ಲೋಕಸಭೆಯಲ್ಲಿ ಸಭ್ಯತೆ ಮರೆತ ಪ್ರಧಾನಿ: ಪವಾರ್ ಆಕ್ರೋಶ

Update: 2019-02-09 07:56 GMT

ಪುಣೆ, ಫೆ.9: ಲೋಕಸಭೆಯಲ್ಲಿ ನರೇಂದ್ರ ಮೋದಿ ಗುರುವಾರ ಮಾಡಿರುವ ಭಾಷಣವನ್ನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತೀವ್ರವಾಗಿ ಟೀಕಿಸಿದ್ದಾರೆ.

  ‘‘ನಾನು ಪ್ರಧಾನಿ ಮೋದಿ ಅವರ ಭಾಷಣವನ್ನು ಕೇಳಿಲ್ಲ. ಅವರ ಭಾಷಣವನ್ನು ಸುದ್ದಿ ಪತ್ರಿಕೆಗಳಲ್ಲಿ ಓದಿದ್ದೇನೆ. ಮನಮೋಹನ್ ಸಿಂಗ್, ನರಸಿಂಹರಾವ್ ಹಾಗೂ ಇತರ ಪ್ರಧಾನಮಂತ್ರಿಗಳ ಭಾಷಣವನ್ನು ಕೇಳಿದ್ದೇನೆ. ಆ ಎಲ್ಲಾ ಭಾಷಣಗಳು ಸಭ್ಯತೆಯಿಂದ ಕೂಡಿದ್ದವು. ಸಂಸತ್ತಿಗೆ ಗೌರವ ನೀಡುವ ರೀತಿಯಲ್ಲಿತ್ತು. ಅವರು ಸಂಸ್ಕೃತಿಯನ್ನು ಪಾಲಿಸುತ್ತಿದ್ದ ಕಾರಣ ಅವರೆಲ್ಲರೂ ಚುನಾಯಿತ ಪ್ರತಿನಿಧಿಯನ್ನು ಗೌರವಿಸುತ್ತಿದ್ದರು’’ ಎಂದು ಹೇಳಿದ್ದಾರೆ.

16ನೇ ಲೋಕಸಭೆಯಲ್ಲಿ ಪ್ರಧಾನಿಯಾಗಿ ತನ್ನ ಕೊನೆಯ ಭಾಷಣದಲ್ಲಿ ಮೋದಿ ಅವರು ಕಾಂಗ್ರೆಸ್‌ನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಬಿಸಿ(ಬಿಫೋರ್ ಕಾಂಗ್ರೆಸ್) ಹಾಗೂ ಎಡಿ(ಆಫ್ಟರ್‌ ಡೈನಾಸ್ಟಿ) ಎಂದು ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬವನ್ನು ಟೀಕಿಸಿದ್ದರು.

‘‘ಪ್ರಧಾನಿ ಭಾಷಣ ಮಾಜಿ ಪ್ರಧಾನಿಗಳು ಅನುಸರಿಸುತ್ತಿದ್ದ ಸಭ್ಯತೆ ಹಾಗೂ ಸಂಸ್ಕೃತಿಯ ಸಂಪ್ರದಾಯಕ್ಕೆ ವಿರುದ್ಧವಾಗಿತ್ತು. ಕೆಲವರು ಈ ರೀತಿಯೇ ಆಲೋಚಿಸುತ್ತಿದ್ದರೆ, ಅವರ ಸಂಸ್ಕೃತಿಯೂ ಹಾಗೇ ಇರುತ್ತದೆ. ಅವರ ಸ್ವಭಾವವೂ ಅದೇ ರೀತಿ ಇರುತ್ತದೆ’’ ಎಂದು ಎನ್‌ಸಿಪಿ ಮುಖ್ಯಸ್ಥ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News