'ಅಂದು ಚಾಯ್‌ ವಾಲಾ... ಇಂದು ರಫೇಲ್‌ ವಾಲಾ'

Update: 2019-02-09 03:43 GMT

ಕೊಲ್ಕತ್ತಾ, ಫೆ. 9: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀಕ್ಷ್ಣ ವಾಗ್ದಾಳಿ ಮುಂದುವರಿಸಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಂದು ಚಾಯ್‌ ವಾಲಾ ಆಗಿದ್ದ "ಮಡ್ಡಿ ಬಾಬು" ಇಂದು ರಫೇಲ್‌ ವಾಲಾ ಆಗಿ ಪರಿವರ್ತನೆಯಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

"ರಫೇಲ್ ವಿವಾದದಲ್ಲಿ ಕಾಂಗ್ರೆಸ್ ಪಕ್ಷದ ನಿಲುವನ್ನು ಬೆಂಬಲಿಸುತ್ತೇನೆ. ಏಕೆಂದರೆ ಇದು ದೇಶದ ಅತಿದೊಡ್ಡ ಹಗರಣಗಳಲ್ಲೊಂದು" ಎಂದು ಮಮತಾ ಬಣ್ಣಿಸಿದ್ದಾರೆ.

ಇದಕ್ಕೂ ಮುನ್ನ ಶುಕ್ರವಾರ ಜಲಪೈಗುರಿಯಲ್ಲಿ ನಡೆದ ರ್ಯಾಲಿಯಲ್ಲಿ ಮಮತಾ ಅವರನ್ನು ಟೀಕಿಸಿದ್ದ ಮೋದಿಗೆ ಟಿಎಂಸಿ ನಾಯಕಿ ತಿರುಗೇಟು ನೀಡಿದ್ದಾರೆ. "ಚಿಟ್‌ ಫಂಡ್ ಹಗರಣದಲ್ಲಿ ಷಾಮೀಲಾದವರಿಗೆ ಮಮತಾ ರಕ್ಷಣೆ ನೀಡುತ್ತಿದ್ದಾರೆ. ಆದರೆ ಹಗರಣದಲ್ಲಿ ಭಾಗಿಯಾದವರನ್ನು ಅಥವಾ ಅವರಿಗೆ ರಕ್ಷಣೆ ನೀಡುವವರನ್ನು ಸುಮ್ಮನೆ ಬಿಡುವುದಿಲ್ಲ" ಎಂದು ಮೋದಿ ಗುಡುಗಿದ್ದರು.

"ಆ ವ್ಯಕ್ತಿಯ (ಮೋದಿ) ಬಗ್ಗೆ ಹೆಚ್ಚು ಮಾತನಾಡದಿರುವುದೇ ಒಳ್ಳೆಯದು; ಈ ಮಡ್ಡಿಬಾಬು ಭ್ರಷ್ಟಾಚಾರದ ಮಾಸ್ಟರ್. ಅಹಂಕಾರದ ಮಾಸ್ಟರ್. ದೇಶಕ್ಕೆ ನಾಚಿಕೆಗೇಡು" ಎಂದು ಟೀಕಿಸಿದರು.

"ಅವರ ಮಟ್ಟವೇ ಕೀಳು. ಇಂಥ ವ್ಯಕ್ತಿ ಪ್ರಧಾನಿಯಾಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆ ಹುದ್ದೆಯ ಬಗ್ಗೆ ನಮಗೆ ಗೌರವವಿದೆ. ಆದರೆ ಆ ವ್ಯಕ್ತಿಯ ಬಗೆಗೆ ಇಲ್ಲ. ಭಾರತದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಮನುಷ್ಯ" ಎಂದು ಬಂಗಾಳದ ಜಾಗತಿಕ ವ್ಯಾಪಾರ ಶೃಂಗದ ಸಮಾರೋಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News