ಎಸ್‌ಐಟಿ ತನಿಖೆಗೆ ಸ್ಪೀಕರ್ ರಮೇಶ್‌ ಕುಮಾರ್ ಸಲಹೆ: ಬಿಜೆಪಿ ಸದಸ್ಯರ ಆಕ್ಷೇಪ

Update: 2019-02-11 12:14 GMT

ಬೆಂಗಳೂರು, ಫೆ. 11: ‘ಆಪರೇಷನ್ ಕಮಲ’ ಆಡಿಯೋ ಪ್ರಕರಣ ವಿಧಾನ ಮಂಡಲ ಉಭಯ ಸದನಗಳಲ್ಲಿ ಪ್ರತಿಧ್ವನಿಸಿದ್ದು, ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಆರೋಪ-ಪ್ರತ್ಯಾರೋಪ, ಗದ್ದಲ-ಕೋಲಾಹಲಕ್ಕೆ ಇಡೀ ದಿನದ ಕಲಾಪ ಬಲಿಯಾಯಿತು.

ಸೋಮವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ವಯಂ ಪ್ರೇರಿತರಾಗಿ ಆಡಿಯೋ ವಿಚಾರ ಪ್ರಸ್ತಾಪಿಸಿದ ಸ್ಪೀಕರ್ ರಮೇಶ್‌ ಕುಮಾರ್, ಆಡಿಯೋದಲ್ಲಿನ ಸಂಭಾಷಣೆಯಿಂದ ಸ್ಪೀಕರ್ ಮತ್ತು ಸದನದ ಹಕ್ಕುಚ್ಯುತಿಯಾಗುತ್ತದೆ ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಆ ಬಳಿಕ ರೂಲಿಂಗ್ ನೀಡಿದ ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್, ಆಡಿಯೋ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ ರಚನೆ ಮಾಡಿ, 15 ದಿನಗಳ ಒಳಗಾಗಿ ತನಿಖಾ ವರದಿ ಸಲ್ಲಿಸಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸೂಚಿಸಿದರು. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದರು.

ಎಸ್‌ಐಟಿ ತನಿಖೆಗೆ ಬಿಜೆಪಿ ಆಕ್ಷೇಪ: ಆಡಿಯೋ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆಗೆ ಬಿಜೆಪಿ ಆಕ್ಷೇಪಿಸಿದ್ದು, ರಾಜ್ಯ ಸರಕಾರದ ವತಿಯಿಂದ ನಡೆಸುವ ತನಿಖೆ ಮೇಲೆ ನಮಗೆ ವಿಶ್ವಾಸವಿಲ್ಲ. ಈ ಕುರಿತು ಸ್ಪೀಕರ್ ರಮೇಶ್‌ ಕುಮಾರ್ ಅವರ ನೇತೃತ್ವದಲ್ಲೇ ಪಕ್ಷಾತೀತ ಸಮಿತಿಯೊಂದನ್ನು ರಚಿಸಿ, ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ಸದಸ್ಯರಾದ ಮಾಧುಸ್ವಾಮಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಆಗ್ರಹಿಸಿದರು.

ಬಿಜೆಪಿ ಸದಸ್ಯರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್‌ ಕುಮಾರ್, ಕ್ರಿಮಿನಲ್ ಪ್ರಕರಣಗಳಲ್ಲಿ ಎಫ್‌ಐಆರ್, ಚಾರ್ಜ್‌ಶೀಟ್ ದಾಖಲಿಸಬೇಕಾಗುತ್ತದೆ. ಹೀಗಾಗಿ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆ ನಡೆಸಲು ಅವಕಾಶವಿಲ್ಲ ಎಂದು ಬಿಜೆಪಿ ಸದಸ್ಯರ ಮನವಿಯನ್ನು ತಿರಸ್ಕರಿಸಿದರು.

ಗದ್ಗದಿತರಾದ ಸ್ಪೀಕರ್: ಆರಂಭಕ್ಕೆ ಆಡಿಯೋ ವಿಚಾರ ಪ್ರಸ್ತಾಪಿಸಿದ ಸ್ಪೀಕರ್ ರಮೇಶ್‌ ಕುಮಾರ್, ಫೆ.8ರ ಶುಕ್ರವಾರ ಮಧ್ಯಾಹ್ನ 12:10ರ ಸುಮಾರಿಗೆ ಸಿಎಂ ಕುಮಾರಸ್ವಾಮಿ ನನಗೆ ಪತ್ರ ಕಳುಹಿಸಿದ್ದು, ಅದರ ಜತೆ ಧ್ವನಿಸುರುಳಿಯೊಂದನ್ನು ಕಳುಹಿಸಿದ್ದಾರೆ.

ಅವರು ಮಾಧ್ಯಮಗಳಿಗೂ ಆ ಧ್ವನಿ ಸುರುಳಿ ತಲುಪಿಸಿದ್ದು, ಆ ಧ್ವನಿ ಸುರುಳಿಯಲ್ಲಿ ನನ್ನ ಹೆಸರು ಪ್ರಸ್ತಾಪ ಆಗಿರುವ ಬಗ್ಗೆಯೂ ಹೇಳಿದ್ದು, ಇದೆ ವೇಳೆ ಅವರು ನನ್ನ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ಇದಕ್ಕೆ ಕೃತಜ್ಞತೆ ಸಲ್ಲಿಸುವೆ. ಮುಂದೆಯೂ ಇದೇ ರೀತಿ ಸದನದಲ್ಲಿ ಗೌರವಾನ್ವಿತವಾಗಿ ನಡೆದುಕೊಳ್ಳುತ್ತೇನೆ ಎಂದರು.

ಧ್ವನಿ ಸುರುಳಿಯಲ್ಲಿನ ಸಂಭಾಷಣೆಯನ್ನು ಆಲಿಸಿದ್ದೇನೆ. ಈ ಶಾಸನ ಸಭೆಗೆ ಅಭಿಮಾನವಿಟ್ಟು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು, ಅದಕ್ಕೆ ಅಪಚಾರ ಆಗಬಾರದು. ಈ ಸ್ಥಾನಕ್ಕೆ ನನ್ನಿಂದ ಅವಮಾನವಾದರೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರಮೇಶ್‌ ಕುಮಾರ್ ಭಾವುಕರಾದರು.

‘ಶಾಸನ ಸಭೆಯೆ ಕಷ್ಟವಾದರೆ ಅದು ಪ್ರಜಾಪ್ರಭುತ್ವದ ಅಂತ್ಯ’ ಎಂಬ ಸಂಸತ್ ಸದಸ್ಯರ ಮಾತನ್ನು ಉಲ್ಲೇಖಿಸಿದ ಸ್ಪೀಕರ್, ಶುಕ್ರವಾರ ಬಜೆಟ್ ಮಂಡನೆ ಇದುದ್ದರಿಂದ ಈ ವಿಷಯ ಪ್ರಸ್ತಾಪಿಸಲು ಸಾಧ್ಯವಾಗಲಿಲ್ಲ. ಕಳೆದ ಎರಡು ದಿನಗಳಿಂದ ನಾನು ಯಾವ ಮನಸ್ಥಿತಿಯಲ್ಲಿ ರಾತ್ರಿ ಕಳೆದಿದ್ದೇನೆಂಬುದನ್ನು ಊಹಿಸಿಕೊಳ್ಳಿ ಎಂದು ವಿಷಾದ ವ್ಯಕ್ತಪಡಿಸಿದರು.

ಸಂಭಾಷಣೆ ನಡೆಸಿದ ವ್ಯಕ್ತಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಹೀಗಾಗಿ ಸತ್ಯ ಸಾಬೀತಾಗಲೇಬೇಕು. ಈ ಧ್ವನಿಸುರುಳಿಯಲ್ಲಿ ಮಾತನಾಡಿರುವುದು ಯಾರು ಎಂಬುದು ಗೊತ್ತಾಗಬೇಕು. ಎಲ್ಲಿ ಮತ್ತು ಯಾವಾಗ ನನಗೆ ಹಣ ಕೊಟ್ಟಿದ್ದಾರೆ. ಯಾವ ನೋಟುಗಳನ್ನು ಕೊಟ್ಟಿದ್ದಾರೆ ಎಂಬುದು ಗೊತ್ತಾಗಬೇಕಿದೆ ಎಂದರು.

ದೊಮ್ಮಲೂರಿನ ಅಮರಜ್ಯೋತಿ ಲೇಔಟ್‌ನ ಸಣ್ಣ ಬಾಡಿಗೆ ಮನೆಯಲ್ಲಿದ್ದೇನೆ. ಸರಕಾರಿ ಮನೆ ತೆಗೆದುಕೊಂಡಿಲ್ಲ. ಹಣ ಇಡಲಿಕ್ಕೂ ಜಾಗಬೇಕಲ್ಲ. ಯಾರಾದರೂ ಹೋಗಿ ನೋಡಿಕೊಂಡು ಬರಲಿ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನಾಮಫಲಕ ಹಾಕಿಲ್ಲ. ಈ ರೀತಿ ಗೌರವಯುತವಾಗಿ ಬದುಕುತ್ತಿದ್ದೇನೆ ಎಂದು ಹೇಳಿದರು.

‘ನನಗೆ ನನ್ನ ಸಾವಿನ ಬಗ್ಗೆ ಭಯವಿಲ್ಲ. ಚಾರಿತ್ರ್ಯವಧೆ ಸಾವಿಗಿಂತ ಹೆಚ್ಚಿನ ಕ್ರೌರ್ಯ’ ಎಂಬ ವಾಜಪೇಯಿ ಅವರ ಮಾತನ್ನು ಉಲ್ಲೇಖಿಸಿದ ರಮೇಶ್‌ ಕುಮಾರ್, ವಾಜಪೇಯಿಯವರಿಗೆ ನನ್ನನ್ನು ಹೋಲಿಸಿಕೊಳ್ಳುತ್ತಿಲ್ಲ. ಅವರ ಕಾಲಿನ ಧೂಳಿಗೂ ನಾನು ಸಮವಲ್ಲ. ಆದರೆ, ಅವರು ನಮ್ಮ ಆದರ್ಶಪ್ರಾಯರು ಎಂದರು.

‘ನನ್ನ ತಂದೆ-ತಾಯಿಗೆ ನಾನು ಎಂಟನೆಯವ, ನಾನೇ ಕಡೆಯವನು. ನನ್ನ ತಾಯಿ ಆಗಾಗ ಹೇಳುತ್ತಿದ್ದರು. ನಮಗಿಂತ ಉಳ್ಳವರ ಮನೆಗೆ ಹೋಗಿ ಹಿಂದಿರುಗುವ ವೇಳೆ ನಮ್ಮ ಪಾದವನ್ನು ಅವರ ಹೊಸಲಿಗೆ ಉಜ್ಜಬೇಕು. ಅವರ ಧೂಳನ್ನು ಅಲ್ಲಿಯೇ ಬಿಟ್ಟು ಬರಬೇಕು’ ಎಂದು ತಾಯಿ ಹೇಳುತ್ತಿದ್ದರು. ಅವರೇ ನನ್ನ ಅತ್ಯಂತ ದೊಡ್ಡ ರಾಜಕೀಯ ಗುರು, ಆ ರೀತಿ ನೈತಿಕತೆಯ ಪಾಠ ಕೇಳಿಕೊಂಡು ಬದುಕ್ತಿದ್ದೇನೆ. ನನ್ನ ತಾಯಿಯ ಮಾತುಗಳಂತೆ ನಾನು ಬದುಕಿದ್ದೇನೆ ಎಂದು ಗದ್ಗದಿತರಾದರು.

‘ನಾನು 50 ಕೋಟಿ ರೂ.ಹಣವನ್ನು ಪಡೆದಿದ್ದೇನೆಂಬ ಕಸದ ಬುಟ್ಟಿಯನ್ನು ತಲೆ ಮೇಲೆ ಇಟ್ಟುಕೊಂಡು ಹೊರಗೆ ಹೋಗುವುದಕ್ಕೆ ಆಗುವುದಿಲ್ಲ. ಹಣ ಪಡೆದಿದ್ದೇನೆ ಎಂಬ ಆರೋಪ ಹೊತ್ತ ನಾನು ಮನೆಗೆ ತೆರಳಿ ನನ್ನ ಮುಖವನ್ನು ಹೆಂಡತಿ, ಮಕ್ಕಳಿಗೆ ಹೇಗೆ ತೋರಿಸಲಿ. ನನ್ನ ಮೇಲೆ ಆರೋಪ ಮಾಡಿದ ವ್ಯಕ್ತಿ ಜವಾಬ್ದಾರಿ ಸ್ಥಾನದಲ್ಲಿ ಇರುವವರೇ ಆಗಿದ್ದಾರೆ’

-ಕೆ.ಆರ್.ರಮೇಶ್‌ ಕುಮಾರ್ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News