ವಿರೋಧ ಪಕ್ಷಗಳ ರ‍್ಯಾಲಿ: ರಾಹುಲ್‌ಗೆ ಆಪ್ ಆಹ್ವಾನ

Update: 2019-02-12 04:48 GMT

ಹೊಸದಿಲ್ಲಿ, ಫೆ. 12: ಕೇಂದ್ರದಲ್ಲಿ ಅಧಿಕಾರರೂಢ ಎನ್‌ಡಿಎ ಮೈತ್ರಿಕೂಟವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು ಪಣತೊಟ್ಟಿರುವ ವಿರೋಧ ಪಕ್ಷಗಳ ಮೈತ್ರಿಕೂಟ ಫೆ. 13ರಂದು ರಾಜಧಾನಿಯಲ್ಲಿ "ತಾನ್‌ಶಾಹಿ ಹಠಾವೊ, ಲೋಕತಂತ್ರ ಬಚಾವೊ" ರ್ಯಾಲಿ ಹಮ್ಮಿಕೊಂಡಿದ್ದು, ಇದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೂ ಆಹ್ವಾನ ನೀಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

"ಶರದ್ ಪವಾರ್, ಶರದ್ ಯಾದವ್, ತೇಜಸ್ವಿ ಯಾದವ್, ಅಖಿಲೇಶ್ ಯಾದವ್, ಮಾಯಾವತಿ, ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟ್ಯಾಲಿನ್, ಚಂದ್ರಬಾಬು ನಾಯ್ಡು ಅವರನ್ನೂ ಆಹ್ವಾನಿಸಲಾಗಿದೆ" ಎಂದು ವಿವರಿಸಿದ್ದಾರೆ. ಮಮತಾ ಬ್ಯಾನರ್ಜಿಯವರ ಕೊಲ್ಕತ್ತಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಹುತೇಕ ಎಲ್ಲ ಮುಖಂಡರು ಈ ರ್ಯಾಲಿಯಲ್ಲೂ ಭಾಗವಹಿಸುವರು ಎಂದು ದೆಹಲಿ ಆಪ್ ಸಂಚಾಲಕ ಗೋಪಾಲ್ ರಾಯ್ ಹೇಳಿದ್ದಾರೆ.

ಚುನಾವಣೆಗೆ ಎರಡು ತಿಂಗಳು ಮಾತ್ರ ಉಳಿದಿರುವ ಹಿನ್ನೆಲೆಯಲ್ಲಿ ಈ ರ್ಯಾಲಿ, ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟದ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಮಹತ್ವದ ಹೆಜ್ಜೆ ಎಂದು ಹೇಳಿದ್ದು, ''ತಾನ್‌ಶಾಹಿ ಹಠಾವೊ, ಲೋಕತಂತ್ರ ಬಚಾವೊ" ರ್ಯಾಲಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಕೂಡಾ ಆಹ್ವಾನಿತರಾಗಿರುತ್ತಾರೆ ಎಂದು ಆಮ್ ಆದ್ಮಿ ಮುಖಂಡ ಸಂಜಯ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News