ವಿಮಾನ ಹತ್ತಲು ಅಣಿಯಾಗಿದ್ದ ಅಖಿಲೇಶ್ ಯಾದವ್‌ರನ್ನು ವಶಕ್ಕೆ ಪಡೆದ ಉ.ಪ್ರದೇಶ ಪೊಲೀಸ್!

Update: 2019-02-12 09:51 GMT

ಲಕ್ನೋ,ಫೆ.12: ಪ್ರಯಾಗ್‌ರಾಜ್ ನಗರಕ್ಕೆ ತೆರಳಲು ವಿಶೇಷ ವಿಮಾನವನ್ನು ಏರುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ತನ್ನನ್ನು ತಡೆದು ಲಕ್ನೋ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ತಿಳಿಸಿದ್ದಾರೆ.

ಅಖಿಲೇಶ್ ಇಂದು ಮಧ್ಯಾಹ್ನ ಅಲಹಾಬಾದ್ ವಿವಿಯ ಸಮಾಜವಾದಿ ಪಕ್ಷದ ವಿದ್ಯಾರ್ಥಿ ಸಂಘಟನೆಗಳ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲಕ್ನೋದಿಂದ 201 ಕಿ.ಮೀ.ದೂರದಲ್ಲಿರುವ ಪ್ರಯಾಗ್‌ರಾಜ್‌ಗೆ ಪ್ರಯಾಣಿಸಲು ಏರ್‌ಪೋರ್ಟ್‌ಗೆ ಬಂದಿದ್ದರು.

ವಿಮಾನದ ಬಳಿ ನಿಂತಿದ್ದ ಪೊಲೀಸರು ವಿಮಾನ ಹತ್ತದಂತೆ ಅಡ್ಡನಿಂತಿರುವ ಫೋಟೊವನ್ನು ಅಖಿಲೇಶ್ ಟ್ವೀಟ್ ಮಾಡಿದ್ದಾರೆ.

ಲಕ್ನೋ ಏರ್‌ಪೋರ್ಟ್ ಒಳಗೆ ಪ್ರವೇಶಿಸಲು ಸಿವಿಲ್ ಡ್ರೆಸ್‌ನಲ್ಲಿದ್ದ ವ್ಯಕ್ತಿಯೊಬ್ಬ ಅಖಿಲೇಶ್‌ರನ್ನು ಮೊದಲಿಗೆ ತಡೆದಾಗ ಆತನೊಂದಿಗೆ ಯಾದವ್ ವಾಗ್ವಾದ ನಡೆಸಿದ್ದರು. ನನ್ನ ಮೇಲೆ ಕೈ ಹಾಕಬೇಡ ಎಂದು ಯಾದವ್ ಕೂಗಾಡಿದರು. ಆಗ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಹಿಂದಕ್ಕೆ ತಳ್ಳಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಯಾವುದೇ ಲಿಖಿತ ಆದೇಶದ ಪ್ರತಿಯಿಲ್ಲದೆ ನನಗೆ ವಿಮಾನ ಏರದಂತೆ ತಡೆಯೊಡ್ಡಲಾಗಿದೆ. ನಾನೀಗ ಲಕ್ನೋ ಏರ್‌ಪೋರ್ಟ್‌ನಲ್ಲಿದ್ದೇನೆ. ವಿದ್ಯಾರ್ಥಿ ಸಂಘಟನೆಯ ಪ್ರಮಾಣ ವಚನ ಸಮಾರಂಭಕ್ಕೆ ಸರಕಾರ ಎಷ್ಟೊಂದು ಬೆದರಿದೆ ಎಂದು ಇದರಿಂದ ಸ್ಪಷ್ಟವಾಗುತ್ತದೆ. ನಮ್ಮ ಮಹಾನ್ ದೇಶದ ಯುವಕರು ಅನ್ಯಾಯವನ್ನು ಸಹಿಸುವುದಿಲ್ಲ ಎಂಬ ವಿಚಾರ ಬಿಜೆಪಿಗೆ ಗೊತ್ತಿದೆ ಎಂದು ಯಾದವ್ ಹೇಳಿದ್ದಾರೆ.

 ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ವಿವಾದವಿದ್ದು ಅಖಿಲೇಶ್ ಯಾದವ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದರೆ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದು ಅಲಹಾಬಾದ್ ವಿವಿ ನನ್ನಲ್ಲಿ ಮನವಿ ಮಾಡಿತ್ತು. ಸಮಾಜವಾದಿ ಪಕ್ಷ ತನ್ನ ಅರಾಜಕತವಾದಿ ಚಟುವಟಿಕೆಯಿಂದ ದೂರಯಿರಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಅಖಿಲೇಶ್ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಏರ್‌ಪೋರ್ಟ್‌ನತ್ತ ಧಾವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News