ಜವಾಬ್ದಾರಿಯುತ ವಿರೋಧ ಪಕ್ಷ ರಾಜ್ಯದ ಇಂದಿನ ಅಗತ್ಯ

Update: 2019-02-09 04:33 GMT

ವಿರೋಧ ಪಕ್ಷವಾಗಿರುವ ಬಿಜೆಪಿಯ ಎಲ್ಲ ಸಂಚುಗಳನ್ನು ವಿಫಲಗೊಳಿಸಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ತನ್ನ ಮೊದಲ ಸಂಪೂರ್ಣ ಬಜೆಟನ್ನು ಮಂಡಿಸುವಲ್ಲಿ ಯಶಸ್ವಿಯಾಗಿದೆ. ಸಾಧಾರಣವಾಗಿ ವಿರೋಧ ಪಕ್ಷಗಳು ಸದನಗಳಲ್ಲಿ ಸರಕಾರದ ವೈಫಲ್ಯಗಳನ್ನು ಗುರಿ ಮಾಡಿ ದಾಳಿ ನಡೆಸಿ, ಅವುಗಳನ್ನು ಮುಜುಗರಕ್ಕೀಡು ಮಾಡುತ್ತವೆ. ವಿರೋಧ ಪಕ್ಷಗಳು ಸದನದಲ್ಲೇ ತನ್ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸಬೇಕು. ದುರದೃಷ್ಟವಶಾತ್ ಕಳೆದ ಒಂದೆರಡು ತಿಂಗಳ ಬೆಳವಣಿಗೆಗಳನ್ನು ಗಮನಿಸುವಾಗ, ವಿರೋಧ ಪಕ್ಷ ರಿಸಾರ್ಟ್‌ಗಳನ್ನೇ ಸದನವಾಗಿ ಪರಿವರ್ತಿಸಿಕೊಂಡು ಸರಕಾರವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಅಧಿವೇಶನದಲ್ಲಿ ಆಡಳಿತ ಪಕ್ಷದ ವೈಫಲ್ಯಗಳನ್ನು ಮುಂದಿಟ್ಟು ಚರ್ಚೆ ನಡೆಸುವುದನ್ನು ಬಿಟ್ಟು, ತಾವು ನಡೆಸಿದ ‘ಆಪರೇಶನ್ ಕಮಲ’ದ ಸಾಧನೆಯನ್ನು ಮುಂದಿಟ್ಟು ಬಿಜೆಪಿ ಅಧಿವೇಶನಕ್ಕೆ ತಡೆಯನ್ನುಂಟು ಮಾಡಿತು. ‘‘ಮೈತ್ರಿ ಸರಕಾರಕ್ಕೆ ಬಹುಮತವಿಲ್ಲ, ಆದುದರಿಂದ ಅದಕ್ಕೆ ಬಜೆಟ್ ಮಂಡನೆ ಮಾಡಲು ಹಕ್ಕಿಲ್ಲ’’ ಎನ್ನುವುದು ಯಡಿಯೂರಪ್ಪ ಆರೋಪ ಮತ್ತು ಇದನ್ನೇ ಮುಂದಿಟ್ಟು ಬಿಜೆಪಿ ಶಾಸಕರು ಎರಡು ದಿನಗಳ ಕಾಲ ಗದ್ದಲ ಎಬ್ಬಿಸಿ ಕಲಾಪ ಪೋಲಾಗುವಂತೆ ನೋಡಿಕೊಂಡರು. ಆದರೆ ‘ಸರಕಾರ ಬಹುಮತ ಕಳೆದುಕೊಂಡಿದೆ’ ಎನ್ನುವುದನ್ನು ಇವರು ಯಾವ ಆಧಾರದಲ್ಲಿ ಮಂಡಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.

 ಯಾವುದೇ ಶಾಸಕರ ಗುಂಪು ಈವರೆಗೆ ರಾಜ್ಯಪಾಲರ ಬಳಿ ಹೋಗಿ ‘ತಾವು ಬೆಂಬಲ ಹಿಂದೆಗೆದುಕೊಂಡಿದ್ದೇವೆ’ ಎಂದು ಮನವಿ ಮಾಡಿಲ್ಲ. ಒಂದು ವೇಳೆ ಸರಕಾರ ಬಹುಮತ ಕಳೆದುಕೊಂಡಿದೆ ಎಂದಾದರೆ ಅವಿಶ್ವಾಸ ನಿರ್ಣಯವನ್ನು ಮಂಡಿಸಬೇಕು. ಬಿಜೆಪಿ ಆ ನಿಟ್ಟಿನಲ್ಲೂ ಹೆಜ್ಜೆ ಮುಂದಿಟ್ಟಿಲ್ಲ. ಯಾರೋ ಕೆಲವು ಶಾಸಕರು ಮುಂಬೈಯಲ್ಲಿ ನೆಲೆಸಿದ್ದಾರೆ, ಪಕ್ಷದ ನಾಯಕರ ಕುರಿತಂತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ, ಬಿಜೆಪಿಯನ್ನು ಸಂಪರ್ಕಿಸಿದ್ದಾರೆ ಎನ್ನುವ ಕಾರಣಕ್ಕಾಗಿ ರಾಜ್ಯ ಸರಕಾರ ರಾಜೀನಾಮೆ ನೀಡಬೇಕು ಎನ್ನುವುದು ಪ್ರಜಾಸತ್ತೆಯ ವ್ಯಂಗ್ಯವಾಗಿದೆ. ಇಷ್ಟಕ್ಕೂ ರಾಜೀನಾಮೆ ನೀಡಬೇಕಾಗಿರುವುದು ಸರಕಾರವಲ್ಲ. ತನ್ನ ಬಳಿ ಯಾವುದೇ ಶಾಸಕರ ಬಲವಿಲ್ಲದೇ ಇದ್ದರೂ ಪದೇ ಪದೇ ‘ಸರಕಾರ ರಚಿಸುತ್ತೇವೆ’ ಎಂದು ಹೇಳಿಕೆ ನೀಡುತ್ತಾ ಬರುತ್ತಿರುವ ಬಿಜೆಪಿಯ ನಾಯಕರೇ ರಾಜೀನಾಮೆ ನೀಡಬೇಕು. ಅವರು ಅಂತಹ ಹೇಳಿಕೆಗಳ ಮೂಲಕ ಬಹಿರಂಗವಾಗಿ ‘ಕುದುರೆ ವ್ಯಾಪಾರ’ಕ್ಕೆ ಇಳಿದಿದ್ದಾರೆ. ಕುದುರೆ ವ್ಯಾಪಾರ ಪ್ರಜಾಸತ್ತೆಗೆ ಮಾರಕವಾಗಿದೆ. ಶಾಸಕರನ್ನು ಖರೀದಿ ಮಾಡುವ ಭರವಸೆಯೊಂದಿಗೆ ‘‘ಸರಕಾರ ಬೆಂಬಲಕಳೆದುಕೊಂಡಿದೆ’’ ಎಂದು ಸದನದಲ್ಲಿ ವಾದಿಸುವುದು ಒಬ್ಬ ಅಪ್ರಬುದ್ಧ ರಾಜಕಾರಣಿಯಿಂದಷ್ಟೇ ಸಾಧ್ಯ ಹಾಗೂ ಇದಕ್ಕಾಗಿ ಎರಡು ದಿನಗಳ ಕಲಾಪ ಪೋಲಾಗಿರುವುದು ಬಹುದೊಡ್ಡ ‘ಅಪರಾಧ’ವಾಗಿದೆ. ಈ ಬಗ್ಗೆ ಬಿಜೆಪಿ ನಾಯಕರು ಜನಸಾಮಾನ್ಯರಿಗೆ ಸ್ಪಷ್ಟೀಕರಣ ನೀಡಬೇಕು.

ಇವೆಲ್ಲದರ ಜೊತೆಗೆ ಯಡಿಯೂರಪ್ಪ ‘ಕುದುರೆವ್ಯಾಪಾರ’ ನಡೆಸುತ್ತಿರುವ ಒಂದು ಆಡಿಯೊವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ, ಸರಕಾರ ರಚನೆಗೆ ಮುನ್ನವೂ ಇಂತಹದೇ ಆಡಿಯೊ ಬಿಡುಗಡೆಯಾಗಿತ್ತು. ಜೆಡಿಎಸ್‌ನ ಪ್ರಮುಖ ನಾಯಕನೊಬ್ಬನ ಜೊತೆಗೆ ಯಡಿಯೂರಪ್ಪ ಮಾತನಾಡುತ್ತಾ, ಅವರಿಗೆ ದರ ನಿಗದಿ ಮಾಡುವ ಧ್ವನಿಮುದ್ರಣ ಅದಾಗಿತ್ತು. ಯಡಿಯೂರಪ್ಪರ ಪ್ರಯತ್ನ ನಿಂತಿಲ್ಲ, ಅದು ಮುಂದುವರಿದಿದೆ ಎನ್ನುವುದಕ್ಕೆ ಇದೀಗ ಬಿಡುಗಡೆಗೊಂಡಿರುವ ಆಡಿಯೊ ಸಾಕ್ಷಿಯಾಗಿದೆ. ‘ಯಡಿಯೂರಪ್ಪರ ಧ್ವನಿಯಲ್ಲಿ ಬೇರೆಯವರು ಮಾತನಾಡಿದ್ದಾರೆ’ ಎಂದು ಬಿಜೆಪಿ ನಾಯಕರು ಇದನ್ನು ತೇಲಿಸಿ ಬಿಡುತ್ತಿದ್ದಾರಾದರೂ, ಕಳೆದ ಎರಡು ತಿಂಗಳ ಬೆಳವಣಿಗೆಗಳನ್ನು ಗಮನಿಸಿದರೆ ಇದು ಯಡಿಯೂರಪ್ಪರ ಮಿಮಿಕ್ರಿಯಂತಿಲ್ಲ ಮತ್ತು ಕುದುರೆ ವ್ಯಾಪಾರಕ್ಕೆ ಬಲಿಯಾದ ಬಿಜೆಪಿ ಮುಖಂಡರೊಬ್ಬರು ನೇರವಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಆಡಿಯೋ ನಕಲಿಯೋ, ಅಸಲಿಯೋ ಎನ್ನುವುದು ಪರೀಕ್ಷೆಗೊಳಗಾಗಬೇಕಾಗಿದೆ.

ಒಂದು ವೇಳೆ ಕುದುರೆ ವ್ಯಾಪಾರ ನಡೆಯುತ್ತಿರುವುದು ನಿಜವೇ ಆಗಿದ್ದರೆ ಅದರ ಹಿಂದಿರುವ ಕುಳಗಳನ್ನು ಬಂಧಿಸಿ, ಅವರ ಆರ್ಥಿಕ ಮೂಲಗಳನ್ನು ತನಿಖೆಗೊಳಪಡಿಸಬೇಕಾಗಿದೆ. ಆದರೆ ಕೇಂದ್ರದಲ್ಲಿಯೂ ಬಿಜೆಪಿ ಸರಕಾರ ಇರುವುದರಿಂದ ಇದು ಸದ್ಯಕ್ಕೆ ಅಸಾಧ್ಯವಾಗಿದೆ. ಆದರೆ ಈ ಕುದುರೆವ್ಯಾಪಾರದಿಂದ ಆಡಳಿತದ ಮೇಲೆ ತೀವ್ರ ದುಷ್ಪರಿಣಾಮ ಬೀರಿರುವುದಂತೂ ಸತ್ಯ. ಆದುದರಿಂದ ಆಗಾಗ ಬಿಜೆಪಿಯ ಜೊತೆಗೆ ಗುರುತಿಸಿಕೊಳ್ಳುತ್ತಾ, ಸರಕಾರವನ್ನು ಬ್ಲಾಕ್ ಮೇಲ್ ಮಾಡುವ ಶಾಸಕರ ಕುರಿತಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೊದಲು ಕ್ರಮ ತೆಗೆದುಕೊಳ್ಳಬೇಕಾಗಿದೆ. ಯಾಕೆಂದರೆ ಮಾರಾಟವಾಗುವವರಿದ್ದಾಗ ಮಾತ್ರ ಅವರನ್ನು ಕೊಳ್ಳುವವರು ಮುಂದೆ ಬರುತ್ತಾರೆ. ಕೊಳ್ಳುವುದು ಎಷ್ಟು ಅಪರಾಧವೋ, ಮಾರಾಟವಾಗುವುದೂ ಅಷ್ಟೇ ಅಪರಾಧ. ಆದುದರಿಂದ ಮೊದಲು ಮೈತ್ರಿ ಸರಕಾರ ತನ್ನ ಶಾಸಕರಿಗೆ ಮೂಗುದಾರ ತೊಡಿಸಬೇಕಾಗಿದೆ.
 ಕುದುರೆ ವ್ಯಾಪಾರ ಸ್ವತಃ ಬಿಜೆಪಿಯ ವರ್ಚಸ್ಸಿಗೆ ಅದರಲ್ಲೂ ಯಡಿಯೂರಪ್ಪರ ವರ್ಚಸ್ಸಿಗೆ ತೀವ್ರ ಧಕ್ಕೆಯನ್ನು ತಂದಿದೆ. ಪದೇ ಪದೇ ‘ನಾವು ಸರಕಾರ ರಚಿಸಲು ಸಿದ್ಧ’ ಎಂದು ಹೇಳಿಕೊಳ್ಳುವುದು ಮತ್ತು ಅದರಲ್ಲಿ ವಿಫಲವಾಗುವುದು ಬಿಜೆಪಿಯನ್ನು ಇನ್ನಷ್ಟು ದುರ್ಬಲಗೊಳಿಸುತ್ತಿದೆ.

ಯಡಿಯೂರಪ್ಪರ ವರ್ಚಸ್ಸಿಗೆ ಕಳಂಕ ತರಲು ಬಿಜೆಪಿಯೊಳಗಿನ ನಾಯಕರೇ ಅವರಲ್ಲಿ ಈ ಆಮಿಷ ತುಂಬುತ್ತಿದ್ದಾರೆ ಎನ್ನುವುದು ಪಕ್ಷದೊಳಗಿರುವವರದೇ ಮಾತು. ಈ ಮೂಲಕ ಯಡಿಯೂರಪ್ಪರನ್ನು ‘ಅಧಿಕಾರ ದಾಹಿ’ಯಂತೆ ಬಿಜೆಪಿಯೇ ನಾಡಿನ ಜನರ ಮುಂದೆ ಚಿತ್ರಿಸುತ್ತಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯ ಈ ‘ಆಪರೇಷನ್ ಕಮಲ’ ಸರಕಾರದಲ್ಲಿ ಅನಗತ್ಯ ‘ಅಭದ್ರತೆ’ಯನ್ನು ಸೃಷ್ಟಿಸತೊಡಗಿದೆ. ಇದರಿಂದ ಅಭಿವೃದ್ಧಿ ಕಾರ್ಯಕ್ರಮವನ್ನು ಜಾರಿಗೊಳಿಸಲು ಮೀಸಲಿಡುವ ಸಮಯವನ್ನು ತಮ್ಮ ಸರಕಾರ ಉಳಿಸುವುದಕ್ಕಾಗಿ ಅಂದರೆ ಬಿಜೆಪಿಯ ಬಲೆಗೆ ತಮ್ಮ ಶಾಸಕರು ಬೀಳದಂತೆ ತಡೆಯುವುದಕ್ಕಾಗಿ ಮೀಸಲಿಡಬೇಕಾಗಿದೆ. ‘ಆಪರೇಷನ್ ಕಮಲ’ ಪ್ರಯತ್ನ ಹೆಚ್ಚಿದಷ್ಟೂ ಸರಕಾರದೊಳಗೆ ಭ್ರಷ್ಟಾಚಾರವೂ ಹೆಚ್ಚುತ್ತದೆ. ಶಾಸಕರನ್ನು ಕೊಂಡುಕೊಳ್ಳುವುದಕ್ಕಾಗಿ ಹಾಗೂ ಉಳಿಸಿಕೊಳ್ಳುವುದಕ್ಕಾಗಿ ಉಭಯ ಪಕ್ಷಗಳೂ ಹಣ ಚೆಲ್ಲಬೇಕು. ಇಂತಹ ಅನಿವಾರ್ಯ, ಸರಕಾರವನ್ನು ಭ್ರಷ್ಟಾಚಾರಿಗಳ ಕೈಗೆ ಒಪ್ಪಿಸುವ ಸಾಧ್ಯತೆಗಳಿವೆ. ಈಗಾಗಲೇ ಸರಕಾರ ರಚಿಸಲು ಪ್ರಯತ್ನಿಸಿ ಸೋತಿರುವ ಬಿಜೆಪಿ ವಿರೋಧ ಪಕ್ಷದಲ್ಲಿ ಕೂತು ತನ್ನ ಹೊಣೆಗಾರಿಕೆಯನ್ನು ಪ್ರಬುದ್ಧತೆಯಿಂದ ನಿರ್ವಹಿಸಬೇಕು. ಸರಕಾರದ ಆಡಳಿತ ವೈಫಲ್ಯಗಳನ್ನು ಗುರುತಿಸಿ ಅವುಗಳನ್ನು ಮತದಾರರ ಮುಂದೆ ತರುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ಬಿಜೆಪಿ ಮತ್ತು ಮೈತ್ರಿ ಸರಕಾರದ ಜಗಳದಲ್ಲಿ ಮತದಾರನೆಂಬ ಕೂಸು ಬಡವಾಗಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News