ಮೂಲೆಯಲ್ಲಿ ಕೂರುವ ಶಿಕ್ಷೆ ವಿಧಿಸಬೇಕಾದದ್ದು ಯಾರಿಗೆ?

Update: 2019-02-14 04:39 GMT

ಶಾಲೆಯ ಶಿಸ್ತನ್ನು ಉಲ್ಲಂಘಿಸಿದರೆ ಅಥವಾ ಹೇಳಿದ ಹೋಮ್‌ವರ್ಕ್ ಮಾಡಿಕೊಂಡು ಬರದೇ ಇದ್ದರೆ ಮೇಷ್ಟ್ರುಗಳು ಅಂತಹ ಬೇಜವಾಬ್ದಾರಿ ವಿದ್ಯಾರ್ಥಿಗಳನ್ನು ತರಗತಿಯ ಮೂಲೆಯಲ್ಲಿ ಕುಕ್ಕರು ಗಾಲಲ್ಲಿ ಕೂರಿಸುವ ಪರಿಪಾಠವಿದೆ. ಎಲ್ಲ ವಿದ್ಯಾರ್ಥಿಗಳ ಎದುರು ಆತನಿಗಾಗುವ ಅವಮಾನ ಊಹಿಸಲಸಾಧ್ಯ. ಇದನ್ನು ಕೆಲವೊಮ್ಮೆ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಯಥಾವತ್ತಾಗಿ ಪಾಲಿಸುತ್ತಾರೆ. ಸುಳ್ಳು ಸಾಕ್ಷಿ ಹೇಳಿ ಸಿಕ್ಕಿ ಬಿದ್ದರೆ ಅಂಥವನನ್ನು ಕುಕ್ಕರುಗಾಲಲ್ಲಿ ಕೂರಿಸುವುದು ಅಥವಾ ಸಂಜೆಯವರೆಗೆ ನ್ಯಾಯಾಧೀಶರ ಮುಂದೆ ಕೈ ಕಟ್ಟಿ ನಿಲ್ಲಿಸುವುದು ಆಗಾಗ ನ್ಯಾಯಾಲಯದೊಳಗೆ ನಡೆಯುತ್ತಿರುತ್ತವೆ. ಇಂತಹ ಶಿಕ್ಷೆಗಳೆಲ್ಲ ಪುಡಿಗಳ್ಳರಿಗೆ ನೀಡಲಾಗುತ್ತದೆ. ಆದರೆ ನರೇಂದ್ರ ಮೋದಿಯವರ ಭಾರತದಲ್ಲಿ, ಇಂತಹದೊಂದು ಶಿಕ್ಷೆಯನ್ನು ಈ ದೇಶದ ಶ್ರೇಷ್ಠ ತನಿಖಾ ಸಂಸ್ಥೆಯ ನೇತೃತ್ವವನ್ನು ವಹಿಸಿದ್ದ ಅಧಿಕಾರಿಗೆ ಸುಪ್ರೀಂಕೋರ್ಟ್ ನೀಡಿತು. ಬಿಹಾರ ಆಶ್ರಯ ಧಾಮದ ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಸಿಬಿಐಯ ಜಂಟಿ ನಿರ್ದೇಶಕ ಅರುಣ್ ಕುಮಾರ್ ಶರ್ಮಾ ಅವರನ್ನು ವರ್ಗಾಯಿಸಬಾರದು ಎಂಬ ತನ್ನ ಆದೇಶವನ್ನು ಪಾಲಿಸದ ಸಿಬಿಐ ಮಾಜಿ ವರಿಷ್ಠರಿಗೆ ದಂಡ ವಿಧಿಸಿದ್ದು ಮಾತ್ರವಲ್ಲ, ಒಬ್ಬ ಪುಡಿ ರೌಡಿಗೆ ನೀಡಬಹುದಾದ ಅತ್ಯಂತ ಅವಮಾನಕಾರಿ ಶಿಕ್ಷೆಯನ್ನು ಸುಪ್ರೀಂಕೋರ್ಟ್ ವಿಧಿಸಿತು. ಒಂದು ಲಕ್ಷ ರುಪಾಯಿ ದಂಡ ಮತ್ತು ನ್ಯಾಯಾಲಯದ ಮೂಲೆಯಲ್ಲಿ ಕುಳಿತುಕೊಳ್ಳುವ ಶಿಕ್ಷೆ ಅದು. ಸಂವಿಧಾನದ ಘನತೆಯನ್ನು ಅರಿತೂ ಅದನ್ನು ಉಲ್ಲಂಘಿಸಿದ ಅಧಿಕಾರಿ ಈ ಶಿಕ್ಷೆಗೆ ಸರ್ವ ರೀತಿಯಲ್ಲಿ ಅರ್ಹರಾಗಿದ್ದಾರೆ. ಆದರೆ ಇದರಿಂದಾಗಿ ಈಗಾಗಲೇ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವ ಸಿಬಿಐ ಸಂಸ್ಥೆ ಇನ್ನಷ್ಟು ಅವಮಾನವನ್ನು ಅನುಭವಿಸಿತು. ರಾಜಕಾರಣಿಗಳ ಮೂಗಿನ ನೇರಕ್ಕೆ ಕಾರ್ಯನಿರ್ವಹಿಸುತ್ತಾ ಸಂವಿಧಾನವನ್ನು ಬಹಿರಂಗವಾಗಿಯೇ ಧಿಕ್ಕರಿಸ ತೊಡಗಿರುವ ಅಧಿಕಾರಿಗಳಿಗೆ ಇದು ಭಾರೀ ಎಚ್ಚರಿಕೆಯೇ ಸರಿ.

ನಿನ್ನೆ ನ್ಯಾಯಾಲಯದ ಮೂಲೆಯಲ್ಲಿ ನಿಜಕ್ಕೂ ಕೂತದ್ದು ಯಾರು? ನಾಗೇಶ್ವರ ರಾವ್ ಅವರೇ? ಅಥವಾ ಸಿಬಿಐ ಸಂಸ್ಥೆಯೇ? ಅಥವಾ ಸಿಬಿಐ ಸಂಸ್ಥೆಗೆ ಇಂತಹದೊಂದು ದೈನೇಸಿ ಸ್ಥಿತಿಯನ್ನು ತಂದಿಟ್ಟ ಪ್ರಧಾನಿ ನರೇಂದ್ರ ಮೋದಿಯವರೇ? ಒಂದು ಅರ್ಥದಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು ನಾಗೇಶ್ವರರಾವ್‌ಗಲ್ಲ. ಅವರನ್ನು ತನ್ನ ಕೈಗೊಂಬೆಯಾಗಿ ಕುಣಿಸಿದ ಪ್ರಧಾನಿ ನರೇಂದ್ರ ಮೋದಿಗೆ. ಶಿಕ್ಷೆ ಅನುಭವಿಸಿದ್ದು ನಾಗೇಶ್ವರರಾವ್ ಅವರೇ ಇರಬಹುದು, ಆದರೆ ಅವಮಾನವಾಗಿದ್ದು ಪ್ರಧಾನಿ ಮೋದಿಯವರಿಗೆ. ಕಳೆದ ಕೆಲವು ತಿಂಗಳಲ್ಲಿ ಸಿಬಿಐ ಸಂಸ್ಥೆಯನ್ನು ಪ್ರಧಾನಿ ಮೋದಿಯವರು ನಡೆಸಿಕೊಂಡ ರೀತಿಯನ್ನು ದೇಶ ಬೆಕ್ಕಸಬೆರಗಾಗಿ ನೋಡಿತ್ತು. ಆರಂಭದಲ್ಲಿ ಐಟಿ ಅಧಿಕಾರಿಗಳನ್ನು ಬಳಿಕ ಸಿಬಿಐ ಅಧಿಕಾರಿಗಳನ್ನು ಸರಕಾರ ಗುಟ್ಟಾಗಿ ತನ್ನ ವಿರೋಧಿಗಳ ಮೇಲೆ ಬಳಸತೊಡಗಿತು. ಸರಕಾರದ ಗುಲಾಮರಂತೆ ಅಥವಾ ಬಿಜೆಪಿಯ ಕಾರ್ಯಕರ್ತರಂತೆ ಸಿಬಿಐ ಅಧಿಕಾರಿಗಳನ್ನು ದುಡಿಸಿಕೊಂಡಿತು. ಆದರೆ ಯಾವಾಗ ಸಿಬಿಐ ಪ್ರಧಾನಿಯ ವಿರುದ್ಧ ಪಂಜ ಎತ್ತುವುದಕ್ಕೆ ಯತ್ನಿಸಿತೋ ಆಗ ಸಿಬಿಐಯ ವಿರುದ್ಧವೇ ಸಿಬಿಐಯನ್ನು ಸರಕಾರ ಛೂ ಬಿಟ್ಟರು.

ಅಲೋಕ್ ವರ್ಮಾ ಅವರು ರಫೇಲ್ ಹಗರಣವನ್ನು ತನಿಖೆ ನಡೆಸಬಹುದೆಂಬ ಭಯದಿಂದ ಸಿಬಿಐಯೊಳಗೆ ತನ್ನ ಮೂಗಿನ ನೇರಕ್ಕೆ ಕೆಲಸ ನಿರ್ವಹಿಸುವ ಅಧಿಕಾರಿಯನ್ನು ತಂದು ಕೂರಿಸಿತು. ಈ ನೇಮಕಕ್ಕೆ ಸಿಬಿಐಯೊಳಗೇ ವಿರೋಧವಿತ್ತು. ನೇಮಕಗೊಂಡಿದ್ದ ಅಸ್ತಾನ ವಿರುದ್ಧ ಭ್ರಷ್ಟಾಚಾರ ಆರೋಪವಿತ್ತು. ಇಂತಹ ಆರೋಪವನ್ನು ಹೊತ್ತುಕೊಂಡ ಅಧಿಕಾರಿ ಇನ್ನೊಬ್ಬ ಭ್ರಷ್ಟಾಚಾರಿಯ ವಿರುದ್ಧ ತನಿಖೆ ನಡೆಸಲು ಹೇಗೆ ಸಾಧ್ಯ? ಅಲೋಕ್‌ವರ್ಮಾ ಆತನ ವಿರುದ್ಧ ಪ್ರಕರಣ ದಾಖಲಿಸಿದಾಗ ಅದನ್ನು ‘ಸಿಬಿಐ ಸಂಸ್ಥೆಯೊಳಗಿನ ಜಟಾಪಟಿ’ ಎಂದು ಸರಕಾರ ಕರೆಯಿತು. ಅದೇ ನೆಪದಲ್ಲಿ ಪ್ರಧಾನಿ ಮೋದಿ ಇಬ್ಬರು ಅಧಿಕಾರಿಗಳನ್ನು ರಜೆಯ ಮೇಲೆ ಕಳುಹಿಸಿ ಆ ಸ್ಥಾನಕ್ಕೆ ನಾಗೇಶ್ವರರಾವ್ ಅವರನ್ನು ತಂದರು. ಇವರ ಮೇಲೂ ಭ್ರಷ್ಟಾಚಾರದ ಆರೋಪಗಳಿದ್ದುದು ಇನ್ನೊಂದು ಗಮನೀಯ ಅಂಶ. ಬಳಿಕ ಸುಪ್ರೀಂಕೋರ್ಟ್ ವರ್ಮಾ ಅವರನ್ನು ಮರುನೇಮಕಗೊಳಿಸಿತು. ಸುಪ್ರೀಂಕೋರ್ಟ್ ತೀರ್ಪು ಹೊರ ಬಿದ್ದ ಬಳಿಕವಾದರೂ ತನ್ನನ್ನು ತಾನು ತಿದ್ದಿಕೊಳ್ಳುವುದಕ್ಕೆ ಮತ್ತು ಸಿಬಿಐಯ ಘನತೆಯನ್ನು ಕಾಪಾಡುವುದಕ್ಕೆ ಸರಕಾರಕ್ಕೆ ಅವಕಾಶವಿತ್ತು. ಆದರೆ ಸುಪ್ರೀಂಕೋರ್ಟ್‌ಗೇ ಸಡ್ಡು ಹೊಡೆಯುವಂತೆ ಅಡ್ಡ ದಾರಿ ಹಿಡಿದು, ವರ್ಮಾ ಅವರನ್ನು ಸರಕಾರ ಮತ್ತೆ ವರ್ಗಾವಣೆಗೊಳಿಸಿತು. ತನ್ನ ವೃತ್ತಿಗೆ ರಾಜೀನಾಮೆ ನೀಡಿ ತನ್ನ ಸ್ಥಾನದ ಘನತೆಯನ್ನು ವರ್ಮಾ ಉಳಿಸಿಕೊಂಡರು. ರಫೇಲ್ ಹಗರಣದಲ್ಲಿ ತನ್ನನ್ನು ತಾನು ಸಾಚಾ ಎಂದು ಹೇಳಿಕೊಳ್ಳುತ್ತಿರುವ ಸರಕಾರ ವರ್ಮಾ ಅವರಿಗೆ ಯಾಕೆ ಅಷ್ಟೊಂದು ಹೆದರಿತು.? ಒಂದು ವೇಳೆ ತಾನು ತಪ್ಪನ್ನೇ ಮಾಡಿರದಿದ್ದರೆ ತನಿಖೆಗೆ ಯಾಕೆ ಹೆದರಬೇಕು? ವರ್ಮಾ ಅವರನ್ನು ಮನೆಗೆ ಕಳುಹಿಸುವ ಮೂಲಕ, ಸಿಬಿಐಯನ್ನು ಸಂಪೂರ್ಣವಾಗಿ ತನ್ನ ಅಡಿಯಾಳಾಗಿಸಿ ರಫೇಲ್ ಹಗರಣದಲ್ಲಿ ತಾನು ಅಪರಾಧಿ ಎನ್ನುವುದನ್ನು ಪ್ರಧಾನಿಯೇ ಘೋಷಿಸಿದಂತಾಗಿದೆ. ಸಂವಿಧಾನಕ್ಕಿಂತ, ನ್ಯಾಯಾಲಯಕ್ಕಿಂತ ಪ್ರಧಾನಿ ಮೋದಿ ದೊಡ್ಡವರು ಎಂಬ ಭ್ರಮೆಯಿಂದ ಕಾರ್ಯನಿರ್ವಹಿಸಿದ ಸಿಬಿಐ ಅಧಿಕಾರಿಗಳು ಮನಬಂದಂತೆ ಅಧಿಕಾರವನ್ನು ಚಲಾಯಿಸತೊಡಗಿದರು. ಯಾವ ಯಾವ ಅಧಿಕಾರಿಗಳು ಸರಕಾರಕ್ಕೆ ನಿಷ್ಠರಾಗಿಲ್ಲವೋ ಅವರೆಲ್ಲರನ್ನೂ ವರ್ಗಾವಣೆ ಮಾಡತೊಡಗಿದರು. ಯಾವ ಪ್ರಕರಣದಲ್ಲಿ ಯಾವ ಅಧಿಕಾರಿ ಇರಬೇಕು ಎನ್ನುವುದನ್ನು ನಿರ್ಧರಿಸತೊಡಗಿದರು. ಒಂದು ರೀತಿಯಲ್ಲಿ ಈ ಅಧಿಕಾರಿಗಳು ಅದನ್ನು ಎಸಗಿದರು ಎನ್ನುವುದಕ್ಕಿಂತ ಮೋದಿಯೇ ಅವರ ಮೂಲಕ ತಮ್ಮ ದುರುದ್ದೇಶವನ್ನು ಈಡೇರಿಸಿಕೊಂಡರು ಎನ್ನುವುದೇ ಹೆಚ್ಚು ಸರಿ. ಬಿಹಾರ ಆಶ್ರಯಧಾಮ ಲೈಂಗಿಕ ಕಿರುಕುಳ ಪ್ರಕರಣದ ತನಿಖೆಯ ಉಸ್ತ್ತುವಾರಿ ನೋಡಿಕೊಳ್ಳುತ್ತಿದ್ದ ಸಿಬಿಐಯ ಜಂಟಿ ನಿರ್ದೇಶಕ ಎ. ಕೆ. ಶರ್ಮಾ ಅವರನ್ನು ಸುಪ್ರೀಂಕೋರ್ಟ್‌ನ ಒಪ್ಪಿಗೆಯಿಲ್ಲದೆ ಏಕಪಕ್ಷೀಯವಾಗಿ ವರ್ಗಾವಣೆ ಮಾಡಿರುವುದು ನಾಗೇಶ್ವರ್‌ರಾವ್ ಅವರ ಸ್ವಯಂ ನಿರ್ಧಾರ ಖಂಡಿತ ಆಗಿರಲಿಲ್ಲ. ರಾಜಕೀಯ ಒತ್ತಡ ಇಲ್ಲದೇ ಅಂತಹದೊಂದು ಕೃತ್ಯ ಎಸಗಲು ಅವರಿಗೆ ಧೈರ್ಯ ಬರುತ್ತಿರಲಿಲ್ಲ. ಇದೀಗ ಅವರು ರಾಜಕೀಯ ಬಲಿಪಶುವಾಗಿದ್ದಾರೆ. ರಾಜಕಾರಣಿಗಳ ತಪ್ಪಿಗೆ ನಾಗೇಶ್ವರ ರಾವ್ ದೋಷಿ ಎನಿಸಿಕೊಂಡಿದ್ದಾರೆ.

ನಿನ್ನೆ ಸುಪ್ರೀಂಕೋರ್ಟ್‌ನಲ್ಲಿ ಸರ್ವರ ಮುಂದೆ ಅವಮಾನಿತರಾಗಿ ನಿಂತಿರುವ ನಾಗೇಶ್ವರರಾವ್ ಸ್ಥಾನದಲ್ಲಿ ನರೇಂದ್ರ ಮೋದಿಯನ್ನು ದೇಶ ಕಲ್ಪಿಸಿಕೊಂಡಿದೆ. ಆದರೆ ಲಜ್ಜೆ ಬಿಟ್ಟು ಹೆಜ್ಜೆ ಹಾಕುತ್ತಿರುವವರಲ್ಲಿ ಈ ಶಿಕ್ಷೆ ಬದಲಾವಣೆಯನ್ನು ತರಬಹುದು ಎಂದು ನಿರೀಕ್ಷಿಸುವುದು ಕಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News