ನನಗ್ಯಾಕೆ ಈ ಶಿಕ್ಷೆ.. ಇದು ನ್ಯಾಯವಾ: ಸ್ಪೀಕರ್ ರಮೇಶಕುಮಾರ್

Update: 2019-02-11 06:58 GMT

   ಬೆಂಗಳೂರು, ಫೆ.11: ಮುಖ್ಯಮಂತ್ರಿ ಶುಕ್ರವಾರ ನನಗೆ ಕಳುಹಿಸಿದ ಪತ್ರದ ಜೊತೆಗೆ ಆಡಿಯೋ ಕಳುಹಿಸಿದ್ದರು. ಅದರಲ್ಲಿ ಶಾಸಕನ ಮಗನ ಜೊತೆ ಬಿಎಸ್‌ವೈ ಸಂಭಾಷಣೆ ಆರೋಪ ಮಾಡಿದ್ದರು. ಯಾರ ಧ್ವನಿ ಎಂದು ಸ್ಪಷ್ಟವಾಗಿ ಗೊತ್ತಿಲ್ಲ ಎಂದಿದ್ದೇನೆ. ಆದರೆ ಇದರಲ್ಲಿ ದುಃಖ ತರುವ ಸಂಗತಿ ಎಂದರೆ ಆಡಿಯೋದಲ್ಲಿ ಅನಾವಶ್ಯಕವಾಗಿ ನನ್ನ ಹೆಸರನ್ನು ಹಾಗೂ ಪ್ರಧಾನಿ ಹೆಸರನ್ನು ಪ್ರಸ್ತಾವಿಸಲಾಗಿದೆ. ನನಗೆ 50 ಕೋಟಿ ರೂ.ನೀಡಲಾಗಿದೆ ಎಂದು ಹೇಳಿದ್ದಾರೆ. ಈ ಮಾತು ಕೇಳಿ ನನಗೆ ಬೇಸರವಾಯಿತು. ಎರಡು ದಿನ ನಿದ್ದೆಯಿಲ್ಲದ ರಾತ್ರಿ ಕಳೆದಿದ್ದೇನೆ. ನಾನು ಶಾಸನ ಸಭೆಗೆ ಗೌರವಪೂರ್ವಕವಾಗಿ ಆಯ್ಕೆಯಾಗಿದ್ದೇನೆ. ಈವರೆಗೆ ನನ್ನ ಮೇಲೆ ಇಂಥಾ ಆಪಾದನೆ ಬರುವಂತೆ ನಡೆದುಕೊಂಡಿಲ್ಲ. ಆದರೆ, ನನ್ನನ್ನು ದುಡ್ಡು ತೆಗೆದುಕೊಂಡಿರುವಂತೆ ಆಡಿಯೋದಲ್ಲಿ ಬಿಂಬಿಸಿರುವುದು ನನಗೆ ನೋವು ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನನಗೇಕೆ ಈ ಶಿಕ್ಷೆ. ಇದು ನ್ಯಾಯವಾ. ನನ್ನ ಚಾರಿತ್ರವಧೆ ಮಾಡಿದರೆ ಸಾವಿಗಿಂತಲೂ ಹೆಚ್ಚು ಕ್ರೂರ. ಈ ರೀತಿ ಆಪಾದನೆ ಬರುವಂತೆ ನಾನು ಎಂದೂ ನಡೆದುಕೊಂಡಿಲ್ಲ. ನನಗೆ ಹಣ ನೀಡಿದ್ದಾಗಿ ಅವರು ಆಡಿಯೋದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅವರು ನನಗೆ ನೇರವಾಗಿ ಭೇಟಿಯಾಗಿದ್ರಾ, ಅಥವಾ ನನ್ನ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರಾ? ಯಾರು, ಎಲ್ಲಿ ಭೇಟಿಯಾದರು. ಹೇಗೆ ಕೊಟ್ಟರು, ಅದು ಸಣ್ಣ ಮೊತ್ತವೇನಲ್ಲ. ನಾನು ಈವರೆಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಸರಕಾರಿ ಮನೆಯಲ್ಲಿಲ್ಲ. ಅಕ್ಕ-ಪಕ್ಕದವರಿಗೆ ತೊಂದರೆಯಾಗಬಾರದೆಂದು ಬಾಡಿಗೆ ಮನೆಯ ಎದುರು ಬೋರ್ಡನ್ನು ಹಾಕಿಲ್ಲ. ಅಷ್ಟೊಂದು ಪ್ರಮಾಣದ ಹಣವನ್ನು ನಾನೆಲ್ಲಿ ಇಟ್ಟುಕೊಳ್ಳಲಿ ಎಂದು ಸ್ಪೀಕರ್ ರಮೇಶ್ ಕುಮಾರ್ ಭಾವುಕರಾಗಿ ಹೇಳಿದ್ದಾರೆ.

  ನಾನು ನನ್ನ ತಾಯಿಗೆ 8ನೇ ಹಾಗೂ ಕೊನೆಯ ಮಗ. ನೆಂಟರು ಬಂದರೆ ಅವರ ಕಾಲಲ್ಲಿರೋ ಧೂಳು ನಮ್ಮ ಮನೆಗೆ ತಾಗಬಾರದು ಎಂದು ನನ್ನ ತಾಯಿ ಹೇಳುತ್ತಿದ್ದರು ಎಂದು ತಾಯಿಯ ಕಿವಿಮಾತನ್ನು ರಮೇಶ್ ಕುಮಾರ್ ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News