ನಾವು ಸರಕಾರ ರಚಿಸಲು ಸಿದ್ಧ : ಆಪರೇಶನ್ ಕಮಲದ ಸುಳಿವು ನೀಡಿದ ಡಿವಿಎಸ್

Update: 2019-02-03 14:33 GMT

ಬೆಂಗಳೂರು, ಫೆ. 3: ರಾಜ್ಯದಲ್ಲಿನ ಮೈತ್ರಿ ಸರಕಾರದ ಪಾಲುದಾರಾದ ಕಾಂಗ್ರೆಸ್ ಪಕ್ಷದ ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಬೆಂಬಲಿಸದಿದ್ದರೆ ಸರಕಾರ ರಚಿಸಲು ನಾವು ಸಿದ್ಧ ಎಂದು ಆಪರೇಶನ್ ಕಮಲದ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಡಿ.ಸದಾನಂದ ಗೌಡ ಸುಳಿವು ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನ ಅತೃಪ್ತ ಶಾಸಕರಿಂದ ಆಡಳಿತ ಯಂತ್ರ ಕುಸಿದಿದ್ದು, ಮೈತ್ರಿ ಸರಕಾರದ ಇಂದಿನ ಪರಿಸ್ಥಿತಿ ನೋಡಿದರೆ ರಾಜ್ಯದ ಜನತೆ ಅಪೇಕ್ಷೆಯಂತೆ ನಾವು ಒಂದು ನಿರ್ಧಾರಕ್ಕೆ ಬರುವುದು ಅನಿವಾರ್ಯ ಎಂದರು.

‘ಕೇಂದ್ರ ಸರಕಾರದ್ದು ಚುನಾವಣಾ ಬಜೆಟ್’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ. ಆದರೆ, ಅವರು ಫೆ.8ಕ್ಕೆ ಎಂತಹ ಆಯವ್ಯಯ ಮಂಡನೆ ಮಾಡಲಿದ್ದಾರೆ ಎಂದು ಪ್ರಶ್ನಿಸಿದ ಸದಾನಂದಗೌಡ, ಮೈತ್ರಿ ಸರಕಾರದ ಸ್ಥಿತಿಯನ್ನು ನೋಡಿದರೆ ಅವರು ಬಜೆಟ್ ಮಂಡನೆ ಮಾಡುವುದು ಅನುಮಾನ ಎಂದು ಟೀಕಿಸಿದರು.

ಅವರ ಕೋಟೆಯಲ್ಲಿ ಅವರ ಸೈನಿಕರೆ ಅವರ ವಿರುದ್ಧವೇ ಕಾರ್ಯಾಚರಣೆ ನಡೆಸಿದರೆ, ಅದಕ್ಕೆ ನಾವು ಹೊಣೆಯಲ್ಲ. ನಾಪತ್ತೆಯಾಗಿರುವ ಶಾಸಕರನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಭೂಗತ ಪಾತಕಿ ರವಿ ಪೂಜಾರಿಯನ್ನು ಮೈತ್ರಿ ಸರಕಾರ ಬಂಧಿಸಿದೆ ಎಂದು ಕೊಚ್ಚಿಕೊಳ್ಳುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

104 ಮಂದಿ ಶಾಸಕರನ್ನು ಹೊಂದಿರುವ ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಕೂತಿದೆ. ಆದರೆ, ಮೈತ್ರಿ ಸರಕಾರದ ಆಂತರಿಕ ಜಗಳದಿಂದ ಅವರೇ ಬಿದ್ದರೆ ನಾವೇನು ಮಾಡುವುದು ಎಂದು ಪ್ರಶ್ನಿಸಿದ ಅವರು, ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬ ಅಪೇಕ್ಷೆ ಜನತೆಗೆ ಇದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News