ದ್ರಾವಿಡ್ ಪ್ರಭಾವ: ಯುವಕರಿಗೆ ಮಾಜಿ ಆಟಗಾರರನ್ನು ಕೋಚ್ ಆಗಿಸಲು ಪಾಕ್ ಯೋಜನೆ

Update: 2019-02-13 08:18 GMT
ಪಾಕಿಸ್ತಾನ ಮಾಜಿ ನಾಯಕ ಯೂನಿಸ್ ಖಾನ್‌

ಕರಾಚಿ, ಫೆ.13: ರಾಹುಲ್ ದ್ರಾವಿಡ್ ಸಾಧನೆಯಿಂದ ಪ್ರೇರಣೆ ಪಡೆದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ದೇಶದ ಎಲ್ಲ ವಯೋಮಿತಿಯ ತಂಡಗಳ ಕೋಚ್ ಹಾಗೂ ಮ್ಯಾನೇಜರ್‌ಗಳಾಗಿ ಕೆಲವು ಮಾಜಿ ಆಟಗಾರರನ್ನು ನೇಮಿಸಲು ಯೋಜನೆ ಹಾಕಿಕೊಂಡಿದೆ.

ರಾಹುಲ್ ದ್ರಾವಿಡ್ ಭಾರತದ ಅಂಡರ್-19 ತಂಡ ಹಾಗೂ ಭಾರತ ‘ಎ’ ತಂಡದ ಕೋಚ್ ಆಗಿ ಯಶಸ್ಸು ಪಡೆದಿದ್ದಾರೆ. ಕಳೆದ ವರ್ಷ ಭಾರತ ದ್ರಾವಿಡ್ ಮಾರ್ಗದರ್ಶನದಲ್ಲಿ ಅಂಡರ್-19 ವಿಶ್ವಕಪ್‌ನ್ನು ಜಯಿಸಿತ್ತು. ಇದರಿಂದ ಪ್ರಭಾವಿತವಾಗಿರುವ ಪಿಸಿಬಿ, ಮಾಜಿ ನಾಯಕ ಯೂನಿಸ್ ಖಾನ್‌ರನ್ನು ಪಾಕ್‌ನ ಅಂಡರ್-19 ತಂಡದ ಕೋಚ್ ಹಾಗೂ ಮ್ಯಾನೇಜರ್ ಆಗಿ ನೇಮಿಸಲು ಮುಂದಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 10,000ಕ್ಕೂ ಅಧಿಕ ರನ್ ಗಳಿಸಿದ ಪಾಕ್‌ನ ಮೊದಲ ದಾಂಡಿಗನಾಗಿರುವ ಯೂನಿಸ್ ಕಳೆದ ವರ್ಷ ನಿವೃತ್ತಿಯಾಗಿದ್ದಾರೆ. ಕ್ರಿಕೆಟ್ ಮಂಡಳಿ ತನ್ನ ಕಾರ್ಯಕ್ರಮ ಜಾರಿಗೆ ತರಲು ಸಂಪೂರ್ಣ ಸ್ವಾತಂತ್ರ ನೀಡಿದರೆ ಯುವಕರಿಗೆ ಕೋಚ್ ನೀಡಲು ಸಿದ್ಧ ಎಂದು ಯೂನಿಸ್ ಈಗಾಗಲೇ ತನ್ನ ಕೋಚ್ ಹುದ್ದೆ ಮೇಲಿನ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

‘‘ಆಸ್ಟ್ರೇಲಿಯ ತಂಡ ತನ್ನ ಮಾಜಿ ಅಗ್ರ ಆಟಗಾರರಾದ ರಾಡ್ನಿ ಮಾರ್ಷ್, ಅಲನ್ ಬಾರ್ಡರ್ ಹಾಗೂ ರಿಕಿ ಪಾಂಟಿಂಗ್ ಸೇವೆಯನ್ನು ಬಳಸಿಕೊಂಡಿದೆ. ಭಾರತ ಕೂಡ ಅಂಡರ್-19 ಆಟಗಾರರಿಗೆ ಕೋಚ್ ನೀಡುವ ಜವಾಬ್ದಾರಿಯನ್ನು ದ್ರಾವಿಡ್‌ಗೆ ವಹಿಸಿದೆ. ಇದರಿಂದ ಉತ್ತಮ ಫಲಿತಾಂಶ ಕೂಡ ಬಂದಿದೆ’’ಎಂದು ಪಿಸಿಬಿ ಅಧ್ಯಕ್ಷ ಎಹ್ಸಾನ್ ಮಣಿ ಹೇಳಿದ್ದಾರೆ.

 ಪಾಕ್ ಕ್ರಿಕೆಟ್ ಮಂಡಳಿ ಅಂಡರ್-19 ತಂಡದ ಕೋಚ್‌ಗಳು ಹಾಗೂ ಮ್ಯಾನೇಜರ್‌ಗಳನ್ನು ಕಳಪೆ ನಿರ್ವಹಣೆ ತೋರಿದ್ದಾರೆಂಬ ಕಾರಣಕ್ಕೆ ಬದಲಿಸುತ್ತಾ ಬಂದಿದೆ. ಯುವ ತಂಡಗಳಿಗೆ ಮಾಜಿ ಶ್ರೇಷ್ಠ ಆಟಗಾರರನ್ನು ಕೋಚ್ ಹಾಗೂ ಮ್ಯಾನೇಜರ್ ಆಗಿ ನೇಮಿಸುವುದಕ್ಕೆ ಪಿಸಿಬಿ ಈತನಕ ಒಲವು ತೋರಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News