ಬಿಜೆಪಿಗೆ ಮುಸ್ಲಿಮರ ಮತದ ಬಗ್ಗೆ ಸಚಿವ ಝಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ

Update: 2019-02-03 14:16 GMT

ಬೆಂಗಳೂರು, ಫೆ.3: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ. ಒಂದು ವೇಳೆ ಯಾರಾದರೂ ಮತ ಹಾಕಿದರೆ ಅವರು ಮುಸ್ಲಿಮರೇ ಅಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಪುನರುಚ್ಚಿಸಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ಆಲ್ ಇಂಡಿಯಾ ಜಮಿಯತುಲ್ ಮಸ್ಸೂರ್ ಕರ್ನಾಟಕ(ನದಾಫ್, ಪಿಂಜಾರ, ಮನ್ಸೂರಿ-ದೂದೆಕುಲಾ ಸಮಾಜಗಳ ಒಕ್ಕೂಟ) ಆಯೋಜಿಸಿದ್ದ, ರಾಷ್ಟ್ರೀಯ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾದರೆ, ಜಾತ್ಯತೀತ ಭಾರತೀಯರು ಆತಂಕದ ವಾತಾವರಣದಲ್ಲಿ ಇರಬೇಕಾಗುತ್ತದೆ. ಹೀಗೆ, ಆಗಬಾರದು ಎನ್ನುವುದು ಎಲ್ಲರ ಆಶಯವಾಗಿದ್ದು, ಮುಸ್ಲಿಮರು ಬಿಜೆಪಿಗೆ ಮಾತ್ರ ಮತ ಹಾಕಬಾರದು. ಜಾತ್ಯತೀತ ಪಕ್ಷಗಳಿಗೆ ಮಾತ್ರ ಮತ ನೀಡಿ ಎಂದರು.

ಮುಂಬರುವ ಲೋಕಸಭೆ ಚುನಾವಣೆ ದೇಶದ ಭವಿಷ್ಯದ ದಿಕ್ಸೂಚಿಯಾಗಿದೆ. ಹೀಗಾಗಿ, ಪ್ರತಿಯೊಬ್ಬ ಮುಸಲ್ಮಾನ ಕಡ್ಡಾಯವಾಗಿ ಮತ ಚಲಾವಣೆ ಮಾಡಬೇಕು ಎಂದ ಅವರು, ರಾಜ್ಯದಲ್ಲಿ ಇಪ್ಪತ್ತಕ್ಕೂ ಅಧಿಕ ಸೀಟುಗಳನ್ನು ಕಾಂಗ್ರೆಸ್ ಗೆಲ್ಲಲ್ಲಿದೆ . ಅಲ್ಲದೆ, ಒಂದೊಂದು ಲೋಕಸಭೆ ಕ್ಷೇತ್ರದಲ್ಲೂ 3ರಿಂದ 5 ಲಕ್ಷವರೆಗೂ ಮುಸ್ಲಿಮರ ಮತಗಳಿವೆ ಎಂದು ಹೇಳಿದರು.

ದೇಶದ ಬದಲಾವಣೆಗಾಗಿ ನಾವು ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದ್ದೆವು. ಆದರೆ ಅವರು ನೀಡಿದ್ದ ಒಂದು ಭರವಸೆಯನ್ನೂ ಈಡೇರಿಸಿಲ್ಲ. ದೇಶದಲ್ಲಿ ಅಸಮಾನತೆ, ಆರ್ಥಿಕ ಸಂಕಷ್ಟ ಸೇರಿದಂತೆ ಬಹು ದೊಡ್ಡ ಸಮಸ್ಯೆಗಳನ್ನು ಅವರು ಹುಟ್ಟು ಹಾಕಿದ್ದಾರೆ. ಹೀಗಾಗಿ, ಅವರನ್ನು ನಾವು ಮತ್ತೆ ಆಯ್ಕೆ ಮಾಡಬಾರದು ಎಂದು ಝಮೀರ್ ತಿಳಿಸಿದರು.

ದೇವೇಗೌಡರು ಸೋಲಿಸಲು ಯತ್ನಿಸಿದರು: ಜೆಡಿಎಸ್ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನನ್ನನ್ನು ಸೋಲಿಸಲು ಯತ್ನಿಸಿದರು. ಅಷ್ಟೇ ಅಲ್ಲದೆ, ಚಾಮರಾಜಪೇಟೆಯಲ್ಲಿಯೇ 15 ದಿನ ವಾಸ್ತವ್ಯ ಹೂಡಿದ್ದರು. ಆದರೆ, ಏನೂ ಪ್ರಯೋಜವಾಗಿಲ್ಲ. ದೇವರ ಆರ್ಶಿವಾದ ದಿಂದ ಮತ್ತೆ ಗೆದ್ದು ಬಂದಿದ್ದೇನೆ ಎಂದು ಅವರು ನುಡಿದರು.

ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ ನನಗೆ ಸಚಿವ ಸ್ಥಾನ ನೀಡಿದ್ದಾರೆ. ಈ ಪಕ್ಷದಲ್ಲಿ ಶಾಸಕರಾದ ರೋಷನ್ ಬೇಗ್, ಎನ್.ಎ.ಹ್ಯಾರಿಸ್ ನನಗಿಂತಲೂ ಹಿರಿಯರು. ಆದರೂ, ಪಕ್ಷದ ಪ್ರಮುಖರು ನನ್ನನ್ನು ಗುರುತಿಸಿದ್ದಾರೆ. ಸಚಿವನ್ನಾಗಿ ಮಾಡಿದ್ದಾರೆ. ಇದಕ್ಕೆ ನಮ್ಮ ಸಮುದಾಯವೇ ಕಾರಣ ಎಂದು ಹೇಳಿದರು.

ರಾಜ್ಯ ವ್ಯಾಪ್ತಿಯಲ್ಲಿ ಬರೋಬ್ಬರಿ 85 ಲಕ್ಷ ಮುಸ್ಲಿಮರ ಜನಸಂಖ್ಯೆ ಇದೆ. ಇದರಲ್ಲಿ 30 ಲಕ್ಷಕ್ಕೂ ಅಧಿಕ ಮಂದಿ ನದಾಫ್, ಪಿಂಜಾರ, ಮನ್ಸೂರಿ ಸಮುದಾ ಯದವರು ಎಂದು ಗುರುತಿಸಲಾಗಿದೆ. ಹೀಗಾಗಿ, ಈ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಮಗ ಮಂಡಳಿ ರಚನೆ ಕುರಿತು ಚಿಂತನೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸಮಾವೇಶದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ ಆರ್.ಎ.ಉಸ್ಮಾನಿ ಮನ್ಸೂರಿ, ಪಶ್ಚಿಮ ಬಂಗಾಳ ಶಾಸಕ ಮೊಹಿದ್ದೀನ್ ಶಮ್ಸ್, ಆಲ್ ಇಂಡಿಯಾ ಜಮಿಯತುಲ್ ಮನ್ಸೂರ್ ಕರ್ನಾಟಕ ಅಧ್ಯಕ್ಷ ಅಮನ್ ಕೊಡಗಲಿ ಮನ್ಸೂರಿ, ಕಾರ್ಯಾಧ್ಯಕ್ಷ ಕೆ.ಎಂ. ಝಮೀರ್ ಮನ್ಸೂರಿ, ಪ್ರಧಾನ ಕಾರ್ಯದರ್ಶಿ ಗೌಸ ಪಾಷಾ ಮನ್ಸೂರಿ ಸೇರಿದಂತೆ ಪ್ರಮುಖರಿದ್ದರು.

ಬೇಡಿಕೆಗಳು..!

* ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿ

* ಜಾತಿ ಪ್ರಮಾಣ ಪತ್ರ ವಿತರಿಸಿ

* ರಾಜಕೀಯ ಮೀಸಲಾತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News