ಭೂಸ್ವಾಧೀನ: ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ರೈತ ಮಹಿಳೆಯರ ಪ್ರತಿಭಟನೆ

Update: 2019-02-02 17:49 GMT

ನೋಯ್ಡ, ಫೆ.2: ವಶಪಡಿಸಿಕೊಂಡಿರುವ ಜಮೀನಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿ ದಿಲ್ಲಿಯಲ್ಲಿ ನಡೆದ ರೈತರ ರ್ಯಾಲಿಯೊಂದರ ಸಂದರ್ಭ , ರೈತ ಮಹಿಳೆಯರು ದಿಲ್ಲಿ- ನೋಯ್ಡಾ ‘ಫ್ಲೈವೇ’ಯಲ್ಲಿ ಮಾನವ ಸರಪಣಿ ರಚಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

2013ರಲ್ಲಿ ಸ್ವಾಧೀನ ಪಡಿಸಿಕೊಂಡಿರುವ ತಮ್ಮ ಜಮೀನಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸುಮಾರು 1,500 ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕಿಸಾನ್ ಉದಯ್ ಅಭಿಯಾನ್ ಎಂಬ ರೈತ ಸಂಘಟನೆ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಗೌತಮ್ ಬುದ್ಧ ನಗರ, ಘಾಝಿಯಾಬಾದ್, ಆಲಿಗಢ ಮತ್ತು ಮೀರತ್‌ನ ರೈತ ಮಹಿಳೆಯರು ಭಾಗವಹಿಸಿದ್ದರು.

2013ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಭೂಸ್ವಾಧೀನ ಕಾನೂನಿನಂತೆ ಪರಿಹಾರ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಈ ಕಾನೂನು ಜಾರಿಯಾಗುವ ಮೊದಲು ನಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದರೂ ಈ ಕಾಯ್ದೆಯ ಪ್ರಕಾರ ನಮಗೆ ಪರಿಹಾರ ಧನ ನೀಡದೆ ವಂಚಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಬೇಡಿಕೆಯ ಬಗ್ಗೆ ಸ್ಥಳೀಯ ಆಡಳಿತವು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಗಮನ ಸೆಳೆಯಬೇಕು ಎಂದು ಕಾಲೇಸಿಂಗ್ ಎಂಬ ರೈತ ಆಗ್ರಹಿಸಿದ್ದಾನೆ.

 ಪ್ರತಿಭಟನಾಕಾರರನ್ನು ಭೇಟಿಯಾದ ಗೌತಮಬುದ್ಧ ನಗರದ ಜಿಲ್ಲಾ ದಂಡಾಧಿಕಾರಿ ಬಿಎನ್ ಸಿಂಗ್, ಈ ವಿಷಯದ ಕುರಿತು ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಗ್ರೇಟರ್ ನೋಯ್ಡದಲ್ಲಿ ಜಾಠ್ ಸಮುದಾಯದ ಪ್ರಾಭಲ್ಯವಿರುವ ಭಟ್ಟಾಪ್ರಸೂಲ್ ಎಂಬ ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ 2011ರಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಹಾಗೂ ಇಬ್ಬರು ರೈತರು ಮೃತಪಟ್ಟಿದ್ದರು. ಇದೀಗ  ಹೊಸ ಕಾನೂನಿನಂತೆ ಹೆಚ್ಚುವರಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮತ್ತೆ ಪ್ರತಿಭಟನೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News