ಜಾರ್ಖಂಡ್‌ನಲ್ಲಿ ಪಾಪ್ಯುಲರ್ ಫ್ರಂಟ್ ಮೇಲಿನ ನಿಷೇಧವನ್ನು ಹಿಂಪಡೆಯಲು ಮೌಲಾನ ವಲಿ ರಹ್ಮಾನಿ ಒತ್ತಾಯ

Update: 2019-02-14 06:04 GMT

ಹೊಸದಿಲ್ಲಿ, ಫೆ. 14: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಜಾರ್ಖಂಡ್ ಸರಕಾರ ವಿಧಿಸಿರುವ ನಿಷೇಧ ಹಿಂಪಡೆಯ ಬೇಕು ಎಂದು ಇಮಾರಾತ್-ಎ-ಶರಿಯಾ ಬಿಹಾರ, ಜಾರ್ಖಂಡ್ ಮತ್ತು ಒಡಿಶಾದ ಹಿರಿಯ ನಾಯಕರಾದ ಮೌಲಾನಾ ವಲಿ ರಹ್ಮಾನಿ ಅವರು ಒತ್ತಾಯಿಸಿದ್ದಾರೆ. 

ಜಾರ್ಖಂಡ್ ಸರಕಾರವು ತನ್ನ ಸರ್ಕಾರಿ ಅಧಿಸೂಚನೆಯ ಮೂಲಕ ಪಾಪ್ಯುಲರ್ ಫ್ರಂಟ್ ಚಟುವಟಿಕೆಗಳ ಮೇಲೆ  ಮತ್ತೊಮ್ಮೆ ನಿಷೇಧ ಹೇರಿದೆ ಎಂದು ಮಾಧ್ಯಮದ ಮೂಲಕ ನನ್ನ ಗಮನಕ್ಕೆ ಬಂದಿದೆ. ಈ ಹಿಂದೆಯೂ ಸರ್ಕಾರ ಸಂಘಟನೆಯ ಮೇಲೆ ನಿಷೇಧವನ್ನು ಹೇರಿ, ಸುಳ್ಳು ಮತ್ತು ನಿರಾಧಾರ ಆರೋಪಗಳನ್ನು ಮಾಡಿತ್ತು. ನಂತರ ಆ ಕಾನೂನುಬಾಹಿರ ನಿಷೇಧವನ್ನು ಜಾರ್ಖಂಡ್‌ನ ಗೌರವಾನ್ವಿತ ಹೈಕೋರ್ಟ್ ತಿರಸ್ಕರಿಸಿತ್ತು. ವಿವಿಧ ರೀತಿಯಲ್ಲಿ ದೌರ್ಜನ್ಯಗಳಿಗೆ ಗುರಿಯಾಗಿಸಿರುವ ಜನರ ಧ್ವನಿಗಳನ್ನು ಹತ್ತಿಕ್ಕಲು ಕೇವಲ ನಿರಾಧಾರ ಆರೋಪಗಳನ್ನು ಹೊರಿಸಿ ಈಗ ಮತ್ತೊಮ್ಮೆ ನಿಷೇಧ ಹೇರಲಾಗಿದೆ. ಪ್ರಭುತ್ವ ಭಯೋತ್ಪಾದನೆಯ ಕೃತ್ಯಗಳಿಂದ ಪೀಡಿತ ಜನರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನೆರವನ್ನು ನೀಡುತ್ತಾ ಬಂದಿದೆ. ಈ ನೆರವನ್ನು ತಡೆಯುವ ಸಲುವಾಗಿ ನಿಷೇಧವನ್ನು ಹೇರಲಾಗುತ್ತಿದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರದ ಈ ನಿರ್ಧಾರವು ಅತ್ಯಂತ ಖಂಡನಾರ್ಹವಾದ, ಜನ ವಿರೋಧಿ, ಸಾಂವಿಧಾನಿಕ ವಿರೋಧಿ ಮತ್ತು ಎಲ್ಲರಿಗೂ ಸಮಾನ ನ್ಯಾಯದ ಬೇಡಿಕೆಯ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು. "ಭಾರತದಾದ್ಯಂತ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಸಂಘ ಪರಿವಾರದ ಮೂಲಕ ಉದ್ದೇಶಪೂರ್ವಕವಾಗಿ ಇಂತಹ ಸನ್ನಿವೇಶವನ್ನು ಸೃಷ್ಟಿಸಲಾಗುತ್ತಿವೆ ಎಂದು ನಾನು ದುಃಖದಿಂದ ಹೇಳುತ್ತಿದ್ದೇನೆ" ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News