ಮಹಾನ್ ದಳ ಜತೆ ಕಾಂಗ್ರೆಸ್ ಮೈತ್ರಿ: ಪ್ರಿಯಾಂಕಾ ಗಾಂಧಿ ಘೋಷಣೆ

Update: 2019-02-14 04:05 GMT

ಲಕ್ನೋ, ಫೆ. 14: ಉತ್ತರ ಪ್ರದೇಶದಲ್ಲಿ ಕೇಶವ್ ದೇವ್ ಮೌರ್ಯ ನೇತೃತ್ವದ ಹಿಂದುಳಿದ ವರ್ಗ ಪ್ರಾಬಲ್ಯವಿರುವ ಮಹಾನ್ ದಳ ಜತೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಪೂರ್ವ ಉತ್ತರ ಪ್ರದೇಶ ಉಸ್ತುವಾರಿ ಹೊಂದಿರುವ ಪ್ರಿಯಾಂಕಾ ಗಾಂಧಿ ಪ್ರಕಟಿಸಿದ್ದಾರೆ.

"ಮೌರ್ಯ ಅವರನ್ನು ನಾವು ಸ್ವಾಗತಿಸುತ್ತೇವೆ. ಅವರ ಪಕ್ಷ ಚುನಾವಣೆಗೆ ನಮ್ಮೊಂದಿಗೆ ಸೇರಿ ಸ್ಪರ್ಧೆ ನಡೆಸಲಿದೆ. ಎಲ್ಲ ವರ್ಗಗಳಿಗೆ ಪ್ರಾತಿನಿಧ್ಯ ನೀಡುವ ರಾಜಕೀಯ ವ್ಯವಸ್ಥೆಯನ್ನು ಸೃಷ್ಟಿಸುವ ಕಾರ್ಯಸೂಚಿಯನ್ನು ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿ ನಮಗೆ ನೀಡಿದ್ದಾರೆ" ಎಂದು ಕಾಂಗ್ರೆಸ್ ಪಕ್ಷದ ಲಕ್ನೋ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷ ಸ್ವಂತ ಬಲದಲ್ಲಿ ಎಲ್ಲ 80 ಸ್ಥಾನಗಳಿಗೆ ಸ್ಪರ್ಧಿಸಲಿದೆ ಎಂಬ ಸುಳಿವನ್ನು ಪ್ರಿಯಾಂಕಾ ಅವರ ಈ ಹೇಳಿಕೆ ನೀಡಿದೆ. ಆದರೆ ಎಸ್ಪಿ- ಬಿಎಸ್ಪಿ ಜತೆ ರಾಜ್ಯದಲ್ಲಿ ಇನ್ನೂ ಸಂಧಾನ ಮಾತುಕತೆ ನಡೆಯುವ ಸಾಧ್ಯತೆ ಇದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. ಅಧ್ಯಕ್ಷ ಕೇಶವದೇವ್ ಮೌರ್ಯ ನೇತೃತ್ವದ, ಹಿಂದುಳಿದ ವರ್ಗದ ಪ್ರಾಬಲ್ಯ ಇರುವ ಮಹಾನ್ ದಳ ಉತ್ತರ ಪ್ರದೇಶದಲ್ಲಿ ರಾಜ್ಯಾದ್ಯಂತ ಅಸ್ತಿತ್ವ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News