ಬಿಬಿಎಂಪಿ ವ್ಯಾಪ್ತಿಯಲ್ಲಿ 601 ಶೌಚಾಲಯಗಳ ನಿರ್ಮಾಣಕ್ಕೆ ಸಿದ್ಧತೆ

Update: 2019-02-03 17:41 GMT

ಬೆಂಗಳೂರು, ಫೆ.3: ನಗರದ ವ್ಯಾಪ್ತಿಯಲ್ಲಿ ಶೌಚಾಲಯದ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಬಿಬಿಎಂಪಿ ವತಿಯಿಂದ ಹೊಸದಾಗಿ 601 ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ತಯಾರಿ ನಡೆಸಲಾಗುತ್ತಿದೆ.

ಪ್ರತಿವರ್ಷ ನಡೆಯುವ ಸ್ವಚ್ಛ ಸರ್ವೇಕ್ಷಣದಲ್ಲಿ ಉತ್ತಮ ಅಂಕ ಪಡೆಯುವ ಉದ್ದೇಶದಿಂದ ವಿಭಿನ್ನವಾದ ಕಸರತ್ತು ನಡೆಸುತ್ತಿರುವ ಪಾಲಿಕೆಯು ನಗರದಾದ್ಯಂತ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದೆ. ಅದಕ್ಕಾಗಿ ಸ್ಥಳಗಳನ್ನು ಗುರುತಿಸಿದ್ದು, ನಿರ್ಮಾಣ ಕಾಮಗಾರಿ ಆರಂಭಗೊಳ್ಳಬೇಕಿದೆ. ಕಾಮಗಾರಿಯು ಮುಂದಿನ ಅ.2ರೊಳಗೆ ಮುಗಿಸುವ ಗುರಿಯನ್ನಿಟ್ಟುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ವಚ್ಛ ಭಾರತದ ಮಾನದಂಡಗಳ ಪ್ರಕಾರ ಪ್ರತಿ 100 ಪುರುಷರಿಗೆ ಒಂದು ಮತ್ತು 100 ಮಹಿಳೆಯರಿಗೆ ಎರಡು ಶೌಚಾಲಯ ಕೊಠಡಿ ಇರಬೇಕಿದೆ. ಪ್ರತಿ 7 ಕಿ.ಮೀ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಸಾರ್ವಜನಿಕ ಶೌಚಾಲಯವಿರಬೇಕು. ಆದರೆ, 800 ಚ.ಕಿ.ಮೀ ವಿಸ್ತಿರ್ಣವಿರುವ ನಗರದಲ್ಲಿ 613 ಶೌಚಾಲಯಗಳಷ್ಟೆ ಇವೆ. ಇದರಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ಮಾಲ್‌ಗಳಲ್ಲಿರುವ ಶೌಚಾಲಯಗಳೂ ಸೇರಿವೆ.

ನಗರದಲ್ಲಿ ಶೌಚಾಲಯಗಳ ಕೊರತೆಯಿಂದ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಅಲ್ಲದೆ, ಸಮರ್ಪಕವಾದ ನಿರ್ವಹಣೆಯಿಲ್ಲದೆ ನರಳುತ್ತಿವೆ. ಇನ್ನು ಇಲ್ಲಿನ ಶೌಚಾಲಯಗಳಲ್ಲಿ ಅಧಿಕ ಹಣ ಪಡೆಯುವುದಿರಿಂದ ಜನರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ. ಅಲ್ಲದೆ, ಕೆಲವು ಕಡೆಗಳಲ್ಲಿ ಹಲವು ಶೌಚಾಲಯಗಳು ಸ್ಥಗಿತಗೊಂಡಿವೆ.

ಇದೆಲ್ಲದರ ಹಿನ್ನೆಲೆಯಲ್ಲಿ 2016ರ ಸರ್ವೇಯಲ್ಲಿ ನಗರವು 38ನೇ ಸ್ಥಾನ ಪಡೆದಿದ್ದ ನಗರವು 2018ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಬೆಂಗಳೂರಿಗೆ 216 ನೆ ಸ್ಥಾನ ಸಿಕ್ಕಿತ್ತು. ಹೀಗಾಗಿ, ಈ ಸಲ ಅಗ್ರ 50ರಲ್ಲಿ ಸ್ಥಾನ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ವಾಣಿಜ್ಯ ಪ್ರದೇಶಗಳು ಮತ್ತು ಜನದಟ್ಟಣೆ ಜಾಸ್ತಿ ಇರುವೆಡೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಮುಂದಾಗಿದೆ. ಹಾಗೆಯೇ, ಕೊಳೆಗೇರಿ ಪ್ರದೇಶಗಳಲ್ಲೂ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿ, ಸ್ವಚ್ಛತೆಗೆ ಆದ್ಯತೆ ನೀಡಲು ತೀರ್ಮಾನಿಸಿದೆ. ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಮೊದಲ ಹಂತದಲ್ಲಿ 464 ಕಮೋಡ್‌ಗಳುಳ್ಳ 125 ಸಾರ್ವಜನಿಕ ಶೌಚಾಲಯ, 83 ಕಮೋಡ್‌ಗಳ 14 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಎರಡನೇ ಹಂತದಲ್ಲಿ 4195 ಕಮೋಡ್‌ಗಳ 416 ಸಾರ್ವಜನಿಕ ಶೌಚಾಲಯ ಮತ್ತು 424 ಕಮೋಡ್ 46 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಕೇಂದ್ರ ಸರಕಾರವು ಸ್ವಚ್ಛ ಭಾರತ ಯೋಜನೆಯಡಿ ಶೌಚದ ಕಮೋಡ್‌ಗೆ 98 ಸಾವಿರ ರೂ. ಮತ್ತು ಮೂತ್ರದ ಕಮೋಡ್‌ಗಳ ಕಟ್ಟಡ ನಿರ್ಮಾಣಕ್ಕೆ 32 ಸಾವಿರ ರೂ. ವೆಚ್ಚ ನಿಗದಿಪಡಿಸಿದೆ. ಇದರಲ್ಲಿ ಶೇ 65ರಷ್ಟು ಮೊತ್ತವನ್ನು ಸ್ವಚ್ಛ ಭಾರತದ ಅನುದಾನದಡಿ ಬಿಡುಗಡೆ ಮಾಡುತ್ತದೆ. ಉಳಿದ ಹಣವನ್ನು ಪಾಲಿಕೆಯೇ ಭರಿಸಬೇಕಿದೆ.

4463 ಶೌಚಾಲಯಗಳಿಗೆ ಅರ್ಜಿ: ನಗರದಲ್ಲಿ 26 ಲಕ್ಷ ಮನೆಗಳಿವೆ. ಫೆ. 2ರವರೆಗೆ ವೈಯುಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಸಹಾಯಧನ ಕೋರಿ 4463 ಮಂದಿ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 2996 ಅರ್ಜಿಗಳನ್ನು ವಿಲೇವಾರಿ ಮಾಡಿ, ತಲಾ 15 ಸಾವಿರ ರೂ. ನೆರವು ನೀಡಲಾಗಿದೆ. ಈವರೆಗೆ 1713 ಶೌಚಾಲಯಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 1893 ಶೌಚಾಲಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News