ಲೋಕಸಭಾ ಚುನಾವಣೆ: ದೇವೇಗೌಡರಿಗೆ ಬಿಜೆಪಿ 'ಉತ್ತರ' ಇವರೇ ?

Update: 2019-02-04 11:20 GMT

ಬೆಂಗಳೂರು, ಫೆ. 4 : ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರನ್ನು ಬಿಜೆಪಿ ಬೆಂಗಳೂರು ಉತ್ತರದಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಿದೆಯೇ ? ಹಾಗೆಂದು ಹೇಳುತ್ತಿವೆ ಕೆಲವು ಮೂಲಗಳು. 

ಇತ್ತೀಚಿಗೆ ತೆರೆಮರೆಗೆ ಸರಿದಿರುವ ಕೃಷ್ಣ ಈಗ ಮತ್ತೆ ಅಲ್ಲಲ್ಲಿ ಕಾಣಿಸಿಕೊಂಡು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೆಗೌಡ ಅವರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಲು ಉತ್ಸುಕರಾಗಿರುವ ಬೆನ್ನಿಗೇ ಬಿಜೆಪಿ ಈ ತಂತ್ರ ಹೆಣೆಯುತ್ತಿದೆ ಎಂದು ತಿಳಿದು ಬಂದಿದೆ. ಸದ್ಯ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರು ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದಾರೆ. 

ಒಕ್ಕಲಿಗ ಸಮುದಾಯದ ಅತ್ಯಂತ ಪ್ರಮುಖ ಈ ಇಬ್ಬರು ನಾಯಕರು ಈವರೆಗೆ ಚುನಾವಣಾ ಕಣದಲ್ಲಿ ಪರಸ್ಪರರನ್ನು ಎದುರಿಸಿಲ್ಲ.  ದೇವೆಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಿದರೆ ಅದರ ಪರಿಣಾಮ ಸಾಕಷ್ಟು ಒಕ್ಕಲಿಗ ಮತದಾರರಿರುವ ಬೆಂಗಳೂರು ದಕ್ಷಿಣದ ಮೇಲೂ ಬೀಳುತ್ತದೆ. ಮುಂದೆ ಬೆಂಗಳೂರಿನಲ್ಲಿ ಜೆಡಿಎಸ್ ಬೆಳೆಯಲು ಅವಕಾಶ ಮಾಡಿಕೊಟ್ಟ ಹಾಗೂ ಆಗುತ್ತದೆ. ಹಾಗಾಗಿ ದೊಡ್ಡ ಗೌಡರನ್ನು ತಡೆಯಲು ಕೃಷ್ಣಾಸ್ತ್ರವೇ ಸೂಕ್ತ ಎಂದು ಬಿಜೆಪಿ ತೀರ್ಮಾನಿಸಿದ ಹಾಗೆ ಕಾಣುತ್ತಿದೆ. ಕೃಷ್ಣ ಕಣಕ್ಕಿಳಿಯುವ ಸುದ್ದಿ ಬಂದರೆ ಬೆಂಗಳೂರಿನಲ್ಲಿ ಅವರಿಗಿರುವ ವರ್ಚಸ್ಸಿನ ಕಾರಣದಿಂದ ದೇವೇಗೌಡರು ಹಿಂದೆ ಸರಿಯಬಹುದು ಎಂಬ ಲೆಕ್ಕಾಚಾರವೂ ಬಿಜೆಪಿ ಗಿದೆ.  

ಈ ಬಾರಿ ಪ್ರತಿ ಕ್ಷೇತ್ರ ಕೂಡ ಮುಖ್ಯ ಹಾಗು ಗೆಲ್ಲುವುದೇ ಅಭ್ಯರ್ಥಿ ಆಯ್ಕೆಯ ಮಾನದಂಡ ಎಂದು ಹೇಳಿರುವ ಬಿಜೆಪಿ ಇದಕ್ಕಾಗಿ ಹಾಲಿ ಸಂಸದರನ್ನು ಕೈಬಿಡಲೂ ಸಿದ್ಧ ಎಂಬ ಸೂಚನೆ ನೀಡಿದೆ. ಹಾಗಾಗಿ ಸದ್ಯ ಯಾವುದೂ ಅಸಾಧ್ಯವಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News