ಗಾಯಗೊಂಡ ತಾಯಿ ಬಳಿ 320 ಕಿಮೀ ದೂರದಿಂದ ಆ್ಯಂಬುಲೆನ್ಸ್ ಗಿಂತ ಮುಂಚೆ ಬಂದು ತಲುಪಿದ ಮಗ !

Update: 2019-02-08 09:12 GMT

ಲಂಡನ್, ಫೆ. 8:  ಬಿದ್ದು ಮೂಳೆ ಮುರಿತಕ್ಕೊಳಗಾದ ತನ್ನ 77 ವರ್ಷದ ತಾಯಿಯ ಬಳಿಗೆ 320 ಕಿಮೀ ದೂರದ ಬ್ರಿಕ್ಸ್ ಟನ್‍ನಿಂದ ನಾಲ್ಕು ಗಂಟೆಗಳಲ್ಲಿ ಧಾವಿಸಿ ಬಂದ ಮಗ, ಅಂಬುಲೆನ್ಸ್ ಆಗಮಿಸುವುದಕ್ಕಿಂತಲೂ ಮೊದಲು ತಾಯಿ ಬಳಿ ಎಕ್ಸ್ ಮೌತ್ ಗೆ ತಲುಪಿದ ಅಪರೂಪದ ಘಟನೆ ವರದಿಯಾಗಿದೆ.

ತಾಯಿ ಇರುವ ಎಕ್ಸ್ ಮೌತ್, ದೇವೊನ್ ತಲುಪಲು ಮಾರ್ಕ್ ಕ್ಲೆಮೆಂಟ್ಸ್ (48) ಎಂಬ ವ್ಯಕ್ತಿ, ಒಂದು ಬಸ್ಸು, ಎರಡು ಟ್ಯೂಬ್ ಸರ್ವಿಸ್ ಹಾಗೂ ಎರಡು ರೈಲುಗಳನ್ನು ಹತ್ತಿ  ಧಾವಿಸಿ ಬಂದರೂ ಮಹಿಳೆ ಬಿದ್ದು ಏಳು ಗಂಟೆ ನಂತರವೂ ಅಲ್ಲಿಗೆ ಅಂಬುಲೆನ್ಸ್ ಆಗಮಿಸಿರಲಿಲ್ಲ.

ಮೊಣಕಾಲ ಶಸ್ತ್ರಕ್ರಿಯೆಗೊಳಗಾಗಿರುವ ಕ್ಲೆಮೆಂಟ್ಸ್ ತಂದೆ ಘಟನೆ ನಡೆದಾಗ ಮನೆಯಲ್ಲಿದ್ದರು.

ಕ್ಲೆಮೆಂಟ್ಸ್ ಹೊರಡುವುದಕ್ಕಿಂತೆ ಎರಡು ಗಂಟೆ ಮುಂಚಿತವಾಗಿಯೇ ಅಂಬುಲೆನ್ಸ್ ಗೆ ಕರೆ ಮಾಡಲಾಗಿತ್ತಾದರೂ  ಕ್ಲೆಮೆಂಟ್ಸ್ ತಮ್ಮ ತಾಯಿಯ ಬಳಿ ತಲುಪಿದ ಒಂದು ಗಂಟೆ ನಂತರ ಹತ್ತಿರದಲ್ಲಿಯೇ ಇದ್ದ ಅಂಬುಲೆನ್ಸ್ ಕೇಂದ್ರದಿಂದ ಅಂಬುಲೆನ್ಸ್ ಅಲ್ಲಿಗೆ ಆಗಮಿಸಿತ್ತು. ಅಷ್ಟರೊಳಗಾಗಿ ನೋವಿನಿಂದ ನರಳುತ್ತಿದ್ದ ತನ್ನ ತಾಯಿ ತನಗೆ ಸಾಯಬೇಕು ಎಂದು ಚೀರಿದ್ದರು ಎಂದು ಕ್ಲೆಮೆಂಟ್ಸ್ ಹೇಳುತ್ತಾರೆ. ಮಹಿಳೆ ಶಸ್ತ್ರಕ್ರಿಯೆಯ ನಂತರ ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಅಂಬುಲೆನ್ಸ್ ತಡವಾಗಿ ಬಂದಿದ್ದಕ್ಕೆ ಕುಟುಂಬ ಸೌತ್ ವೆಸ್ಟರ್ನ್ ಅಂಬುಲೆನ್ಸ್ ಸರ್ವಿಸ್ ಗೆ ದೂರು ಸಲ್ಲಿಸಿದೆ. ಆ ಸಮಯದಲ್ಲಿ ತಮಗೆ ಹಲವಾರು ತುರ್ತು ಕರೆಗಳು ಬಂದಿದ್ದರಿಂದ ಆಗಮಿಸಲು ವಿಳಂಬವಾಗಿತ್ತು ಎಂದು ಸಂಸ್ಥೆ ಸಮಜಾಯಿಷಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News