ಗಡ್ಕರಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ?

Update: 2019-02-05 03:53 GMT

ಸದ್ಯಕ್ಕೆ ನರೇಂದ್ರ ಮೋದಿಯ ಸರ್ವಾಧಿಕಾರಿ ಮನಸ್ಥಿತಿ ದೇಶದೊಳಗೆ ಮಾತ್ರವಲ್ಲ, ಆ ಪಕ್ಷದೊಳಗೆ ಅಸಹನೆಯ ಕಿಡಿಯನ್ನು ಸಿಡಿಸುತ್ತಿದೆ. ಆರಂಭದಲ್ಲಿ ಹಿರಿಯ ನಾಯಕರಾಗಿರುವ ಅಡ್ವಾಣಿ ಸ್ಪಷ್ಟ ಮಾತುಗಳಿಂದ ಮೋದಿ ತುಳಿದ ಹಾದಿಯನ್ನು ಟೀಕಿಸಿದರಾದರೂ, ಬಳಿಕ ಅವರ ಬಾಯಿಯನ್ನು ಮುಚ್ಚಿಸಲಾಯಿತು. ಇಂದು ಮೋದಿ ಎದುರಾದರೆ ಸಾಕು, ದೈನೇಸಿಭಾವದಿಂದ ಕೈ ಮುಗಿದು ನಿಲ್ಲುತ್ತಾರೆ ಅಡ್ವಾಣಿ. ಅವರ ಮುಖದಲ್ಲಿ ಅದೇನೋ ‘ಜೀವಭಯ’ವೊಂದು ಎದ್ದೆದ್ದು ಕಾಣುತ್ತದೆ. ಇದಾದ ಬಳಿಕ ಯಶವಂತ ಸಿನ್ಹಾ, ಶತ್ರುಘ್ನ ಸಿನ್ಹಾ, ಅರುಣ್ ಶೌರಿಯವರು ಮೋದಿ ಮಾಡುತ್ತಿರುವ ಅನಾಹುತಗಳನ್ನು ಪರಿಣಾಮಕಾರಿಯಾಗಿ ದೇಶದ ಮುಂದಿಟ್ಟರು. ರಫೇಲ್ ಹಗರಣದ ಮುಂದೆ ಬೊಫೋರ್ಸ್‌ ಹಗರಣ ಏನೇನೂ ಅಲ್ಲ ಎನ್ನುವುದನ್ನು ದೇಶಕ್ಕೆ ಮೊದಲು ತಿಳಿಸಿದವರೇ ಬಿಜೆಪಿಯೊಳಗಿನ ಈ ತ್ರಿಮೂರ್ತಿಗಳು. ಆ ಬಳಿಕ ರಫೇಲ್ ಹಗರಣವನ್ನು ವಿರೋಧ ಪಕ್ಷಗಳು ಕೈಗೆತ್ತಿಕೊಂಡವು. ಮೋದಿ ತಮ್ಮ ಆಡಳಿತಾವಧಿಯಲ್ಲಿ ಸಂಪೂರ್ಣ ವಿಫಲವಾದರೂ ಪಕ್ಷದೊಳಗೆ ಅವರನ್ನು ಪ್ರಶ್ನಿಸುವವರೇ ಇಲ್ಲ ಎನ್ನುವಂತಹ ವಾತಾವರಣವಿತ್ತು. ಸಾಧಾರಣವಾಗಿ, ಪ್ರಧಾನಿ ವಿಫಲರಾದಾಗ, ಆ ವೈಫಲ್ಯವೇ ಇನ್ನೊಬ್ಬ ನಾಯಕನನ್ನು ಅನಿವಾರ್ಯವಾಗಿ ಸೃಷ್ಟಿಸುತ್ತದೆ. ಆದರೆ ಬಿಜೆಪಿ ನರೇಂದ್ರ ಮೋದಿಯ ವೈಫಲ್ಯಗಳನ್ನು, ತಮ್ಮ ಸುಳ್ಳುಗಳ ಮೂಲಕ ಮುಚ್ಚಿ ಹಾಕಬಹುದು ಎಂದು ನಂಬಿದಂತಿದೆ. ಮೋದಿಯ ತಪ್ಪು ಹೆಜ್ಜೆಗಳನ್ನು ಅದು ಕಂಡೂ ಕಾಣದಂತೆ ಸಹಿಸುತ್ತಿದೆ.

ಆದರೆ ಇದು ಬಹುಕಾಲ ನಡೆಯಲಾರದು. ಮೋದಿಯ ಮುಂದಿನ ಹಾದಿ ಬಿಜೆಪಿಯೊಳಗೆ ಸುಲಭವಿಲ್ಲ ಎನ್ನುವ ಸೂಚನೆಯನ್ನು ಗಡ್ಕರಿಯ ಹೇಳಿಕೆಗಳು ನೀಡುತ್ತಿವೆ. ಮೋದಿಗೆ ಪರ್ಯಾಯ ನಾಯಕರಾಗಿ ತಮ್ಮನ್ನು ತಾವು ಬಿಂಬಿಸಲು ಎಲ್ಲರೂ ಹಿಂಜರಿಯುತ್ತಿರುವ ಹೊತ್ತಿನಲ್ಲಿ ಗಡ್ಕರಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈಗಾಗಲೇ ಮೋದಿಯವರ ಮರ್ಮಕ್ಕೆ ತಾಗುವ ಮೂರು ಹೇಳಿಕೆಗಳನ್ನು ಅವರು ನೀಡಿದ್ದಾರೆ. ಈ ಹೇಳಿಕೆ ಬಿಜೆಪಿಯೊಳಗೆ ಮೋದಿಯ ವಿರುದ್ಧ ಗುಟ್ಟಾಗಿ ಹರಿಯುತ್ತಿರುವ ಲಾವಾರಸದಂತಿದೆ. ಇತ್ತೀಚೆಗೆ ಗಡ್ಕರಿಯವರು ವೀಡಿಯೊ ಒಂದರಲ್ಲಿ ನಡೆಸಿದ ಸಂಭಾಷಣೆ ವೈರಲ್ ಆಯಿತು. ಅದರಲ್ಲಿ ಅವರು ‘‘ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಅಧಿಕಾರ ಹಿಡಿಯುವ ನಿರೀಕ್ಷೆ ಬಿಜೆಪಿಗಿರಲಿಲ್ಲ. ಆದುದರಿಂದ ಈಡೇರಿಸಲು ಸಾಧ್ಯವಾಗದ ಭರವಸೆಗಳನ್ನೆಲ್ಲ ನೀಡಿ ಬಿಟ್ಟೆವು. ಆದುದರಿಂದಲೇ ಈಗ ಸಂಕಟ ಎದುರಿಸುತ್ತಿದ್ದೇವೆ’’ ಎಂಬ ಅರ್ಥದಲ್ಲಿ ಗಡ್ಕರಿ ಸಮಜಾಯಿಷಿ ನೀಡುತ್ತಿದ್ದರು. ಈ ಹೇಳಿಕೆ ಹಲವು ಅರ್ಥಗಳನ್ನು ಧ್ವನಿಸುತ್ತದೆ. ಮುಖ್ಯವಾದದ್ದು, ಕಳೆದ ಚುನಾವಣೆಯಲ್ಲಿ ಸ್ವತಃ ಬಿಜೆಪಿ ನಾಯಕರೇ ಈ ಪರಿಯ ಬಹುಮತವನ್ನು ನಿರೀಕ್ಷಿಸಿರಲಿಲ್ಲ, ಗೆಲುವು ಆಕಸ್ಮಿಕ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.

ಎರಡನೆಯದು, ಈಡೇರಿಸಲು ಸಾಧ್ಯವಿಲ್ಲ ಎಂದು ಗೊತ್ತಿದ್ದೇ ಬಿಜೆಪಿ ಭರವಸೆಗಳನ್ನು ನೀಡಿತ್ತು ಎನ್ನುವ ಅಂಶವನ್ನು ಗಡ್ಕರಿಯವರು ಬಹಿರಂಗಪಡಿಸಿದ್ದಾರೆ. ಮೂರನೆಯದಾಗಿ, ತನ್ನ ಭರವಸೆಯನ್ನು ಈಡೇರಿಸಲು ನರೇಂದ್ರ ಮೋದಿ ಸರಕಾರ ವಿಫಲವಾಗಿದೆ ಎನ್ನುವುದನ್ನೂ ಒಪ್ಪಿಕೊಳ್ಳುತ್ತಾರೆ. ಒಂದೆಡೆ ಮೋದಿಯವರು ಅದೇನೋ ಸಾಧಿಸಿದ್ದಾರೆ ಎಂದು ಅವರ ಭಕ್ತರು ಸಾಬೀತು ಮಾಡಲು ಯತ್ನಿಸುತ್ತಿರುವಾಗಲೇ, ಗಡ್ಕರಿಯವರು ಬಿಜೆಪಿಯ ಸೋಲನ್ನು ಒಪ್ಪಿಕೊಂಡಿರುವುದು ಮೋದಿ ಬಳಗಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಇತ್ತೀಚೆಗೆ ನಿತಿನ್ ಗಡ್ಕರಿಯವರು ಇನ್ನೊಂದು ಬಾಂಬ್ ಸಿಡಿಸಿದರು. ‘‘ಈಡೇರಿಸಲಾಗದ ಭರವಸೆಯನ್ನು ನೀಡಿ ಬಳಿಕ ಜನರ ಬಳಿ ಹೋದರೆ ಅವರು ಹಿಡಿದು ನಮ್ಮನ್ನು ಥಳಿಸಲಿದ್ದಾರೆ’’ ಇದು ಈ ಹಿಂದೆ ಹೇಳಿದ ಮಾತಿನ ಮುಂದುವರಿದ ಭಾಗವಾಗಿತ್ತು. ಇದು ಮೋದಿ ಮತ್ತು ಅಮಿತ್ ಶಾ ಅವರೆಡೆಗೆ ನೇರವಾಗಿ ಬಿಟ್ಟ ಬಾಣವಾಗಿತ್ತು. ಮುಂದಿನ ಚುನಾವಣೆಯನ್ನು ಎದುರಿಸುವುದು ಅಷ್ಟು ಸುಲಭವಿಲ್ಲ ಎಂಬ ಎಚ್ಚರಿಕೆಯನ್ನು ಅವರು ಈ ಮೂಲಕ ನೀಡಿದ್ದರು. ಜೊತೆಗೆ ಪ್ರಧಾನಿ ಮೋದಿಯವರು ಆಡಳಿತದಲ್ಲಿ ವಿಫಲರಾಗಿದ್ದಾರೆ ಎಂಬ ಅಂಶವನ್ನು ಅವರು ಪರೋಕ್ಷವಾಗಿ ನುಡಿದಿದ್ದರು.

ಅಂದರೆ ಮೋದಿಯ ಮೂಲಕ ಮುಂದಿನ ಚುನಾವಣೆಯನ್ನು ಎದುರಿಸುವುದರ ಬಗ್ಗೆಯೇ ಅವರಿಗೆ ಅಸಮಾಧಾನವಿರುವುದನ್ನು ಈ ಹೇಳಿಕೆ ಸ್ಪಷ್ಟಪಡಿಸಿದೆ. ಇವೆಲ್ಲಕ್ಕೂ ಕಲಶವಿಟ್ಟಂತೆ ಎರಡು ದಿನಗಳ ಹಿಂದೆ ಇನ್ನೊಂದು ಹೇಳಿಕೆ ಗಡ್ಕರಿಯವರಿಂದ ಹೊರಬಿದ್ದಿದೆ. ಎಬಿವಿಪಿ ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ಗಡ್ಕರಿಯವರು ಕಾರ್ಯಕರ್ತರೊಬ್ಬರಲ್ಲಿ ಅವರ ಕುಟುಂಬ, ಉದ್ಯೋಗ ಇತ್ಯಾದಿಗಳನ್ನು ವಿಚಾರಿಸುತ್ತಾರೆ. ಆದರೆ ಕಾರ್ಯಕರ್ತ ಕುಟುಂಬದ ಹೊಣೆಗಾರಿಕೆಯನ್ನು ಹೊತ್ತುಕೊಂಡಿರದೇ ಇರುವುದು ಅವರಿಗೆ ತಿಳಿಯಿತು. ಆಗ ಅವರು ಒಂದು ಅರ್ಥಪೂರ್ಣವಾದ ಕಿವಿ ಮಾತನ್ನು ಹೇಳುತ್ತಾರೆ ‘‘ನೀವು ಮೊದಲು ನಿಮ್ಮ ಕುಟುಂಬದ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಿ. ಅವರನ್ನು ಬೀದಿಪಾಲು ಮಾಡಬೇಡಿ. ಕುಟುಂಬದ ಹೊಣೆಗಾರಿಕೆ ಹೊತ್ತವರು ಮಾತ್ರ ದೇಶದ ಹೊಣೆಗಾರಿಕೆಯನ್ನು ಹೊರಬಲ್ಲರು. ಕುಟುಂಬವನ್ನು ನೋಡಿಕೊಳ್ಳಲಾಗದವರು ದೇಶವನ್ನು ಹೇಗೆ ನೋಡಿಕೊಂಡಾರು?’’ ಈ ಸಲಹೆ ನೇರವಾಗಿ ಮೋದಿ ಬಳಗದ ಎದೆಯನ್ನು ಸೀಳಿದೆ.

ಗಡ್ಕರಿ ನೀಡಿರುವ ಹೇಳಿಕೆಯಲ್ಲಿ ಸಾವಿರ ಅರ್ಥಗಳಿವೆ. ಅವರ ಮಾತು ಸತ್ಯ ಕೂಡ. ರಾಜಕೀಯ ನಾಯಕರ ಮಾತುಗಳನ್ನು ಕೇಳಿ ಯುವಕರು ಮನೆ, ಕುಟುಂಬ ಇತ್ಯಾದಿ ಹೊಣೆಗಾರಿಕೆಗಳನ್ನು ನಿರ್ವಹಿಸದೆ ಬೀದಿ ಜಗಳಕ್ಕಿಳಿದು ಜೈಲು ಸೇರುತ್ತಿದ್ದಾರೆ. ದೇಶ ಕಟ್ಟುವ ಕುರಿತಂತೆ ಅವರಿಗೆ ತಪ್ಪು ಮಾಹಿತಿಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ರಾಜಕೀಯ ಕಾರ್ಯಕರ್ತರು ‘ಮನೆಗೂ ಮಾರಿ, ಊರಿಗೂ ಮಾರಿ, ಪಕ್ಷಕ್ಕೆ ಮಾತ್ರ ಉಪಕಾರಿ’ ಎಂಬ ರೀತಿಯಲ್ಲಿ ಬದುಕುತ್ತಿದ್ದಾರೆ. ದೇಶವನ್ನು ಕಟ್ಟುವ ಕೆಲಸ ಮನೆಯಿಂದ ನಿರ್ಮಾಣವಾಗಬೇಕು. ನಾವು ನಮ್ಮ ಮನೆಯನ್ನು ಉದ್ಧರಿಸುತ್ತಾ, ಮನೆಯವರಿಗೆ ಒಳ್ಳೆಯ ಮಗನಾಗಿ ಬಾಳುವುದೇ ಉತ್ತಮ ಪ್ರಜೆಯಾಗುವ ಆರಂಭ. ಗಡ್ಕರಿಯ ಮಾತುಗಳನ್ನು ಎಲ್ಲ ಪಕ್ಷಗಳ ಕಾರ್ಯಕರ್ತರೂ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಮಹಾತ್ಮಾಗಾಂಧಿ ಕುಟುಂಬವನ್ನು ನಿರ್ವಹಿಸುತ್ತಲೇ ದೇಶವನ್ನು ಮುನ್ನಡೆಸಿದರು. ಈ ದೇಶದ ಯಾವುದೇ ಪ್ರಧಾನಿಗೆ ತಮ್ಮ ಕುಟುಂಬ ಒಂದು ಸಮಸ್ಯೆಯಾಗಲೇ ಇಲ್ಲ. ಬದಲಿಗೆ ಕುಟುಂಬವನ್ನು ಜೊತೆಜೊತೆಯಾಗಿ ದೇಶ ಕಟ್ಟಲು ದುಡಿಸಿಕೊಂಡರು. ಮೋದಿಯ ವೈಫಲ್ಯತೆಯೇ ಇಲ್ಲಿದೆ ಎನ್ನುವುದನ್ನು ಗಡ್ಕರಿ ಪರೋಕ್ಷವಾಗಿ ದೇಶದ ಜನರಿಗೆ ಹೇಳಿದ್ದಾರೆ.

ತನ್ನ ಪತ್ನಿಯನ್ನು ಸಂಬಾಳಿಸಲಾಗದವರು ದೇಶವನ್ನು ಹೇಗೆ ಸಂಬಾಳಿಸಿಯಾರು? ಎನ್ನುವ ಪ್ರಶ್ನೆಯನ್ನು ಗಡ್ಕರಿ ಎತ್ತಿದ್ದಾರೆ. ಪತ್ನಿ ಬೇಡ ಎಂದಿದ್ದರೆ ಮೋದಿಯವರು ಮದುವೆಯೇ ಆಗಬಾರದಿತ್ತು. ಆದ ಬಳಿಕ ಆ ಹೆಣ್ಣಿನ ಬದುಕಿನ ಹೊಣೆಗಾರಿಕೆ ಅವರದು. ಆದರೆ ಅವರಿಗೆ ವಿಚ್ಛೇದನವೂ ನೀಡದೆ ಮೋದಿಯವರು ತೊರೆದರು. ವಿಚ್ಛೇದನ ನೀಡಿದ್ದಿದ್ದರೆ ಅವರಿಂದು ಬೇರೆ ವಿವಾಹವಾಗುವ ಅವಕಾಶವಾದರೂ ಇತ್ತು. ಇಷ್ಟೇ ಅಲ್ಲ, ಪತ್ನಿಗೆ ವಿಚ್ಛೇದನವನ್ನೂ ನೀಡದ ಮೋದಿಯವರು ಚುನಾವಣಾ ಆಯೋಗಕ್ಕೆ ಮತ್ತು ದೇಶಕ್ಕೆ ವಿವಾಹವಾದ ಅಂಶವನ್ನೇ ಮುಚ್ಚಿಟ್ಟರು.ಗುಜರಾತ್‌ನ ಮುಖ್ಯಮಂತ್ರಿಯಾದಾಗಲೂ ಅವರು ವಿವಾಹಿತ ಎಂದು ನಮೂದಿಸಿರಲಿಲ್ಲ. ಅನಿವಾರ್ಯ ಎಂದಾಗ ಅದನ್ನು ಬಹಿರಂಗ ಪಡಿಸಿದರು.

ಪತ್ನಿಯ ಕುರಿತಂತೆ ಅವರಲ್ಲೇನೋ ಕೀಳರಿಮೆಯಿದೆ ಎನ್ನುವುದನ್ನು ಇದು ಹೇಳುತ್ತದೆ. ಸರಿ, ಪ್ರಧಾನಿಯಾದ ಬಳಿಕವಾದರೂ ಅವರು ಪತ್ನಿಗೆ ನ್ಯಾಯವನ್ನು ನೀಡಬಹುದಿತ್ತು. ತನ್ನ ಕುಟುಂಬದಲ್ಲಿ ಸಂಪೂರ್ಣ ವಿಫಲವಾದ, ತನ್ನ ಪತ್ನಿಯ ನೋವು ದುಮ್ಮಾನಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ವ್ಯಕ್ತಿಯೊಬ್ಬ ದೇಶದ ದುಮ್ಮಾನಗಳನ್ನು ಹೇಗೆ ಆಲಿಸಬಲ್ಲ? ಎಂಬ ಪ್ರಶ್ನೆಯನ್ನು ಗಡ್ಕರಿ ಎತ್ತಿದ್ದಾರೆ. ಕುಟುಂಬ ನಿರ್ವಹಿಸಲು ವಿಫಲವಾದವರಿಂದ ದೇಶವನ್ನು ಮುನ್ನಡೆಸುವ ಸಾಮರ್ಥ್ಯವನ್ನು ನಿರೀಕ್ಷಿಸಬಾರದು ಎಂದು ಅವರು ಆ ಮೂಲಕ ತಿಳಿಸಿದ್ದಾರೆ. ಇದೆಲ್ಲದರ ಅಂತಿಮ ಪರಿಣಾಮವೆಂದರೆ, ಮೋದಿಗೆ ಪರ್ಯಾಯವಾಗಿ ಪ್ರಧಾನಿ ಅಭ್ಯರ್ಥಿಯಾಗಲು ಗಡ್ಕರಿ ಸಜ್ಜಾಗಿದ್ದಾರೆ. ಬಿಜೆಪಿ ಅಲ್ಪಬಹುಮತವನ್ನು ಪಡೆದದ್ದೇ ಆದರೆ ಪ್ರಧಾನಿ ಯಾರಾಗಬೇಕು ಎನ್ನುವುದು ಬಿಜೆಪಿಯ ಪಾಲಿಗೆ ಕಗ್ಗಂಟಾಗಲಿದೆ. ಮಿತ್ರ ಪಕ್ಷಗಳು ಮೋದಿಗೆ ಬೆಂಬಲ ನೀಡದೆ ಗಡ್ಕರಿಗೆ ಬೆಂಬಲ ನೀಡಿದ್ದೇ ಆದರೆ, ಮೋದಿಯೆಂಬ ಗಾಳಿ ತುಂಬಿದ ಬಲೂನು ಒಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News