ಪ್ರಧಾನಿ ನರೇಂದ್ರ ಮೋದಿ ರಾಜಧರ್ಮ ಅನುಸರಿಸುತ್ತಿಲ್ಲ: ಚಂದ್ರ ಬಾಬು ನಾಯ್ಡು

Update: 2019-02-11 18:37 GMT

ಅಮರಾವತಿ, ಫೆ. 11: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನಿರಾಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ‘ರಾಜ ಧರ್ಮ’ ಪಾಲಿಸುತ್ತಿಲ್ಲ ಎಂದಿದ್ದಾರೆ.

2014ರಲ್ಲಿ ಆಂಧ್ರಪ್ರದೇಶದವನ್ನು ವಿಭಜಿಸಿದ ಸಂದರ್ಭ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಂಧ್ರಭವನದಲ್ಲಿ ಒಂದು ದಿನ ಉಪವಾಸ ಮುಷ್ಕರ ನಡೆಸಿದ ಚಂದ್ರಬಾಬು ನಾಯ್ಡು, ರಾಜ್ಯದ ಜನರ ವಿರುದ್ಧ ವೈಯುಕ್ತಿಕ ದಾಳಿ ನಡೆಸಿದರೆ ಪಾಠ ಕಲಿಸಲಾಗುವುದು ಎಂದು ಮೋದಿಗೆ ಎಚ್ಚರಿಸಿದರು. ಗುಜರಾತ್ (2002ರ ಗಲಭೆ ಸಂದರ್ಭ)ನಲ್ಲಿ ‘ರಾಜ ಧರ್ಮ’ ಪಾಲಿಸುತ್ತಿಲ್ಲ ಎಂದು ಅಟಲ್ ಬಿಹಾರಿ ವಾಜಪೇಯಿ (ಮಾಜಿ ಪ್ರಧಾನಿ) ಹೇಳಿದ್ದರು. ಈಗ ಆಂಧ್ರಪ್ರದೇಶದ ವಿಚಾರದಲ್ಲಿ ಕೂಡ ‘‘ರಾಜ ಧರ್ಮ’’ ಅನುಸರಿಸುತ್ತಿಲ್ಲ. ನ್ಯಾಯ ಸಮ್ಮತವಾಗಿ ನಮ್ಮದಾಗಿರುವುದನ್ನು ನಿರಾಕರಿಸಲಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು.

ಕೇಂದ್ರ ಸರಕಾರ ಆಧ್ರಪ್ರದೇಶಕ್ಕೆ ಅನ್ಯಾಯ ಮಾಡಿದೆ. ಅದು ದೇಶದ ಏಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು. ಐದು ಕೋಟಿ ಜನರ ಪರವಾಗಿ ನಾನು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ. ಆಂಧ್ರಪ್ರದೇಶ ಮರು ಸಂಘಟನೆ ಕಾಯ್ದೆಯಯಲ್ಲಿ ನೀವು ನೀಡಿದ ಭರವಸೆಯನ್ನು ನೆನಪು ಮಾಡಲು ನಾನಿಲ್ಲಿ ಬಂದಿರುವುದು ಎಂದು ಚಂದ್ರಬಾಬು ನಾಯ್ಡು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News