್ಗಕ್ಕೆ ಸೇರಿದವರೇ ಇತ್ಯಾದಿ ಮಾಹಿತಿ)ಗಳನ್ನು ಸಿದ್ಧಪಡಿಸಿ ಗ್ರಾಮಪಂಚಾಯತ್ ನೋಟಿಸ್ ಬೋರ್ಡ್‌ನಲ್ಲಿ ಪ್ರದರ್ಶಿಸಬೇಕು. ಈ ಆರ್ಥಿಕ ವರ್ಷಾಂತ್ಯದೊಳಗೆ ಶೀಘ್ರದಲ್ಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎಂದವರು ಹೇಳಿದ್ದಾರೆ.

ಅಲ್ಲದೆ ಜಮೀನಿನ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ದೇಶದಲ್ಲಿ ಈಗಾಗಲೇ ಜಾರಿಯಲ್ಲಿದೆ. ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭೂದಾಖಲೆ ಈಗಾಗಲೇ ಡಿಜಿಟಲೀಕರಣಗೊಂಡಿದೆ. ತಹಶೀಲ್ದಾರ್ ಕಚೇರಿಗೆ ಹೋಗಿ ರೈತರು ಸರ್ವೆ ನಂಬರ್ ತಿಳಿಸಿದರೆ ಜಮೀನಿನ ದಾಖಲೆಯ ಮುದ್ರಿತ ಪ್ರತಿ ದೊರಕುತ್ತದೆ. ದೇಶದ ಹೆಚ್ಚಿನೆಡೆ ಜಮೀನಿನ ದಾಖಲೆ ಡಿಜಿಟಲೀಕೃತಗೊಂಡಿರುವ ಕಾರಣ ಸಣ್ಣ, ಬಡ ರೈತರನ್ನು ಗುರುತಿಸಲು ಯಾವುದೇ ಸಮಸ್ಯೆಯಾಗದು ಎಂದು ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News