ತಣ್ಣಗಾದ ಅಣ್ಣಾ

Update: 2019-02-07 05:28 GMT

ಅಣ್ಣಾ ಹಝಾರೆಯ ಉಪವಾಸ ಸತ್ಯಾಗ್ರಹ ಒಂದು ‘ಅಸಂಗತ’ ಪ್ರಹಸನದಂತೆ ಮುಗಿದು ಹೋಯಿತು. ಒಂದು ಕಾಲದಲ್ಲಿ ದೇಶ ಅಣ್ಣಾ ಹಝಾರೆಯ ಒಳಗೆ ಗಾಂಧಿಯನ್ನು ಹುಡುಕುವ ಪ್ರಯತ್ನ ನಡೆಸಿತ್ತು. ಯುಪಿಎ ಸರಕಾರದ ವಿರುದ್ಧ ಅಣ್ಣಾ ಹಝಾರೆ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಇಡೀ ದೇಶವನ್ನೇ ಸಂಚಲನಕ್ಕೀಡು ಮಾಡಿತ್ತು. ದೇಶ ನಿಜಕ್ಕೂ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದೆ ಎಂದೇ ಮಾಧ್ಯಮಗಳು ಬರೆದವು. ಆದರೆ ಅಂದು ಹೋರಾಟ ನಡೆದಿರುವುದು ಭ್ರಷ್ಟಾಚಾರದ ವಿರುದ್ಧ ಅಲ್ಲ, ಯುಪಿಎ ಸರಕಾರದ ವಿರುದ್ಧ ಎನ್ನುವುದು ಹಝಾರೆಗೆ ಹೊಳೆಯಲು ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರಬೇಕಾಯಿತು.

ಹಝಾರೆ ಅಂದು ಉಪವಾಸ ಕೂತಿದ್ದಾಗ, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಅತ್ಯಂತ ಭಾವುಕವಾದ ಪತ್ರವೊಂದನ್ನು ಹಝಾರೆಗೆ ಬರೆದಿದ್ದರು. ‘‘ನಾನು ಯುವಕನಾಗಿದ್ದಾಗಿನಿಂದ ನಿಮ್ಮ ಅಭಿಮಾನಿ....’’ ಎಂದು ಹೇಳಿಕೊಂಡಿದ್ದರು. ‘‘ನಿಮ್ಮ ಆರೋಗ್ಯದ ಬಗ್ಗೆ ನೋಡಿಕೊಳ್ಳಿ.....ಭ್ರಷ್ಟರು ಯಾವುದಕ್ಕೂ ಹೇಸುವವರಲ್ಲ’’ ಎಂದಿದ್ದರು. ‘‘...ನೀವು ಉಪವಾಸ ಕೂತಿರುವ ಈ ಹೊತ್ತಿನಲ್ಲಿ ನಾನು ಉಪವಾಸ ಮಾಡುತ್ತಿದ್ದೇನೆ’’ ಎಂದು ಬೊಗಳೆ ಬಿಟ್ಟಿದ್ದರು. ಇದೀಗ ಹಝಾರೆಯವರು ಅಂದಿನ ಅದೇ ಬೇಡಿಕೆಯನ್ನು ಮುಂದಿಟ್ಟು ಏಳು ದಿನಗಳಿಂದ ರಾಳೆಗಣಸಿದ್ದಿಯಲ್ಲಿ ಉಪವಾಸ ಕೂತಿದ್ದಾರಾದರೂ, ಮೋದಿ ಬಂದು ಭೇಟಿ ಮಾಡುವುದಿರಲಿ, ಒಂದು ಪತ್ರವನ್ನೂ ಬರೆದಿಲ್ಲ. ‘‘ನನ್ನನ್ನು ಬಿಜೆಪಿ ಬಳಸಿಕೊಂಡಿತ್ತು’’ ಎನ್ನುವುದು ಹಝಾರೆಗೆ ತಡವಾಗಿ ಹೊಳೆಯಿತು ಮಾತ್ರವಲ್ಲ, ಅದನ್ನು ಬಹಿರಂಗವಾಗಿ ಹೇಳಿಯೇ ಬಿಟ್ಟರು. ಅಷ್ಟೇ ಅಲ್ಲ, ‘‘ನನ್ನ ಪ್ರಾಣಕ್ಕೇನಾದರೂ ಸಂಭವಿಸಿದರೆ ಮೋದಿಯೇ ಹೊಣೆ’’ ಎಂದು ಮಾಧ್ಯಮಗಳಲ್ಲಿ ಅಲವತ್ತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಯಿತು. ಒಂದು ರೀತಿಯಲ್ಲಿ ‘‘ಸರಕಾರದ ಪರವಾಗಿ ಯಾರಾದರೂ ಬಂದು ನನ್ನ ಪ್ರಾಣ ಉಳಿಸಿ’ ಎಂದು ಅವರು ಪರೋಕ್ಷವಾಗಿ ಗೋಳಾಡಿದಂತಿತ್ತು. ಕೊನೆಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಭೇಟಿಯಾದುದನ್ನೇ ನೆಪವಾಗಿಟ್ಟುಕೊಂಡು ಅವರು ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದರು.

 ಸದ್ಯದ ಸಂದರ್ಭದಲ್ಲಿ ಅಣ್ಣಾ ಹಝಾರೆಯವರ ‘ಲೋಕಪಾಲ ಸ್ಥಾಪನೆ’ಯ ಬೇಡಿಕೆಯೇ ಅಸಂಗತವಾದುದು. ಇರುವ ಎಲ್ಲ ತನಿಖಾ ಸಂಸ್ಥೆಗಳನ್ನು ಹಸ್ತಕ್ಷೇಪ ನಡೆಸಿ ದುರ್ಬಲಗೊಳಿಸಿರುವ ಸರಕಾರವೊಂದು ತನ್ನ ವಿರುದ್ಧ ತನಿಖೆ ನಡೆಸಲು ಲೋಕಪಾಲ ಸಂಸ್ಥೆಯನ್ನು ಸ್ಥಾಪಿಸುತ್ತದೆ ಎಂಬ ನಿರೀಕ್ಷೆಗೆೆ ಯಾವ ಅರ್ಥವೂ ಇಲ್ಲ. ಸಿಬಿಐ ಮುಖ್ಯಸ್ಥನನ್ನು ಅಸಾಂವಿಧಾನಿಕವಾಗಿ ಹೊರದಬ್ಬಿತು. ಸಿಬಿಐ ಇಂದು ತನ್ನ ವಿಶ್ವಾಸಾರ್ಹತೆಯನ್ನು ಎಷ್ಟರಮಟ್ಟಿಗೆ ಕಳೆದುಕೊಂಡಿದೆಯೆಂದರೆ ರಾಜ್ಯವೊಂದರ ಪೊಲೀಸ್ ಅಧಿಕಾರಿಗಳು ಅವರನ್ನು ಬಂಧಿಸುವ ಮಟ್ಟಕ್ಕೆ. ಐಟಿ ಅಧಿಕಾರಿಗಳೆಲ್ಲ ಸರಕಾರದ ಗುಲಾಮರಾಗಿ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಹೊತ್ತಿನಲ್ಲಿ ಇನ್ನೊಂದು ಹೊಸ ಲೋಕಪಾಲ ಸಂಸ್ಥೆ ಅದರಲ್ಲೂ ಪ್ರಧಾನಿಯನ್ನೇ ವಿಚಾರಣೆ ನಡೆಸುವ ಸಂಸ್ಥೆಯೊಂದಕ್ಕೆ ಒತ್ತಾಯಿಸುವುದು ಅಸಂಗತವಲ್ಲದೆ ಇನ್ನೇನೂ ಅಲ್ಲ.

ಸಿಬಿಐ ಸೇರಿದಂತೆ ಎಲ್ಲ ಸಂಸ್ಥೆಗಳನ್ನು ದುರ್ಬಲಗೊಳಿಸಿರುವ ಬಗ್ಗೆ ವೌನವಾಗಿರುವ ಅಣ್ಣಾ ಹಝಾರೆ, ರಫೇಲ್ ಹಗರಣದಂತಹ ಬೃಹತ್ ಹಗರಣಗಳು ತನಿಖೆಯಿಲ್ಲದೆ ಅನಾಥವಾಗಿರುವ ಸಂದರ್ಭದಲ್ಲಿ ಲೋಕಪಾಲವನ್ನು ಸರಕಾರದಿಂದ ನಿರೀಕ್ಷಿಸುವುದು ಅಸಾಧ್ಯ. ಯುಪಿಎ ಸರಕಾರ ಈ ದೇಶದಲ್ಲಿ ಆರ್‌ಟಿಐ ಕಾಯ್ದೆಯನ್ನು ತರುವ ಮೂಲಕ ಜನರಿಗೆ ರಾಜಕಾರಣಿಗಳನ್ನು, ಆಡಳಿತ ಶಾಹಿಯನ್ನು ಪ್ರಶ್ನಿಸುವ ಅಧಿಕಾರವನ್ನು ಕೊಟ್ಟಿತು. ಅಷ್ಟರಮಟ್ಟಿಗಾದರೂ ಅಂದಿನ ಯುಪಿಎ ಸರಕಾರವನ್ನು ಅಭಿನಂದಿಸಬೇಕು. ಇಂದು ಮೋದಿ ನೇತೃತ್ವದ ಸರಕಾರ ಆರ್‌ಟಿಐ ಕಾಯ್ದೆಯ ರೆಕ್ಕೆ ಪುಕ್ಕಗಳನ್ನು ಕತ್ತರಿಸಿ ಹಾಕಿದೆ. ಅವುಗಳ ವಿರುದ್ಧ ಮಾತನಾಡದ ಹಝಾರೆ, ತನ್ನ ಉಪವಾಸ ಸತ್ಯಾಗ್ರಹಕ್ಕೆ ಮಣಿದು ಲೋಕಪಾಲವನ್ನು ಸರಕಾರ ರಚಿಸುತ್ತದೆ ಎಂದು ಭಾವಿಸುವುದು ಅವರ ಮುಗ್ಧತನವೆಂದು ಭಾವಿಸಬೇಕಾಗುತ್ತದೆ. ಒಂದು ವೇಳೆ ಹಝಾರೆಯವರು ಲೋಕಪಾಲ ಸಂಸ್ಥೆಯನ್ನು ನಿಜಕ್ಕೂ ಬಯಸುತ್ತಾರಾದರೆ, ಅವರು ಮೋದಿ ಸರಕಾರವನ್ನೇ ಕೆಳಗಿಳಿಸುವುದಕ್ಕಾಗಿ ಹೊಸ ಹೋರಾಟ ಆರಂಭ ಮಾಡಬೇಕಾಗುತ್ತದೆ. ಮೋದಿ ಪ್ರಧಾನಿಯಾಗಿರುವವರೆಗೆ ಲೋಕಪಾಲ ಸ್ಥಾಪನೆಯಾಗಲು ಸಾಧ್ಯವಿಲ್ಲ.

ಅವರೇ ಹೇಳಿಕೊಂಡಂತೆ ಯುಪಿಎ ಸರಕಾರದ ಅವಧಿಯಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಹಝಾರೆಯನ್ನು ಬಳಸಿಕೊಂಡಿತು. ಅವರನ್ನು ಮುಂದಿಟ್ಟು ಚದುರಂಗದಾಟ ಆಡಿತು. ಅವರ ಸುತ್ತ ಮುತ್ತ ಇರುವವರ್ಯಾರೂ ಭ್ರಷ್ಟಾಚಾರದ ಕುರಿತಂತೆ ಕಾಳಜಿಯಿದ್ದವರಾಗಿರಲಿಲ್ಲ. ಬದಲಿಗೆ ಯುಪಿಎ ಸರಕಾರವನ್ನು ಉರುಳಿಸಿ, ಆರೆಸ್ಸೆಸ್ ನೇತೃತ್ವದಲ್ಲಿ ಬಿಜೆಪಿ ಸರಕಾರವನ್ನು ತರುವುದಷ್ಟೇ ಅವರ ಉದ್ದೇಶವಾಗಿತ್ತು. ಸೇರಿದ ಜನಸಮೂಹದಲ್ಲಿ ಬಹುತೇಕರು ಆರೆಸ್ಸೆಸ್ ತಂದು ಬಿಟ್ಟ ಹುಡುಗರಾಗಿದ್ದರು. ಮಾಧ್ಯಮಗಳ ಗುರಿಯೂ ಭ್ರಷ್ಟಾಚಾರವಾಗಿರಲಿಲ್ಲ. ಸ್ವತಃ ಭ್ರಷ್ಟರಾಗಿ ರಾಜಕೀಯ ಪಕ್ಷಗಳಿಗೆ ಮಾರಿಕೊಂಡಿರುವ ಮಾಧ್ಯಮಗಳು ಅಣ್ಣಾ ಜೊತೆಗೆ ಸೇರಿ ಭ್ರಷ್ಟಾಚಾರವನ್ನು ವಿರೋಧಿಸುತ್ತದೆ ಎನ್ನುವುದೇ ಹಾಸ್ಯಾಸ್ಪದ.

ಅಂದು ಸೇರಿದ ಜನರೆಲ್ಲ ಇಂದು ನೆರೆಯುತ್ತಾರೆ ಎನ್ನುವ ಭ್ರಮೆಯಿಂದ ಅಣ್ಣಾ ಹಝಾರೆ ಮತ್ತೆ ಬೀದಿಗಿಳಿದರು ಅಥವಾ ಅವರು ಇನ್ನಾವುದೋ ಒಳ ಬೇಡಿಕೆಯನ್ನು ಮುಂದಿಟ್ಟುಕೊಂಡು ಸತ್ಯಾಗ್ರಹ ಕೂತಿರಲೂ ಬಹುದು. ಅಣ್ಣಾ ಹಝಾರೆಯೂ ರಾಜಕೀಯಕ್ಕೆ ಹೊರತಾದವರಲ್ಲ. ಗಾಂಧೀವಾದದ ಕುರಿತಂತೆಯೇ ಅಪ್ರಬುದ್ಧರಾಗಿ ಮಾತನಾಡುವ ಅಣ್ಣಾ ಹಝಾರೆ, ಗುಜರಾತ್‌ನ ಅಭಿವೃದ್ಧಿಯನ್ನು ಬಾಯಿ ತಪ್ಪಿ ಹೊಗಳಿದವರು. ರಾಜಕೀಯವಾಗಿಯೂ ಸ್ಪಷ್ಟ ನಿಲುವುಗಳಿಲ್ಲದ ಅಣ್ಣಾ ಹಝಾರೆ ಈಗಲೂ ಯಾವು ಯಾವುದೋ ಶಕ್ತಿಗಳು ಕುಣಿಸಿದಂತೆ ಕುಣಿಯುತ್ತಿರುವವರು.

‘‘ಬೇಡಿಕೆ ಈಡೇರಿಸುವ ಭರವಸೆ ದೊರೆತಿದೆ. ಆ ಕಾರಣದಿಂದ ಸತ್ಯಾಗ್ರಹದಿಂದ ಹಿಂದೆ ಸರಿದಿದ್ದೇನೆ’’ ಎಂಬ ಅಣ್ಣಾ ಮಾತು ಒಂದೋ ಸಮಯಸಾಧಕತನದ್ದು ಅಥವಾ ಹತಾಶೆಯದ್ದು. ಈಗ ಇರುವ ತನಿಖಾ ಸಂಸ್ಥೆಗಳೊಂದಿಗೆ ಸರಕಾರ ನಡೆಸಿದ ಹಸ್ತಕ್ಷೇಪದ ಪರಮಾವಧಿಯನ್ನು ಕಂಡ ಯಾರೂ, ಆ ಭರವಸೆಯನ್ನು ನಂಬಲಾರರು. ಕನಿಷ್ಠ ರಫೇಲ್ ಹಗರಣವನ್ನು ಸಂಸದೀಯ ಸಮಿತಿ ತನಿಖೆ ಮಾಡಬೇಕು ಎಂದು ಹಝಾರೆ ಆಗ್ರಹಿಸಿದ್ದರೂ ಅದನ್ನು ನಂಬಬಹುದಿತ್ತು ಮತ್ತು ಇತರ ರಾಜಕೀಯ ಪಕ್ಷಗಳೂ ಅವರ ಜೊತೆಗೂಡುತ್ತಿದ್ದವೇನೋ. ಹಝಾರೆ ಕೇಂದ್ರ ಸರಕಾರದ ವಿರುದ್ಧ ಅಂತಹ ನಿಷ್ಟುರ ನಿರ್ಧಾರಗಳನ್ನು ಯಾವತ್ತೂ ತೆಗೆದುಕೊಂಡಿಲ್ಲ. ಆಳದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಜೊತೆಗೆ ಮೃದು ಸಂಬಂಧ ಹೊಂದಿರುವುದರಿಂದಲೇ ಅವರೆಲ್ಲ ಸತ್ಯಾಗ್ರಹಗಳು ಒಂದು ಅಣಕವಾಗಿ ಮುಗಿದು ಹೋಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News