ದಿಲ್ಲಿ ದರ್ಬಾರ್

Update: 2019-02-09 18:58 GMT

ಕೆಸಿಆರ್ ಮೌನ

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕರ್ನಾಟಕದ ಎಚ್. ಡಿ. ಕುಮಾರಸ್ವಾಮಿ, ಒಡಿಶಾದ ನಿತೀಶ್ ಪಟ್ನಾಯಕ್ ಸೇರಿದಂತೆ ಹಲವು ಮಂದಿ ಪ್ರಾದೇಶಿಕ ಪಕ್ಷಗಳ ಮುಖಂಡರು ಹಾಗೂ ಮುಖ್ಯಮಂತ್ರಿಗಳು, ಕೇಂದ್ರ ಸರಕಾರವು ಸಿಬಿಐಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಆಪಾದಿಸಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ನಡೆಸಿದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾಕತಾಳೀಯ ಎಂದರೆ ಕೆಸಿಆರ್, ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸೇತರ ಹಾಗೂ ಬಿಜೆಪಿಯೇತರ ಪಕ್ಷಗಳ ಸಂಭಾವ್ಯ ಒಕ್ಕೂಟ ರಂಗದ ಸಾರಥ್ಯಕ್ಕೆ ಮುಂಚೂಣಿಯಲ್ಲಿರುವವರು. ಮಮತಾ ಧರಣಿಯ ವೇಳೆ ಮೌನವಾಗಿದ್ದ ಕೆಸಿಆರ್ ಹಾಗೂ ಆಂಧ್ರದ ಟಿಎಸ್‌ಆರ್ ಕಾಂಗ್ರೆಸ್ ನಾಯಕ ಜಗನ್ಮೋಹನ ರೆಡ್ಡಿ ಅವರತ್ತ ದಿಲ್ಲಿಯ ಕೆಲ ಬಿಜೆಪಿ ಮುಖಂಡರು ಕಣ್ಣಿಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ. ಕೆಸಿಆರ್ ಚಾಣಾಕ್ಷ ರಾಜಕಾರಣಿ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತದ ಕೊರತೆ ಎದುರಾದರೆ, ತಮ್ಮ ಪಕ್ಷ ಅದನ್ನು ಬೆಂಬಲಿಸಬೇಕಾಗಬಹುದು ಎನ್ನುವ ಸತ್ಯ ಅವರಿಗೆ ತಿಳಿದಿದೆ. ಈಗಾಗಲೇ ಅವರು ನಮ್ಮ ಬುಟ್ಟಿಯಲ್ಲಿದ್ದಾರೆ ಎಂದು ಪ್ರಮುಖ ಬಿಜೆಪಿ ಮುಖಂಡರೊಬ್ಬರು ಪತ್ರಕರ್ತರ ಜತೆ ಅನೌಪಚಾರಿಕ ಸಂವಾದದಲ್ಲಿ ಹೇಳಿದ್ದಾರೆ. ಆದರೆ ಅವರು ರೆಡ್ಡಿ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತಿಲ್ಲ. ಏಕೆಂದರೆ, ರೆಡ್ಡಿ ಆಂಧ್ರದಲ್ಲಿ ಗೆಲ್ಲುವುದಕ್ಕಿಂತ ಹೆಚ್ಚಿನ ಸ್ಥಾನವನ್ನು ತೆಲಂಗಾಣದಲ್ಲಿ ಕೆಸಿಆರ್ ಗೆಲ್ಲುತ್ತಾರೆ ಎಂಬ ಕಾರಣದಿಂದ ಕೆಸಿಆರ್ ಸೂಕ್ತ ಆಯ್ಕೆ ಎಂಬ ಅಭಿಪ್ರಾಯ ಅವರದ್ದು. ಆದರೆ ಮಮತಾ ಧರಣಿ ಸಂದರ್ಭದಲ್ಲಿ ಮೌನವಾಗಿ ಉಳಿಯುವ ಮೂಲಕ ಬಿಜೆಪಿಯೇತರ ರಂಗದ ಜತೆ ಗುರುತಿಸಿಕೊಳ್ಳುವ ಬದ್ಧತೆ ಬಗೆಗೆ ಕೆಸಿಆರ್ ವಿರೋಧ ಪಕ್ಷಗಳ ಮುಖಂಡರಲ್ಲಿ ಸಂಶಯದ ಬೀಜವನ್ನಂತೂ ಬಿತ್ತಿದ್ದಾರೆ.

ಅಧೀರ್ ಕಠಿಣ ನಿಲುವು

ಕಾಂಗ್ರೆಸ್ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸನ್ನು ಬೆಂಬಲಿಸುತ್ತದೆ ಎಂದು ಹೇಳುತ್ತಿರುವ ಮಧ್ಯೆಯೇ ಪಕ್ಷದ ಸಂಸದ ಅಧೀರ್ ರಂಜನ್ ಚೌಧರಿ, ‘‘ಕೋಲ್ಕತ್ತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಗುಲಾಮ, ಅವರ ನಿರ್ದೇಶನದಂತೆ ಕೆಲಸ ಮಾಡುವ ವ್ಯಕ್ತಿ’’ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇವರು ಬೆಹ್ರಾಂಪುರ ಕ್ಷೇತ್ರದ ಸಂಸದ. ‘‘ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ’’ ಎಂದು ಹೇಳುವ ಅವರು, ‘‘ಪಶ್ಚಿಮ ಬಂಗಾಳ ಸರಕಾರ ಚಿಟ್ ಫಂಡ್ ಹಗರಣದಲ್ಲಿ ಶಾಮೀಲಾಗಿದೆ’’ ಎಂದು ದೂರಿದ್ದಾರೆ. ಇದನ್ನು ಕೇಂದ್ರ ನಾಯಕತ್ವಕ್ಕೆ ಇರುವ ವಿರೋಧ ಎಂದು ದಿಲ್ಲಿ ವರದಿಗಾರರು ವಿಶ್ಲೇಷಿಸುತ್ತಿದ್ದಾರೆ. ಚೌಧರಿ ಅವರನ್ನು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಹುದ್ದೆಯಿಂದ ಕಿತ್ತು ಹಾಕಿದ ಬಳಿಕ ಅವರನ್ನು ಮೂಲೆಗುಂಪು ಮಾಡಿರುವುದು ಸ್ಪಷ್ಟ. ಇತ್ತೀಚಿನ ದಿನಗಳಲ್ಲಿ ಸ್ವಪಕ್ಷೀಯರೇ ಇವರ ವಿರುದ್ಧ ಭಿನ್ನಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇವರು ಬಿಜೆಪಿ ಸೇರುವ ಹಾದಿಯಲ್ಲಿದ್ದಾರೆ ಎಂಬ ಮಾತುಗಳು ರಾಜಧಾನಿಯಲ್ಲಿ ಕೇಳಿಬರುತ್ತಿವೆ. ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಲಾಭ ಪಡೆಯುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿದ್ದು, ಅಧೀರ್ ‘ಚಹಾ ಎಲೆ’ಗಳ ಅಲೆಯನ್ನು ಓದಿದ್ದಾರೆ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್‌ನಿಂದ ಸಿಡಿಯುವ ಸಾಧ್ಯತೆ ಬಗ್ಗೆ ಜನ ಅವರನ್ನು ಪ್ರಶ್ನಿಸಿದಾಗ, ಮಮತಾ ವಿಚಾರದಲ್ಲಿ ಸುಮ್ಮನಿರುವಂತೆ ಪಕ್ಷದಿಂದ ತಮಗೆ ಯಾವ ಸೂಚನೆಯೂ ಬಂದಿಲ್ಲ. ಆದ್ದರಿಂದ ಮನಸ್ಸಿಗೆ ಬಂದದ್ದನ್ನು ಹೇಳುತ್ತಿದ್ದೇನೆ ಎಂದು ಉತ್ತರಿಸಿದರು. ಆದರೆ ಅವರ ವಿವರಣೆ ಹಲವು ಮಂದಿಗೆ ಸಮಾಧಾನ ತಂದಿಲ್ಲ. ಅವರು ಬಿಜೆಪಿ ಸೇರುವ ಸಾಧ್ಯತೆಯನ್ನು ನಿರಾಕರಿಸಿದ್ದಾರೆ. ಆದರೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.

ರಾಮ್‌ದೇವ್ ಪ್ರಭಾವ ಇಳಿಕೆ

‘‘ಯೋಗ ಗುರುವನ್ನು ನಂಬಿ’’; ಬಹುಶಃ ಬಾಬಾ ರಾಮ್‌ದೇವ್ ಈ ರೀತಿ ವಿವರಿಸಬೇಕಾದ ಸ್ಥಿತಿಯಲ್ಲಿದ್ದಾರೆ. ಕುಂಭ ಮೇಳ ಸಂದರ್ಭದಲ್ಲಿ ಹಲವು ಮಂದಿ ಶ್ರೀಗಳು ಮತ್ತು ಸಾಧುಗಳು ಪ್ರಯಾಗ್‌ರಾಜ್‌ನಲ್ಲಿ ಪವಿತ್ರಸ್ನಾನ ಮಾಡುತ್ತಿದ್ದರೆ, ಬಾಬಾ ಮಾತ್ರ ವಿವಿಧ ಅಖಾಡಾಗಳಿಂದ ಚಿಲ್ಲಂ (ಚುಟ್ಟಾ ಸೇದುವ ಪೈಪ್) ಸಂಗ್ರಹಿಸುತ್ತಿದ್ದರು. ಹಲವು ಮಂದಿ ಸಾಧುಗಳಿಗೆ ಧೂಮಪಾನ ತ್ಯಜಿಸುವಂತೆಯೂ ಅವರು ಮನವಿ ಮಾಡಿಕೊಳ್ಳುತ್ತಿದ್ದರು. ರಾಮ ಅಥವಾ ಕೃಷ್ಣ ಇಂಥ ಹವ್ಯಾಸಗಳನ್ನು ರೂಢಿಸಿಕೊಂಡಿರಲಿಲ್ಲ. ಹಾಗಿದ್ದ ಮೇಲೆ ಸಾಧುಗಳು ಏಕೆ ಇದನ್ನು ಮಾಡಬೇಕು ಎಂದು ಪ್ರಶ್ನಿಸುವ ಮೂಲಕ ಈ ಆರೋಗ್ಯ ಗುರು ಮಾರ್ಗದರ್ಶನ ನೀಡುವ ಪ್ರಯತ್ನ ಮಾಡುತ್ತಿದ್ದರು. ಕೆಲ ಸಾಧುಗಳು ಹಾಗೂ ಅವರ ಭಕ್ತರು, ತಮ್ಮ ವಿಶ್ವಾಸಾರ್ಹ ಧೂಮಪಾನ ಮಾಡುವ ಸಾಧನದಿಂದ ಬೇರ್ಪಡುವಂತೆ ಮಾಡುವ ಸಲಹೆ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವುದು ಕಂಡುಬರುತ್ತಿತ್ತು. ಇದಾದ ಬಳಿಕವೂ ಹಲವು ಮಂದಿ ಧೂಮಪಾನ ಮಾಡಿ ಸಂಭ್ರಮಿಸುತ್ತಿರುವುದು ಕಂಡುಬಂತು. ಇದೇ ವೇಳೆ ರಾಮ್‌ದೇವ್ ಅವರ ಪ್ರಭಾವ ಇಳಿಯುತ್ತಿರುವುದು ಸ್ಪಷ್ಟವಾಗಿ ಗೋಚರವಾಯಿತು. ಮಧ್ಯಪ್ರದೇಶದಲ್ಲಿ ಅವರ ನಿಕಟವರ್ತಿ ಹಾಗೂ ಪತಂಜಲಿ ಆಯುರ್ವೇದದ ಸಹ ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಅವರಿಗೆ ರೇವಾ ಅವಧೇಶ್ ಪ್ರತಾಪ್ ಸಿಂಗ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿರುವುದರಿಂದ ಇದು ಸ್ಪಷ್ಟವಾಗುತ್ತದೆ. ಅವರು ಭೋಪಾಲ್‌ನಲ್ಲಿ ವಾಸ್ತವ್ಯವಿದ್ದಾಗ, ಅವರ ಭೇಟಿಗೆ ಬಹುತೇಕ ಯಾವ ಸಂದರ್ಶಕರೂ ಇರಲಿಲ್ಲ. ಈ ಮೊದಲು ಬಾಬಾ ಅಥವಾ ಬಾಲಕೃಷ್ಣ ರಾಜ್ಯಕ್ಕೆ ಭೇಟಿ ನೀಡಿದಾಗಲೆಲ್ಲ, ರಾಜಕಾರಣಿಗಳು, ಸಚಿವರು, ಅಧಿಕಾರಿಗಳು ಸುತ್ತುವರಿಯುತ್ತಿದ್ದರು. ಈ ಬಾರಿ ಕಮಲ್‌ನಾಥ್ ಸರಕಾರದ ಯಾವ ಸಚಿವರು ಕೂಡಾ ಇವರನ್ನು ಸ್ವಾಗತಿಸಲು ಇರಲಿಲ್ಲ. ಇದರಿಂದ ರಾಮ್‌ದೇವ್ ಅವರನ್ನು ಇಷ್ಟಪಡುವವರು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಾತ್ರ ಎನ್ನುವುದು ಸ್ಪಷ್ಟವಾಗುತ್ತದೆ.

ಚೌಹಾಣ್ ಆಂತರಿಕ ಸಮಸ್ಯೆ

ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಇದೀಗ ಬಿಜೆಪಿಯಲ್ಲಿ ಆಂತರಿಕವಾಗಿಯೇ ಸಮಸ್ಯೆ ಎದುರಾಗಿದೆ. ಬಿಜೆಪಿಯ ಹಿರಿಯ ಪದಾಧಿಕಾರಿ ರಾಮ್‌ಲಾಲ್ ಅವರ ಸಮ್ಮುಖದಲ್ಲೇ ಮಾಜಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ವಿರುದ್ಧ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಗೋಪಾಲ ಭಾರ್ಗವ ಅವರು ಪರೋಕ್ಷ ವಾಗ್ದಾಳಿ ನಡೆಸಿದರು. 2019ರ ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸುವ ಸಲುವಾಗಿ ಭೋಪಾಲ್‌ನಲ್ಲಿ ಕರೆದಿದ್ದ ಸಭೆಯಲ್ಲಿ, ವಿಧಾನಸಭಾ ಚುನಾವಣೆಯಲ್ಲಿ ಆದ ಸೋಲಿನ ಬಳಿಕ ಪಕ್ಷದ ಕಾರ್ಯಕರ್ತರು ನೈತಿಕ ಸ್ಥೈರ್ಯ ಕಳೆದುಕೊಂಡಿದ್ದಾರೆ ಎಂದು ಭಾರ್ಗವ ಹೇಳಿದರು. ಆದರೆ ಮಧ್ಯಪ್ರವೇಶಿಸಿದ ಚೌಹಾಣ್, ಪಕ್ಷದ ಕಾರ್ಯಕರ್ತರು ಭ್ರಮನಿರಸನಗೊಂಡಿಲ್ಲ ಎಂದು ಸಮರ್ಥಿಸಿಕೊಂಡರು. ಇದಕ್ಕೆ ಬದಲಾಗಿ ಬಿಜೆಪಿಯ ಸಮಾಧಾನಕರ ಸಾಧನೆಯಿಂದ ಅವರು ಖುಷಿಯಾಗಿದ್ದಾರೆ ಎಂದು ತಿರುಗೇಟು ನೀಡಿದರು. ಆದರೆ ಇದನ್ನು ಒಪ್ಪದ ಭಾರ್ಗವ, ‘‘ಇದು ಅವರವರ ಭಾವನೆಗೆ ಬಿಟ್ಟದ್ದು. ಆದರೆ ಪಕ್ಷ ಮಾತ್ರ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳುವಂತಾಗಿದೆ’’ ಎಂದು ಮನದಟ್ಟು ಮಾಡಿದರು. ಆದರೆ ಈ ಬಗ್ಗೆ ಚೌಹಾಣ್‌ಗೆ ತೀರಾ ಕೋಪ ಬಂದಿತ್ತು. ಅಷ್ಟಾಗಿಯೂ ತಾಳ್ಮೆ ತಪ್ಪಲಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಹೇಳುತ್ತಾರೆ. ಪಕ್ಷದೊಳಗೆಯೇ ತಮಗೆ ವಿರೋಧ ಇದೆ. ಈ ಕಾರಣದಿಂದಲೇ ಪಕ್ಷದ ನಾಯಕತ್ವ ಅವರಿಗೆ ರಾಷ್ಟ್ರಪ್ರವಾಸ ಕೈಗೊಂಡು ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಂಥ ರಾಜ್ಯಗಳಲ್ಲಿ ಪ್ರಚಾರ ಮಾಡುವಂತೆ ಸೂಚಿಸಿದೆ ಎನ್ನುವುದು ಮನವರಿಕೆಯಾದಂತಿದೆ.

ಸಿನ್ಹಾ ಬ್ಯುಸಿ

ಕೇಂದ್ರದ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ ಅವರು ಅಮಿತ್ ಶಾ- ಮೋದಿ ಪ್ರಾಬಲ್ಯದ ಬಿಜೆಪಿಯನ್ನು ಅನಿವಾರ್ಯವಾಗಿ ತೊರೆಯಬೇಕಾಗಿ ಬಂದ ಬಳಿಕ, ಆತ್ಮಸಾಕ್ಷಿ ಉಳಿಸಿಕೊಂಡ ವ್ಯಕ್ತಿಯಾದಂತೆ ಕಾಣುತ್ತಿದೆ. ಸಿನ್ಹಾ ಸದ್ಯಕ್ಕೆ ವಿರೋಧಿ ಪಾಳಯದಲ್ಲಿದ್ದಾರೆ. ಆದರೆ ತಾವು ಮತ್ತೆ ಚುನಾವಣಾ ರಾಜಕೀಯಕ್ಕೆ ಧುಮುಕುವುದಿಲ್ಲ ಎಂದು ಈ ವಾರ ಸ್ಪಷ್ಟಪಡಿಸಿದ್ದಾರೆ. ಆದರೆ ರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತನಾಡುವುದು ಮುಂದುವರಿಸುವುದಾಗಿ ಹೇಳಿದ್ದಾರೆ. ಈ ಮಧ್ಯೆ ಆಮ್ ಆದ್ಮಿ ಪಕ್ಷ ಇವರಿಗೆ ಗಾಳ ಹಾಕಿದ್ದು, ಪಕ್ಷದ ಟಿಕೆಟ್‌ನಲ್ಲಿ ಅವರು ಇಚ್ಛಿಸಿದ ಕೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಸಿನ್ಹಾಗೆ ಆಸಕ್ತಿ ಇದ್ದಂತಿಲ್ಲ ಹಾಗೂ ಹೊಸ ರಾಜಕೀಯದಿಂದ ಹೊರಗಿದ್ದುಕೊಂಡೇ ಮೋದಿ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸುವುದನ್ನೇ ಅವರು ಆಯ್ದುಕೊಂಡಂತಿದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಸಿನ್ಹಾ ಅವರ ಧ್ವನಿ ದೊಡ್ಡ ಹಾಗೂ ಸ್ಪಷ್ಟವಾಗುತ್ತಿರುವಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News