ಅಲ್ಪಸಂಖ್ಯಾತರ ಕಡೆಗಣನೆ: ಕಾಂಗ್ರೆಸ್ ನಾಯಕರ ಬೆವರಿಳಿಸಿದ ಮುಖಂಡರು

Update: 2019-02-02 16:47 GMT

ಬೆಂಗಳೂರು, ಫೆ.2: ಮುಂಬರುವ ಲೋಕಸಭಾ ಚುನಾವಣೆ, ಬಜೆಟ್ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರು ಕರೆದಿದ್ದ ಸಭೆಯಲ್ಲಿ ಸಮುದಾಯದ ಮುಖಂಡರು, ಜನಪ್ರತಿನಿಧಿಗಳಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್ ನಲ್ಲಿ ‌ಕರೆದಿದ್ದ ಸಮುದಾಯದ ಮುಖಂಡರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಸಚಿವರು, ಶಾಸಕರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಅಲ್ಪಸಂಖ್ಯಾತರು ಒಂದು ಕೋಟಿ ಜನಸಂಖ್ಯೆ ಇದ್ದರೂ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ನಮ್ಮ ಸಾಮರ್ಥ್ಯಕ್ಕೆ ಸಮುದಾಯದ ಒಬ್ಬರಾದರು ಇಷ್ಟೊತ್ತಿಗೆ ಉಪ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ, ನಮ್ಮ ಜನಪ್ರತಿನಿಧಿಗಳು ಸಚಿವ ಸ್ಥಾನಕ್ಕಾಗಿ ಒಬ್ಬರ ಕಾಲು ಮತ್ತೊಬ್ಬರು ಎಳೆಯುತ್ತಿದ್ದಾರೆ. ಇನ್ನಾದರೂ ಸಮುದಾಯದ ಹಿತಕ್ಕಾಗಿ ಆಂತರಿಕ ಕಚ್ಚಾಟ ಬಿಟ್ಟು ಒಗ್ಗಟ್ಟಾಗಿ ಎಂದು ಮುಖಂಡರು ಸಲಹೆ ನೀಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮನ್ನು ನಂಬಿ ಶೇ.90ಕ್ಕಿಂತ ಹೆಚ್ಚಿನ ಅಲ್ಪಸಂಖ್ಯಾತರು ಕಾಂಗ್ರೆಸ್ ಗೆ ಮತ ನೀಡಿದ ಪರಿಣಾಮ 80 ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು. ಆದರೆ, ಇದರಿಂದ ಆದ ಪ್ರಯೋಜನವೇನು ಎಂದು ಮುಖಂಡರು ಪ್ರಶ್ನಿಸಿದರು.

ಮುಸ್ಲಿಂ ಸಮುದಾಯ ಕಾಂಗ್ರೆಸ್ ಜೊತೆ ಗುರುತಿಸಿಕೊಂಡ ಪರಿಣಾಮ, ಜೆಡಿಎಸ್ ಪಕ್ಷ ನಮ್ಮನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ, ಸಮುದಾಯದ ಹಿತ ಕಾಪಾಡುವವರು ಯಾರು ಎಂದು ಮುಖಂಡರು ಪ್ರಶ್ನಿಸಿದ್ದಾರೆ. ಸಭೆಯಲ್ಲಿ ವ್ಯಕ್ತವಾದ ಆಕ್ರೋಶದಿಂದ ಕಾಂಗ್ರೆಸ್ ನಾಯಕರು ಅವರಿಗೆ ಉತ್ತರಿಸಲು ಪರದಾಡಿದರು ಎನ್ನಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News