ಜಮ್ಮುವಿನಲ್ಲಿ ಉಗ್ರರ ದಾಳಿ:ಹುತಾತ್ಮರಾದ ಯೋಧರ ಸಂಖ್ಯೆ 20ಕ್ಕೆ ಏರಿಕೆ

Update: 2019-02-14 13:05 GMT

 ಶ್ರೀನಗರ, ಫೆ.14: ಜಮ್ಮು -ಕಾಶ್ಮೀರದ ಪುಲ್ವಾಮಾ ಜಿಲ್ಲೆಯ  ಅವಂತಿಪೊರಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ  ಸಿಆರ್ ಪಿಎಫ್ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮವಾಗಿ ಹುತಾತ್ಮರಾದ ಯೋಧರ ಸಂಖ್ಯೆ 20ಕ್ಕೇರಿದೆ.

ಈ ದುರ್ಘಟನೆಯಲ್ಲಿ 15ಕ್ಕೂ ಅಧಿಕ ಯೋಧರು ಗಾಯಗೊಂಡಿದ್ದಾರೆ. 2004ರ ಬಳಿಕ ದೊಡ್ಡ ಮಟ್ಟದಲ್ಲಿ  ಉಗ್ರರು ಪೈಶಾಚಿಕ ಕೃತ್ಯ ನಡೆಸಿದ್ದಾರೆ.

ಸಿಆರ್ ಪಿಎಫ್ ಯೋಧರು ಬರುವುದನ್ನು ಖಚಿತಪಡಿಸಿಕೊಂಡಿದ್ದ ಉಗ್ರರು ಆಟೋ ರಿಕ್ಷಾವೊಂದರಲ್ಲಿ ಬಾಂಬ್ ಇಟ್ಟಿದ್ದರು. ಸಿಆರ್ ಪಿಎಫ್ ನ 54ನೇ ಬೆಟಾಲಿಯನ್ ಗೆ ಸೇರಿದ  ಬಸ್  ಬರುತ್ತಿದ್ದಂತೆ ಬಾಂಬ್ ಸ್ಫೋಟಿಸಿದ ಉಗ್ರರು ಬಳಿಕ ಗ್ರೆನೇಡ್ ದಾಳಿ ನಡೆಸಿ , ವಾಹನದ ಮೇಲೆ ಗುಂಡಿನ ಮಳೆಗೆರೆದರು ಎನ್ನಲಾಗಿದೆ.

ಉಗ್ರರ ದಾಳಿಯಿಂದಾಗಿ  ವಾಹನದಲ್ಲಿದ್ದ 20 ಮಂದಿ ಯೋಧರು ಹುತಾತ್ಮರಾದರು. 15 ಮಂದಿ ಯೋಧರು ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿ ಒಟ್ಟು 35 ಮಂದಿ ಯೋಧರು ಜಮ್ಮುವಿನಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.

ಜೈಷ್ ಎ ಮೊಹಮ್ಮದ್  ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಉಗ್ರ ಸಂಘಟನೆಯ ಕಮಾಂಡರ್   ಆದಿಲ್ ಅಹ್ಮದ್  ಈ ಕೃತ್ಯದ ನೇತೃತ್ವ ವಹಿಸಿರುವುದಾಗಿ ಹೇಳಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News