ನಾಲ್ವರು ಕಾಂಗ್ರೆಸ್ ಶಾಸಕರ ಅನರ್ಹತೆಗೆ ಸಿದ್ದರಾಮಯ್ಯ ಶಿಫಾರಸ್ಸು

Update: 2019-02-11 14:01 GMT

ಬೆಂಗಳೂರು, ಫೆ.11: ಪಕ್ಷ ವಿರೋಧಿ ಚಟುವಟಿಕೆ ಹಾಗೂ ಪಕ್ಷದ ವಿಪ್ ಉಲ್ಲಂಘನೆ ಹಿನ್ನೆಲೆಯಲ್ಲಿ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ ಹಾಗೂ ಡಾ.ಉಮೇಶ್ ಜಾಧವ್‌ರನ್ನು ಅನರ್ಹಗೊಳಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್‌ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶಿಫಾರಸ್ಸು ಮಾಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸ್ಪೀಕರ್ ರಮೇಶ್‌ ಕುಮಾರ್‌ರನ್ನು ಭೇಟಿ ಮಾಡಿದ ಸಿದ್ದರಾಮಯ್ಯ, ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗುವಂತೆ ನೀಡಿದ್ದ ನೋಟಿಸ್ ಉಲ್ಲಂಘನೆ, ನಾವು ನೀಡಿರುವ ನೋಟಿಸ್‌ಗೆ ಸಮರ್ಪಕ ಉತ್ತರ ನೀಡದೆ ಇರುವುದು ಹಾಗೂ ಬಜೆಟ್ ಅಧಿವೇಶನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ನೀಡಿರುವ ವಿಪ್ ಅನ್ನು ಉಲ್ಲಂಘನೆ ಮಾಡಿರುವುದರಿಂದ ನಾಲ್ವರು ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಅತೃಪ್ತ ಶಾಸಕರನ್ನು ಅನರ್ಹಗೊಳಿಸುವ ಸಂಬಂಧ ಸಿದ್ದರಾಮಯ್ಯ, ವಕೀಲ ಶಶಿಕಿರಣ ಮತ್ತು ತಂಡದಿಂದ ಕಾನೂನು ಸಲಹೆ ಪಡೆದ ಬಳಿಕ, ಪತ್ರಿಕಾ ವರದಿಗಳು, ದೃಶ್ಯ ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆಗಳು, ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವಂತೆ ನೀಡಿರುವ ನೋಟಿಸ್‌ಗಳ ಪ್ರತಿಗಳು ಒಳಗೊಂಡ ಸುಮಾರು 82 ಪುಟುಗಳ ದೂರನ್ನು ಸ್ಪೀಕರ್‌ಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News