ಪಶ್ಚಿಮ ಬಂಗಾಳದಲ್ಲಿ ಕೇಂದ್ರದ ಸೇಡಿನ ರಾಜಕೀಯ

Update: 2019-02-06 03:56 GMT

ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆ ರಾಜ್ಯದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿಯವರ ನಡುವಿನ ಹಣಾಹಣಿ ಒಂದು ಹಂತಕ್ಕೆ ಬಂದು ನಿಂತಿದೆ. ಲಕ್ಷಾಂತರ ಜನರಿಗೆ ವಂಚನೆ ಮಾಡಿದ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ಮುಚ್ಚಿಟ್ಟ ಆರೋಪಕ್ಕೆ ಒಳಗಾದ ಕೋಲ್ಕತಾ ಪೊಲೀಸ್ ಆಯುಕ್ತರ ಬಂಧನಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿಲ್ಲ. ವಿಚಾರಣೆಗೆ ಸಂಬಂಧಿಸಿದಂತೆ ತಾವಾಗಿ ಪೊಲೀಸ್ ಆಯುಕ್ತರು ಸಿಬಿಐ ಮುಂದೆ ಹಾಜರಾಗಬೇಕೆಂದು ಸೂಚಿಸಿದೆ. ಇದನ್ನು ಮಮತಾ ಬ್ಯಾನರ್ಜಿಯವರು ಸ್ವಾಗತಿಸಿದ್ದಾರೆ. ಆದರೆ ಇದು ಕೇಂದ್ರ ಮತ್ತು ಪಶ್ಚಿಮ ಬಂಗಾಳ ಎರಡೂ ಸರಕಾರಗಳಿಗೆ ಕಿವಿ ಹಿಂಡಿ ಬುದ್ಧಿ ಹೇಳಿದಂತಾಗಿದೆ.

ಪಶ್ಚಿಮ ಬಂಗಾಳದಲ್ಲಿ ಕಳೆದ ಮೂರು ದಿನಗಳಿಂದ ಉಂಟಾದ ಪರಿಸ್ಥಿತಿ ಸಾಂವಿಧಾನಿಕ ಬಿಕ್ಕಟ್ಟಿನ ಭೀತಿಯನ್ನು ಉಂಟುಮಾಡಿತ್ತು. ರವಿವಾರ ಸಂಜೆ ಸಿಬಿಐನ ನಲವತ್ತು ಮಂದಿ ಸಿಬ್ಬಂದಿ ಕೋಲ್ಕತಾ ಪೊಲೀಸ್ ಕಚೇರಿಗೆ ನುಗ್ಗಿತ್ತು. ಆಗ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸ್ವತಃ ಪೊಲೀಸ್ ಆಯುಕ್ತರ ರಕ್ಷಣೆಗೆ ಧಾವಿಸಿ ಬಂದಿದ್ದರು. ಧರಣಿ ಕುಳಿತುಕೊಂಡಿದ್ದರು. ಹೀಗಾಗಿ ಪರಿಸ್ಥಿತಿ ಬಿಗಡಾಯಿಸಿತ್ತು. ಎಡಪಂಥೀಯ ಪಕ್ಷಗಳನ್ನು ಹೊರತು ಪಡಿಸಿ ಉಳಿದ ವಿರೋಧ ಪಕ್ಷಗಳು ಮಮತಾ ಬ್ಯಾನರ್ಜಿಯವರ ಬೆಂಬಲಕ್ಕೆ ನಿಂತಿದ್ದವು.

ಲಕ್ಷಾಂತರ ಕೋಟಿ ಮೊತ್ತದ ಶಾರದಾ ಚಿಟ್ ಫಂಡ್ ಹಗರಣದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಸುಪ್ರೀಂ ಕೋರ್ಟ್ 2014ರಲ್ಲೇ ಆದೇಶ ಮಾಡಿದೆ. ಆನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ನಾಲ್ಕೂವರೆ ವರ್ಷ ಸುಮ್ಮನೆ ಕುಳಿತು ಈಗ ಲೋಕಸಭಾ ಚುನಾವಣೆಗೆ ನಾಲ್ಕೂವರೆ ತಿಂಗಳಿರುವಾಗ ತನಿಖೆಗೆ ಮುಂದಾಗಿದ್ದು ರಾಜಕೀಯ ದುರುದ್ದೇಶದಿಂದ ಕೂಡಿದ ಕ್ರಮವಲ್ಲದೆ ಬೇರೇನೂ ಅಲ್ಲ. ಈ ಪ್ರಕರಣದ ಸೂತ್ರಧಾರ ಮುಖ್ಯ ಆರೋಪಿ ತೃಣಮೂಲ ನಾಯಕ ಮುಕುಲ್‌ರಾಯ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಗಂಗಾ ನದಿ ನೀರು ಪ್ರೋಕ್ಷಿಸಿ ದೋಷಮುಕ್ತರನ್ನಾಗಿ ಮಾಡಿದ ಕೇಂದ್ರದ ಮೋದಿ ಸರಕಾರ ಸಿಬಿಐನಂಥ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದ್ದು ನಿಜ. ಹಾಗೆಂದು ಮಮತಾ ಬ್ಯಾನರ್ಜಿಯವರು ಸಂಪನ್ನರೆಂದಲ್ಲ. ಅವರ ಬೆಂಬಲಿಗರು, ಅವರ ಪಕ್ಷದ ಉನ್ನತ ನಾಯಕರು ಈ ಹಗರಣದಲ್ಲಿದ್ದಾರೆ. ಆದರೆ ಈಗ ನಡೆದ ವಿವಾದ ಬರೀ ಹಗರಣಕ್ಕೆ ಸೀಮಿತವಾಗಿ ಉಳಿದಿಲ್ಲ. ಇದರ ಹಿಂದೆ ರಾಜಕೀಯ ಉದ್ದೇಶವಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 42 ಲೋಕಸಭಾ ಸ್ಥಾನಗಳ ಮೇಲೆ ಕಣ್ಣಿರಿಸಿ ನರೇಂದ್ರ ಮೋದಿ ಸರಕಾರ ಈ ದಾಳಿ ನಡೆಸಿದೆ. ಇದನ್ನು ರಾಜಕೀಯವಾಗಿ ಬಳಸಿಕೊಂಡ ಮೋದಿ ವಿರುದ್ಧ ಪ್ರಬಲ ನಾಯಕಿಯಾಗಿ ಮಿಂಚುವ ಉದ್ದೇಶದಿಂದ ಮಮತಾ ಬ್ಯಾನರ್ಜಿಯವರು ಉಪವಾಸದ ಅಸ್ತ್ರ ಪ್ರಯೋಗಿಸಿದ್ದಾರೆ. ಪಶ್ಚಿಮ ಬಂಗಾಳವನ್ನು ಕಬಳಿಸಲು ಬಹು ಹಿಂದಿನಿಂದ ಮಸಲತ್ತು ನಡೆಸಿರುವ ಸಂಘ ಪರಿವಾರ ಮೋದಿ ಬೆಂಬಲಕ್ಕೆ ನಿಂತಿದೆ.

ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿಯವರಿಬ್ಬರೂ ಸರ್ವಾಧಿಕಾರಿ ಮನೋಭಾವದ ನಾಯಕರು. ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಯಾರನ್ನು ಬೇಕಾದರೂ ಬಳಸಿಕೊಂಡು ನಂತರ ಬಿಸಾಡಬಲ್ಲವರು. ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದ ಸಿಪಿಎಂ ಸರಕಾರವನ್ನು ಮುಗಿಸಲು ಮಾವೋವಾದಿಗಳನ್ನು ಬಳಸಿಕೊಂಡರು. ಸಿಂಗೂರು, ನಂದಿಗ್ರಾಮ ರೈತ ಬಂಡಾಯಕ್ಕೆ ಪ್ರಚೋದಿಸಿದರು. ಆದರೆ ಅಧಿಕಾರಕ್ಕೆ ಬಂದ ನಂತರ ಕಿಶನ್‌ಜಿ ಅವರಂಥ ಹಿರಿಯ ಮಾವೋವಾದಿ ನಾಯಕರನ್ನು ಎನ್‌ಕೌಂಟರ್ ಮಾಡಿ ಸಾಯಿಸಿದರು. ಅನೇಕ ನಕ್ಸಲ್ ಕಾರ್ಯಕರ್ತರನ್ನು ಕೊಂದರು. ಅಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರ ಮೇಲೆ ನಿತ್ಯವೂ ದಾಳಿ ನಡೆದಿದೆ. ಇನ್ನು ಮೋದಿಯವರು ಬೆಳೆದಿದ್ದೇ ಆರೆಸ್ಸೆಸ್ ಎಂಬ ಫ್ಯಾಶಿಸ್ಟ್ ಸಂಘಟನೆಯಲ್ಲಿ. ಅವರದೂ ಸರ್ವಾಧಿಕಾರದ ಮನೋಭಾವ. ಆದ್ದರಿಂದ ಇದರಲ್ಲಿ ಯಾರನ್ನೂ ಸಮರ್ಥಿಸಿಕೊಳ್ಳುವುದು ಕಷ್ಟ.

ಆದರೆ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಸಿಬಿಐನಂಥ ಉನ್ನತ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪ ಸುಳ್ಳಲ್ಲ. ಬಿಹಾರದಲ್ಲಿ ತನಗೆ ಅಡ್ಡಿಯಾಗಿರುವ ಆರ್‌ಜೆಡಿ ನಾಯಕ ಲಾಲುಪ್ರಸಾದ್ ಯಾದವ್‌ರನ್ನು ಮುಗಿಸಲು ಸಿಬಿಐ ಅಸ್ತ್ರ ಪ್ರಯೋಗ ಮಾಡಿದರು. ಮಾಯಾವತಿ, ಅರವಿಂದ ಕೇಜ್ರಿವಾಲ್, ಮುಲಾಯಂ ಪುತ್ರನ ಮನೆಗೆ ಸಿಬಿಐ ಕಳಿಸಿದರು. ಆದರೆ ತಮ್ಮ ಪಕ್ಷದ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ 20ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ವ್ಯಾಪಂ ಹಗರಣದ ತನಿಖೆಗೆ ಮಧ್ಯ ಪ್ರದೇಶಕ್ಕೆ ಸಿಬಿಐಯನ್ನು ಕಳಿಸಲಿಲ್ಲ. ಬಿಜೆಪಿ ಅಧ್ಯಕ್ಷ ಅಮಿತ್‌ಶಾ ಪುತ್ರನ ಹಗರಣದ ತನಿಖೆಗೆ ಸಿಬಿಐ ಹೋಗಲಿಲ್ಲ. ಆದರೆ ಬಂಗಾಳಕ್ಕೆ ಹೋಯಿತು. ಅಷ್ಟೇ ಅಲ್ಲ ರಾಜ್ಯಗಳ ಸ್ವಾಯತ್ತೆ ಪ್ರಶ್ನೆಯಲ್ಲೂ ಮೋದಿ ಸರಕಾರದ ವರ್ತನೆ ಖಂಡನಾರ್ಹವಾಗಿದೆ. ಪಶ್ಚಿಮ ಬಂಗಾಳ ಸದ್ಯಕ್ಕೆ ಸಂವಿಧಾನಾತ್ಮಕ ಬಿಕ್ಕಟ್ಟಿನಿಂದ ಪಾರಾಗಿದೆ. ಮುಂದೇನಾಗುತ್ತದೆ ನೋಡಬೇಕು.

ಒಟ್ಟಾರೆ ಒಂದು ಅಂಶ ಇದರಿಂದ ಸ್ಪಷ್ಟವಾಗುತ್ತದೆ. ಏನೇ ಭ್ರಷ್ಟಾಚಾರ ಮಾಡಿದರೂ, ಯಾವುದೇ ಹಗರಣದಲ್ಲಿ ಸಿಲುಕಿದರೂ ಅದರಿಂದ ಸುರಕ್ಷಿತವಾಗಿ ಪಾರಾಗುವ ಮಾರ್ಗ ವೆಂದರೆ ಬಿಜೆಪಿ ಸೇರುವುದಾಗಿದೆ. ತೃಣಮೂಲ ನಾಯಕ ಮುಕುಲ್‌ರಾಯ್ ಮೇಲೆ ಶಾರದಾ ಚಿಟ್ ಫಂಡ್‌ನ ಗಂಭೀರ ಆರೋಪಗಳಿದ್ದವು. 2015ರಲ್ಲಿ ಸಿಬಿಐ ಇದನ್ನು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಆದರೆ ಮುಕುಲ್ ರಾಯ್ ಬಿಜೆಪಿಯನ್ನು ಸೇರಿದ್ದರಿಂದ ಅವರ ವಿಚಾರಣೆಯನ್ನು ಕೈ ಬಿಡಲಾಯಿತು. ಅಸ್ಸಾಂನ ಹೇಮಂತ ಶರ್ಮಾ ಇಂಥದ್ದೇ ಆರೋಪ ಎದುರಿಸುತ್ತಿದ್ದರು. ಅವರೂ ಬಿಜೆಪಿ ಸೇರಿ ದೋಷಮುಕ್ತರಾದರು. ಕರ್ನಾಟಕದಲ್ಲಿ ಗಣಿಹಗರಣದ ಆರೋಪಿಗಳನ್ನು ರಕ್ಷಿಸಲಾಯಿತು. ಈಗಿನ ಪ್ರಭಾವಿ ಕಾಂಗ್ರೆಸ್ ನಾಯಕರೊಬ್ಬರ ಮೇಲೂ ಬಿಜೆಪಿ ಸೇರುವಂತೆ ಒತ್ತಡ ತರಲಾಯಿತು. ಅವರು ಮಣಿಯಲಿಲ್ಲ. ಒಟ್ಟಾರೆ ದೇಶದ ಪರಿಸ್ಥಿತಿ ಎಲ್ಲಿಗೆ ಬಂದಿದೆಯೆಂದರೆ, ಏನೇ ಮಾಡು ಯಾವುದೇ ಹಗರಣದಲ್ಲಿ ಸಿಕ್ಕಿಹಾಕಿಕೊಳ್ಳು, ಅದರಿಂದ ಪಾರಾಗಲು ಇರುವ ಮಾರ್ಗ ನ್ಯಾಯಾಲಯವಲ್ಲ. ಬಿಜೆಪಿ ಸೇರಿದರೆ ‘ಬಾರಾ ಖೂನ್ ಮಾಫ್’ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ. ಅದು ಅವರ ಅಸ್ತಿತ್ವಕ್ಕೆ ಅನಿವಾರ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News