ಕುವೆಂಪು ಸಾಹಿತ್ಯದ ಕೇಂದ್ರ ಪೂರ್ಣದೃಷ್ಟಿ ಚಿಂತನೆ: ಸಂಶೋಧಕ ಡಾ.ಸುರೇಶ್ ನಾಗಲಮಡಿಕೆ

Update: 2019-02-09 17:16 GMT

ಬೆಂಗಳೂರು, ಫೆ.9: ಜಾತಿ, ಧರ್ಮ, ವರ್ಗಗಳನ್ನು ಮೀರಿದ ಪೂರ್ಣದೃಷ್ಟಿ ಚಿಂತನೆಯ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಸಾಮಾನ್ಯನ ನೆಲೆಯತ್ತ ಕೊಂಡೊಯ್ದ ಕೀರ್ತಿ ರಾಷ್ಟ್ರಕವಿ ಕುವೆಂಪುಗೆ ಸಲ್ಲುತ್ತದೆ ಎಂದು ಸಂಶೋಧಕ ಡಾ.ಸುರೇಶ್ ನಾಗಲಮಡಿಕೆ ಅಭಿಪ್ರಾಯಿಸಿದರು.

ಶನಿವಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತು ಲೊಯೋಲ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕುವೆಂಪು ಓದು ಕಮ್ಮಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕುವೆಂಪುರವರು ತಮ್ಮ ಜಲಗಾರ, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್ ನಾಟಕಗಳ ಮೂಲಕ ಶ್ರೀಸಾಮಾನ್ಯನ ಪರವಾಗಿ ಮಾತನಾಡುತ್ತಾರೆ. ಆ ಮೂಲಕ ಜ್ಞಾನವನ್ನು ಸಮಾಜವಾದದ ನೆಲೆಯುಲ್ಲಿ ಕಾಣುವ ಒಳ ನೋಟಗಳನ್ನು ಓದುಗ ಹಾಗೂ ನೋಡುಗರಲ್ಲಿ ಬಿತ್ತುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಅವರು ಹೇಳಿದರು.

ಕುವೆಂಪು ದೃಷ್ಟಿಯಲ್ಲಿ ಪೂರ್ಣದೃಷ್ಟಿ ಚಿಂತನೆ ಎಂದರೆ ಸಮಗ್ರವಾದ ಒಳನೋಟವನ್ನು ಹೊಂದಿರುವಂತಹದ್ದು. ಜ್ಞಾನವು ಯಾವುದೆ ಜಾತಿ, ಧರ್ಮ, ವರ್ಗ ಹಾಗೂ ಭಾಷೆಗೆ ಸೀಮಿತವಾದುದ್ದಲ್ಲ. ಜ್ಞಾನ-ಬುದ್ಧಿಯಲ್ಲಿ ಸಂಕುಚಿತತೆಗೆ ಅವಕಾಶವಿಲ್ಲದೆ ಪಕ್ವತೆಯನ್ನು ಹೊಂದಿರುವಂತಹದ್ದೆಂದು ತಮ್ಮ ನಾಟಕಗಳಲ್ಲಿ ನಿರೂಪಿಸಿದ್ದಾರೆ ಎಂದು ಅವರು ಹೇಳಿದರು.

ಹಿರಿಯ ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ ಮಾತನಾಡಿ, ರಾಷ್ಟ್ರಕವಿ ಕುವೆಂಪು ವೈಚಾರಿಕ ಚಿಂತನೆಗಳನ್ನು ಕೇವಲ ಬರೆಯಲಿಲ್ಲ; ಹಾಗೆ ಬದುಕಿದವರು. ತಮ್ಮ ಮಗ ಪೂರ್ಣಚಂದ್ರ ತೇಜಸ್ವಿಗೆ ಅಂತರ್‌ಜಾತಿ ಮದುವೆಗೆ ಅವಕಾಶ ಕಲ್ಪಿಸುವ ಮೂಲಕ ಮಂತ್ರಮಾಂಗಲ್ಯ ಎಂಬ ಜೀವಪರವಾದ ಪದ್ಧತಿಯನ್ನು ಜಾರಿಗೆ ತಂದರು ಎಂದು ತಿಳಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯ ಡಾ.ಎನ್.ದೇವರಾಜು ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಯುವಜನತೆಯಲ್ಲಿ ವೈಚಾರಿಕ ಚಿಂತನೆಯನ್ನು ಮೂಡಿಸುವಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೌಂಟ್ ಸೇಂಟ್ ಜೋಸೆಫ್ ಕಾಲೇಜಿನ ರೆಕ್ಟರ್ ಅಂತೋನಿ ಜೋಸೆಫ್, ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ, ಪ್ರಾಂಶುಪಾಲ ಫ್ರಾನ್ಸಿನ್ ಡಿ ಅಲ್ಮೇಡಾ, ಪ್ರಾಧ್ಯಾಪಕ ರವಿಕುಮಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ್ ಕು.ಮಿರ್ಜಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News