ಚುನಾವಣೆ ಮುಗಿಯುವವರೆಗೆ ರಾಮ ಮಂದಿರ ನಿರ್ಮಾಣಕ್ಕೆ ಪ್ರತಿಭಟನೆಯಿಲ್ಲ ಎಂದ ವಿಹಿಂಪ

Update: 2019-02-06 08:05 GMT

ಹೊಸದಿಲ್ಲಿ, ಫೆ.6: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡಲು ಸುಗ್ರೀವಾಜ್ಞೆ ಹೊರಡಿಸಬೇಕೆಂಬ ಬೇಡಿಕೆಯೊಂದಿಗೆ ದೇಶಾದ್ಯಂತ ಧರ್ಮ ಸಭಾಗಳನ್ನು ನಡೆಸಿ ಹಾಗೂ ಕಳೆದ ವಾರ ಕುಂಭಮೇಳದ ಸಂದರ್ಭ ಪ್ರಯಾಗ್ ರಾಜ್ ನಗರದಲ್ಲೂ ಧರ್ಮ ಸಂಸತ್ ಆಯೋಜಿಸಿದ್ದ ವಿಶ್ವ ಹಿಂದು ಪರಿಷತ್, ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಮುಂದಿನ ನಾಲ್ಕು ತಿಂಗಳುಗಳ ಕಾಲ, ಲೋಕಸಭಾ ಚುನಾವಣೆಗಳು ಮುಗಿಯುವ ತನಕ ಅಯೋಧ್ಯೆ ವಿಚಾರದಲ್ಲಿ ಯಾವುದೇ ಪ್ರತಿಭಟನೆ ನಡೆಸದೇ ಇರಲು ತೀರ್ಮಾನಿಸಿದೆ.

ಅಯೋಧ್ಯೆಯ ವಿವಾದಿತ ಸ್ಥಳದ ಪಕ್ಕದಲ್ಲಿರುವ 67 ಎಕರೆ ಭೂಮಿಯನ್ನು  ರಾಮ ಜನ್ಮಭೂಮಿ ನ್ಯಾಸ್ ಸೇರಿದಂತೆ ಅದರ ಮೂಲ ಮಾಲಕರಿಗೆ ವಾಪಸ್ ನೀಡಲು ಅನುಮತಿ ಕೋರಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಕದ ತಟ್ಟಿದ ಒಂದೇ ವಾರದಲ್ಲಿ ಈ ಬೆಳವಣಿಗೆ ನಡೆದಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬೇಡಿಕೆಯಿರಿಸಿ ಪ್ರತಿಭಟನೆಯನ್ನು ಮುಂದೂಡುವ ನಿರ್ಧಾರವನ್ನು ಪ್ರಯಾಗ್ ರಾಜ್ ಧರ್ಮ ಸಂಸತ್ತಿನಲ್ಲಿ ನಿರ್ಧರಿಸಲಾಯಿತು ಎಂದು ವಿಶ್ವ ಹಿಂದು ಪರಿಸತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಈ ವಿಚಾರದ ಬಗ್ಗೆ ತೀರ್ಪು ನೀಡಿದರೆ ವಿಹಿಂಪದ ನಿಲುವೇನಾಗಬಹುದು ಎಂಬ ಪ್ರಶ್ನೆಗೆ ``ಕೋರ್ಟ್ ಆದೇಶದ ಬಗ್ಗೆ ಯೋಚಿಸದೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಂದು ವೇಳೆ  ತುರ್ತು ಸನ್ನಿವೇಶವೇನಾದರೂ ಎದುರಾದರೆ ನಾವು ಸಂತರ ಮಾರ್ಗದರ್ಶನ ಪಡೆಯುತ್ತೇವೆ''ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News