ಪೌರತ್ವ ಮಸೂದೆ: ಪ್ರತಿಭಟನೆಗೆ ಮಣಿದ ಕೇಂದ್ರ

Update: 2019-02-04 03:36 GMT

ಹೊಸದಿಲ್ಲಿ, ಫೆ.4: ಈಶಾನ್ಯ ರಾಜ್ಯಗಳ ಸಂಘಟಿತ ಪ್ರತಿಭಟನೆಗೆ ಕೊನೆಗೂ ಕೇಂದ್ರ ಸರ್ಕಾರ ಮಣಿದಿದೆ. ಎಲ್ಲ ಪಕ್ಷಗಳಲ್ಲಿ ಒಮ್ಮತ ಮೂಡಿದಲ್ಲಿ ಮಾತ್ರ ಪೌರತ್ವ ತಿದ್ದುಪಡಿ ಮಸೂದೆ ವಿಚಾರದಲ್ಲಿ ಮುಂದುವರಿಯುವುದಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಘೋಷಿಸಿದ್ದಾರೆ. ಈ ಮೂಲಕ ಸಾರ್ವತ್ರಿಕ ಚುನಾವಣೆಗೆ ನಡೆಯುವ ಸಂಸತ್ತಿನ ಕೊನೆಯ ಅಧಿವೇಶನದಲ್ಲಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವುದಿಲ್ಲ ಎಂಬ ಸುಳಿವನ್ನು ಅಮಿತ್ ಶಾ ನೀಡಿದ್ದಾರೆ.

"ಕೆಲ ವಿಷಯಗಳ ಬಗೆಗ ದೇಶದ ವಿವಿಧ ವರ್ಗಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಸಾಕಷ್ಟು ಮಾತುಕತೆಗಳನ್ನು ನಡೆಸಿದ ಬಳಿಕ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿದೆ. ಇದು ದೇಶಕ್ಕೆ ಅಗತ್ಯ ಹಾಗೂ ಮಹತ್ವದ್ದು. ಆದರೆ ಈಶಾನ್ಯ ರಾಜ್ಯಗಳ ಪಕ್ಷಗಳೂ ಸೇರಿದಂತೆ ಎಲ್ಲ ಪಕ್ಷಗಳ ಜತೆ ಮಾತುಕತೆ ನಡೆಸುತ್ತೇವೆ. ರಾಜನಾಥ್ ಸಿಂಗ್ ಈಗಾಗಲೇ ಕೆಲ ಪಕ್ಷಗಳ ಜತೆ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಒಮ್ಮತಕ್ಕೆ ಬಂದ ಬಳಿಕ ಮುಂಧುವರಿಯುತ್ತೇವೆ" ಎಂದು ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.

ಆದರೆ ಪಾಕಿಸ್ತಾನ, ಅಪ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವ ವಿಚಾರಕ್ಕೆ ಪಕ್ಷ ಬದ್ಧವಾಗಿದೆ ಎಂದು ಅಮಿತ್ ಶಾ ಹೇಳಿದರು. ಕೇಂದ್ರದ ಈ ತಿದ್ದುಪಡಿ ಮಸೂದೆಗೆ ಈಶಾನ್ಯ ರಾಜ್ಯಗಳಲ್ಲಿ ಎನ್‌ಡಿಎ ಮಿತ್ರಪಕ್ಷಗಳೂ ಸೇರಿದಂತೆ ಎಲ್ಲ ಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News