ಉಗ್ರರಿಂದ ಹತ್ಯೆಗೀಡಾದ ಸೈನಿಕ ಔರಂಗಜೇಬ್ ತಂದೆ ಬಿಜೆಪಿ ಸೇರ್ಪಡೆ

Update: 2019-02-04 07:53 GMT

ವಿಜಯಪುರ್, ಫೆ.4: ಕಳೆದ ವರ್ಷ ಪುಲ್ವಾಮದಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿ ಬರ್ಬರ ಹತ್ಯೆಗೀಡಾದ ಸೈನಿಕ ಔರಂಗಜೇಬ್ ತಂದೆ, ರಜೌರಿ ನಿವಾಸಿಯಾಗಿರುವ ಮುಹಮ್ಮದ್ ಹನೀಫ್ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ರವಿವಾರ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಬಿಜೆಪಿ ಸೇರಿದ್ದಾರೆ. ಮಾಜಿ ಸೇನಾಧಿಕಾರಿ ನಿವೃತ್ತ ಲೆಫ್ಟಿನೆಂಟ್ ಜನರಲ್ ರಾಕೇಶ್ ಕುಮಾರ್ ಶರ್ಮಾ ಕೂಡ ಹನೀಫ್ ಜತೆ ಬಿಜೆಪಿ ಸೇರಿದ್ದಾರೆ.

ಪ್ರಧಾನಿ ತಮ್ಮನ್ನು ಬಿಜೆಪಿಗೆ ಸ್ವಾಗತಿಸುತ್ತಿದ್ದಂತೆಯೇ ಹನೀಫ್ ಅವರು ಹತ್ಯೆಗೀಡಾದ ತಮ್ಮ ಪುತ್ರನ ಭಾವಚಿತ್ರವನ್ನು ಅವರಿಗೆ ಸಮರ್ಪಿಸಿದರು.

44 ರಾಷ್ಟ್ರೀಯ ರೈಫಲ್ಸ್ ನಲ್ಲಿ ರೈಫಲ್ ಮ್ಯಾನ್ ಆಗಿದ್ದ ಔರಂಗ ಜೇಬ್ ಕಳೆದ ವರ್ಷದ ಜೂನ್ 14ರಂದು ಈದ್ ಆಚರಣೆಗಾಗಿ ಮನೆಯತ್ತ ಸಾಗಿದ್ದಾಗ  ಅವರನ್ನು ಅಪಹರಿಸಲಾಗಿತ್ತು. ಅವರಿಗೆ ಮರಣೋತ್ತರ ಶೌರ್ಯ ಚಕ್ರವನ್ನು ಈಗಾಗಲೇ ಪ್ರದಾನ ಮಾಡಲಾಗಿದೆ.

“ಬಿಜೆಪಿಯ ಬಡವರ ಪರ ನೀತಿಗಳನ್ನು ಗಮನಿಸಿ ಆ ಪಕ್ಷ ಸೇರಿದ್ದೇನೆ. ಹಿಂದಿನ ಸರಕಾರಗಳಂತಿರದೆ ಮೋದಿ ಸರಕಾರ ಬಡವರ ಬಗ್ಗೆ ಕಾಳಜಿ ಹೊಂದಿದೆ'' ಎಂದು ಹನೀಫ್ ಹೇಳಿದ್ದಾರೆ.

ಔರಂಗಜೇಬ್ ಹತ್ಯೆಯ ನಂತರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪ್ರತ್ಯೇಕವಾಗಿ ಔರಂಗಜೇಬ್ ಕುಟುಂಬವನ್ನು ಭೇಟಿಯಾಗಿದ್ದರು.

ಹನೀಫ್ ಮತ್ತು ಶರ್ಮ ಬಿಜೆಪಿ ಸೇರುತ್ತಾರೆಂದು ರಾಜ್ಯ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಈ ಹಿಂದೆ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News