ಪ್ರಧಾನಿ ಮೋದಿ ಇದ್ದ ವೇದಿಕೆಯಲ್ಲೇ ಸಚಿವನಿಂದ ಸಹೋದ್ಯೋಗಿ ಸಚಿವೆಗೆ ಲೈಂಗಿಕ ಕಿರುಕುಳ

Update: 2019-02-12 14:22 GMT

ಅಗರ್ತಲಾ,ಫೆ.12: ಇಲ್ಲಿ ಸಮಾರಂಭವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉಪಸ್ಥಿತರಿದ್ದ ವೇದಿಕೆಯಲ್ಲಿ ತ್ರಿಪುರಾದ ಆಹಾರ,ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಮನೋಜ ಕಾಂತಿ ದೇಬ್ ಅವರು ತನ್ನ ಸಂಪುಟ ಸಹೋದ್ಯೋಗಿ,ಸಮಾಜ ಕಲ್ಯಾಣ ಮತ್ತು ಸಾಮಾಜಿಕ ಶಿಕ್ಷಣ ಸಚಿವೆ ಸಂತಾನ ಚಕ್ಮಾ ಅವರ ಸೊಂಟವನ್ನು ಅಸಭ್ಯ ರೀತಿಯಲ್ಲಿ ಸ್ಪರ್ಶಿಸಿದ ಮತ್ತು ಸಚಿವೆ ಅವರ ಕೈಯನ್ನು ಸರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಪ್ರತಿಪಕ್ಷಗಳು ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಘಟನೆಯ ಸಂದರ್ಭ ಮುಖ್ಯಮಂತ್ರಿ ಬಿಪ್ಲವ್ ದೇವ್ ಅವರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇಬ್ ಅವರನ್ನು ಸಚಿವ ಹುದ್ದೆಯಿಂದ ವಜಾ ಮಾಡಬೇಕು ಮತ್ತು ಮಹಿಳಾ ಸಚಿವೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿಸಬೇಕು ಎಂದು ಎಡರಂಗದ ಸಂಚಾಲಕ ಬಿಜನ್ ಧರ್ ಅವರು ಆಗ್ರಹಿಸಿದ್ದಾರೆ. ಈ ಆಗ್ರಹವನ್ನು ತಿರಸ್ಕರಿಸಿರುವ ಬಿಜೆಪಿ,ಎಡರಂಗವು ಪಕ್ಷದ ಸಚಿವರ ಚಾರಿತ್ರ್ಯ ಹನನದಲ್ಲಿ ತೊಡಗಿದೆ ಎಂದು ಆರೋಪಿಸಿದೆ.

ದೇಬ್ ಅವರು ಬಹಿರಂಗವಾಗಿಯೇ ಸಚಿವೆಯ ಘನತೆ,ಗಾಂಭೀರ್ಯ ಮತ್ತು ಘನತೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಹೇಳಿರುವ ಸಿಪಿಎಂ ಕೇಂದ್ರ ಸಮಿತಿಯ ಸದಸ್ಯರೂ ಆಗಿರುವ ಧರ್,11 ತಿಂಗಳುಗಳ ಹಿಂದೆ ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಸರಕಾರವು ಅಧಿಕಾರಕ್ಕೆ ಬಂದ ನಂತರ ಹಲವಾರು ಯುವತಿಯರು ಮತ್ತು ಮಧ್ಯವಯಸ್ಕ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಅವರ ಕೊಲೆಗಳು ಮತ್ತು ಅಪಹರಣಗಳು ನಡೆಯುತ್ತಿವೆ. ಸಾರ್ವಜನಿಕ ವೇದಿಕೆಯಲ್ಲಿನ ಇತ್ತೀಚಿನ ಘಟನೆಯು ಖಂಡನೀಯವಾಗಿದೆ ಮತ್ತು ದಂಡನೆಯ ಅಗತ್ಯವಿದೆ ಎಂದಿದ್ದಾರೆ.

ಯುವ ಬುಡಕಟ್ಟು ನಾಯಕಿಯಾಗಿರುವ ಚಕ್ಮಾ ಅವರೊಂದಿಗೆ ಅಸಭ್ಯ ವರ್ತನೆಯನ್ನು ವಿರೋಧಿಸಿ ಮತ್ತು ಸಚಿವರ ವಜಾ ಮತ್ತು ಬಂಧನಕ್ಕೆ ಆಗ್ರಹಿಸಿ ಶೀಘ್ರವೇ ಪ್ರತಿಭಟನೆಗಳನ್ನು ನಡೆಸಲು ಕೆಲವು ಬುಡಕಟ್ಟು ಆಧರಿತ ಪಕ್ಷಗಳು ಪ್ರಯತ್ನಿಸುತ್ತಿವೆ.

ಸುದ್ದಿಗಾರರು ದೂರವಾಣಿ ಮೂಲಕ ದೇಬ್ ಅವರನ್ನು ಸಂಪರ್ಕಿಸಿದ್ದರಾದರೂ ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News