ಮೋದಿ ರಫೇಲ್ ಒಪ್ಪಂದ ಘೋಷಿಸುವ ಮುನ್ನ ಫ್ರೆಂಚ್ ರಕ್ಷಣಾ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿದ್ದ ಅನಿಲ್ ಅಂಬಾನಿ

Update: 2019-02-12 11:37 GMT

ಹೊಸದಿಲ್ಲಿ, ಫೆ.12: ಫ್ರಾನ್ಸ್ ದೇಶದಿಂದ ಭಾರತ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡುವುದಕ್ಕಿಂತ 15 ದಿನಗಳ ಮುಂಚೆ, ಅಂದರೆ 2015ರ ಮಾರ್ಚ್ 4ನೇ ವಾರದಲ್ಲಿ ಉದ್ಯಮಿ ಅನಿಲ್ ಅಂಬಾನಿ ಆಗಿನ ಫ್ರಾನ್ಸ್ ರಕ್ಷಣಾ ಸಚಿವ ಜೀನ್-ಯೆವೆಸ್ ಲೆ ಡ್ರಿಯಾನ್ ಅವರ ಪ್ಯಾರಿಸ್ ಕಚೇರಿಗೆ ಭೇಟಿ ನೀಡಿದ್ದರು. ಅವರ ಉನ್ನತ ಸಲಹೆಗಾರರ ಜತೆ ಮಾತುಕತೆ ನಡೆಸಿದ್ದರೆಂದು ತಿಳಿದು ಬಂದಿದೆಯೆಂದು ‘ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿದೆ.

ಸಭೆಯಲ್ಲಿ ಸಚಿವರ ವಿಶೇಷ ಸಲಹೆಗಾರ ಜೀನ್-ಕ್ಲಾಡ್ ಮಾಲ್ಲೆಟ್, ಕೈಗಾರಿಕಾ ಸಲಹೆಗಾರ ಕ್ರಿಸ್ಟೋಫರ್ ಸಲೋಮೋನ್ ಹಾಗೂ ಕೈಗಾರಿಕಾ ವ್ಯವಹಾರಗಳ ತಾಂತ್ರಿಕ ಸಲಹೆಗಾರ ಜೆಫ್ರಿ ಬೌಖೊಟ್ ಹಾಜರಿದ್ದರೆನ್ನಲಾಗಿದೆ.

“ಅಂಬಾನಿಯ ಈ ಸಭೆ ಬಹಳ ಗೌಪ್ಯವಾಗಿತ್ತು ಹಾಗೂ ಅದಕ್ಕಿಂತ ಸ್ವಲ್ಪವೇ ಸಮಯಕ್ಕಿಂತ ಮುಂಚಿತವಾಗಿ ನಿಗದಿಯಾಗಿತ್ತು'' ಎಂದು ಸಲೋಮೋನ್ ಅವರು ಯುರೋಪಿಯನ್ ಡಿಫೆನ್ಸ್ ಕಂಪೆನಿಯ ಹಿರಿಯ ಅಧಿಕಾರಿ ಬಳಿ ಮಾತನಾಡುವಾಗ ಹೇಳಿದ್ದರೆನ್ನಲಾಗಿದೆ.

ವಾಣಿಜ್ಯ ಬಳಕೆಯ ಮತ್ತು ರಕ್ಷಣಾ ಇಲಾಖೆಯ ಹೆಲಿಕಾಪ್ಟರ್ ನಿರ್ಮಾಣ ಕುರಿತಂತೆ ಏರ್ ಬಸ್ ಹೆಲಿಕಾಪ್ಟರ್ ಜತೆ ಸೇರಿ ಕೆಲಸ ಮಾಡುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದರೆಂದು ಹಾಗೂ ಪ್ರಧಾನಿ ಭೇಟಿಯ ವೇಳೆ ಒಂದು ಒಪ್ಪಂದಕ್ಕೆ ಸಹಿ ಹಾಕುವ ಯೋಚನೆಯ ಬಗ್ಗೆಯೂ ಹೇಳಿದ್ದರೆಂದು ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ.

ಅನಿಲ್ ಅಂಬಾನಿ ಫ್ರೆಂಚ್ ರಕ್ಷಣಾ ಸಚಿವರ ಕಚೇರಿಗೆ ಭೇಟಿ ನೀಡಿದಾಗ ಭಾರತದ ಪ್ರಧಾನಿ ಫ್ರಾನ್ಸ್ ಗೆ ಎಪ್ರಿಲ್ 9-11, 2015ರಲ್ಲಿ ಅಧಿಕೃತ  ಭೇಟಿ ನೀಡುವ ವಿಚಾರ ತಿಳಿದಿತ್ತು. ಮುಂದೆ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಾದ ಘೋಷಣೆ ಮಾಡುವ ಸಲುವಾಗಿ ಫ್ರಾನ್ಸ್ ಗೆ ಪ್ರಧಾನಿ ಭೇಟಿ ನೀಡಿದಾಗ ಅವರ ನಿಯೋಗದಲ್ಲಿ ಅನಿಲ್ ಅಂಬಾನಿ ಕೂಡ ಇದ್ದರು.

ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಸಂಸ್ಥೆ ಕೂಡ ಅವರು ಫ್ರೆಂಚ್ ರಕ್ಷಣಾ ಸಚಿವರ ಕಚೇರಿಯಲ್ಲಿ ಮಾತುಕತೆ ನಡೆಸಿದ ವಾರವೇ, ಅಂದರೆ ಮಾರ್ಚ್ 28, 2015ರಂದು ಅಸ್ತಿತ್ವಕ್ಕೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News